ಗಾಂಜಾ ಸಾಗಾಣಿಕೆ, ಸೇವನೆ ಹಾಗೂ ಓಸಿ ಮಟ್ಕಾ ನಿಯಂತ್ರಣಕ್ಕೆ ಅಗತ್ಯ ಕ್ರಮ :ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ನಿಖಿಲ್

ಸಾಗರ : ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳಾದ ಗಾಂಜಾ ಸಾಗಾಣಿಕೆ, ಸೇವನೆ ಹಾಗೂ ಓಸಿ ಮಟ್ಕಾ ನಿಯಂತ್ರಣಕ್ಕೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಗಾಂಜಾ ಸೇವನೆ ಹಾಗೂ ಸಾಗಾಣಿಕೆ ಕಂಡು ಬಂದರೆ ಇಲಾಖೆಗೆ ತಿಳಿಸಿ, ನಿಮ್ಮ ಹೆಸರನ್ನು ಗೌಪ್ಯವಾಗಿ ಇರಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ನಿಖಿಲ್ ತಿಳಿಸಿದರು.
ಇಲ್ಲಿನ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಈದ್ ಮಿಲಾದ್ ಹಾಗೂ ಗಣಪತಿ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಶಾಂತಿ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ನೀವು ಕೊಡುವ ದೂರು ಸಾಗರ ಠಾಣೆಗೆ ಹೋಗುವುದಿಲ್ಲ. ನೇರವಾಗಿ ಶಿವಮೊಗ್ಗದ ನನ್ನ ಕಚೇರಿಗೆ ಬರುತ್ತದೆ. ಆಗ ಅವರ ಮಟ್ಟಹಾಕಲು ಅನುಕೂಲವಾಗುತ್ತದೆ ಎಂದರು.
ಸಾಗರದಲ್ಲಿ ಸಮಸ್ಯೆ ಏನೇ ಇದ್ದರೂ ಅದಕ್ಕೆ ಕಾರಣವನ್ನೂ ಪತ್ತೆಹಚ್ಚಿ ಇಲಾಖೆಗೆ ನೆರವಾಗುತ್ತಿದ್ದೀರಿ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆ ಜೊತೆಗೆ ಸಾಗರದ ಜನರು ಹೆಚ್ಚಿನ ಸಹಕಾರ ನೀಡುತ್ತಿರುವುದಕ್ಕೆ ಇಲಾಖೆ ನಿಮಗೆ ಧನ್ಯವಾದ ಸಲ್ಲಿಸುತ್ತದೆ. ಈದ್ ಮಿಲಾದ್ ಹಾಗೂ ಗಣಪತಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ಧವಾಗಿ ಆಚರಿಸುವ ನಿಟ್ಟಿನಲ್ಲಿ ಎರಡೂ ಕೋಮಿನವರು ಸಹಕಾರ ನೀಡಬೇಕು ಎಂದರು.
ಶಿವಮೊಗ್ಗದಲ್ಲಿ ಗಾಂಜಾ ಸೇವನೆ ಹಾಗೂ ಸಾಗಾಣಿಕೆಗೆ ಸಂಬಂಧಿಸಿದಂತೆ ಎರಡು ಸಾವಿರಕ್ಕೂ ಹೆಚ್ಚು ದೂರುಗಳು ಬಂದಿದ್ದು ಗಾಂಜಾ ಮಾರಾಟ ಮಾಡುತ್ತಿದ್ದ 200ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲಿಸಿದೆ. ನಶಾಮುಕ್ತ ಸಮಾಜ ನಿರ್ಮಾಣ ಎಲ್ಲರ ಹೊಣೆಯಾಗಿದೆ. ಪೊಲೀಸ್ ಮತ್ತು ಪಬ್ಲಿಕ್ ಒಟ್ಟಾಗಿದ್ದರೇ ಅಪರಾಧಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರ ಮೇಲೆ ಜವಾಬ್ದಾರಿ ಇದೆ. ಶಾಂತಿಸಭೆ ನಂತರ ನಮ್ಮ ಜವಾಬ್ದಾರಿ ಹೆಚ್ಚುತ್ತದೆ. ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದರೆ ತಕ್ಷಣ ಮೊ. 8277982900ಗೆ ಮೆಸೇಜ್ ಮಾಡಿ ಎಂದು ಮನವಿ ಮಾಡಿದರು.
ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಸಂತೋಷ್ ಕುಮಾರ್ ಶೆಟ್ಟಿ,ಸಬ್ ಇನ್ಸ್‌ಪೆಕ್ಟರ್ ಶಾಂತರಾಜ್ ಇನ್ನಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.