ಗೋ ಕಳ್ಳಸಾಗಣೆ ಆರೋಪ: “ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಿ” – ಬಿ.ವೈ. ವಿಜಯೇಂದ್ರ
ಶಿಕಾರಿಪುರ (ಶಿವಮೊಗ್ಗ): ಗೋ ಕಳ್ಳಸಾಗಣೆದಾರರಿಂದ ಗಾಯಗೊಂಡಿರುವ ಬಜರಂಗದಳದ ಕಾರ್ಯಕರ್ತರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶಿಕಾರಿಪುರದ ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಧೈರ್ಯ ತುಂಬಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
“ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಬೇಕು. ಜಾಮೀನು ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು” ಎಂದು ವಿಜಯೇಂದ್ರ ಒತ್ತಾಯಿಸಿದರು.
ಈಗಾಗಲೇ ಶಿವಮೊಗ್ಗ ಎಸ್ಪಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಅವರು, ವಾಹನಗಳನ್ನು ವಶಕ್ಕೆ ಪಡೆದಿರುವುದಷ್ಟೇ ಸಾಕಾಗುವುದಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಘಟನೆ ಹಿನ್ನೆಲೆ
ನಿನ್ನೆ ಮಧ್ಯರಾತ್ರಿ ಹರತಾಳು ಸಮೀಪ ಕೆಲವು ದುಷ್ಕರ್ಮಿಗಳು ಚಂದನ್ ಅವರ ಮನೆಯಿಂದ ಗೋವುಗಳನ್ನು ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರಾದ ಚಂದನ್, ಕಿರಣ್ ಹಾಗೂ ಅಭಿಲಾಷ್ ಅವರು ಎಚ್ಚೆತ್ತು ವಾಹನವನ್ನು ಬೆನ್ನಟ್ಟಿದ್ದಾರೆ ಎಂದು ವಿಜಯೇಂದ್ರ ವಿವರಿಸಿದರು.
ಪೊಲೀಸ್ ತಪಾಸಣಾ ಸ್ಥಳದಲ್ಲಿಯೂ ವಾಹನ ನಿಲ್ಲಿಸದೇ ತೆರಳಿದ್ದು, ಬಳಿಕ ಬಜರಂಗದಳದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗೆ ಪ್ರಯತ್ನಿಸಲಾಗಿದೆ ಎಂದು ಅವರು ಆರೋಪಿಸಿದರು.
ಇಂತಹ ಗಂಭೀರ ಘಟನೆಗಳು ರಾಜ್ಯದ ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನವಾಗಿವೆ ಎಂದು ಟೀಕಿಸಿದ ವಿಜಯೇಂದ್ರ, “ಇದು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

Leave a Comment