ನಾರಾಯಣಗುರು ಶ್ರೇಷ್ಠ ದಾರ್ಶನಿಕ: ಶ್ರೀಧರ್ ಹುಲ್ತಿಕೊಪ್ಪ

ಶಿವಮೊಗ್ಗ: ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿಯನ್ನು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘ ಹಾಗೂ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಈಡಿಗರ ಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ, ನಾರಾಯಣಗುರುಗಳು ಶೋಷಿತ ಸಮುದಾಯದಲ್ಲಿ ಆತ್ಮವಿಶ್ವಾಸ ಹಾಗೂ ಶಕ್ತಿ ತುಂಬಿದ ಮಹಾನ್ ದಾರ್ಶನಿಕರು ಎಂದು ಹೇಳಿದರು.

ಶಿಕ್ಷಣದಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂಬ ಸಂದೇಶವನ್ನು ಸಾರಿದ ನಾರಾಯಣಗುರುಗಳು, ತಳವರ್ಗದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅನೇಕ ಸುಧಾರಣಾ ಕಾರ್ಯಗಳನ್ನು ಕೈಗೊಂಡಿದ್ದರು. ಅವರ ತತ್ವಾದರ್ಶಗಳು ಸದಾ ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಈಡಿಗ ಸಂಘದ ಗೌರವಾಧ್ಯಕ್ಷರೂ ಆಗಿರುವ ಬೇಳೂರು ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಜಿಲ್ಲಾ ಮಂತ್ರಿಗಳು ಹಾಗೂ ಸಮಾಜದ ಎಲ್ಲ ಮುಖಂಡರನ್ನು ಒಗ್ಗೂಡಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ನಾರಾಯಣಗುರು ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಅಲ್ಲದೆ, ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಜೊತೆಗೆ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ 1.25 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಬಿಲ್ಲವ ಸಂಘದ ಜಿಲ್ಲಾಧ್ಯಕ್ಷ ಭುಜಂಗಯ್ಯ, ಸಾಹಿತಿ ಮತ್ತು ಸಂಶೋಧಕ ಮಧುಗಣಪತಿ ರಾವ್ ಮಡೆನೂರು, ಶ್ರೀಮತಿ ಈಡಿಗ ಮಹಿಳಾ ಸಂಘದ ಉಪಾಧ್ಯಕ್ಷೆ ಲಲಿತಾ ಹೊನ್ನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಂ.ಫಾರ್ಮಾ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುದೀಪ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಲತಾ ಮೂರ್ತಿ, ಜಿಲ್ಲಾ ಈಡಿಗ ಸಂಘದ ಉಪಾಧ್ಯಕ್ಷ ಎನ್. ಹೊನ್ನಪ್ಪ, ಖಜಾಂಚಿ ರಾಮಪ್ಪ ಕಾಗೋಡು ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

ರಾಜಪ್ಪ ತೇಕಲೆ ಅವರು ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತು ಉಪನ್ಯಾಸ ನೀಡಿದರು.

ಕೆ.ವೈ. ರಾಮಚಂದ್ರಪ್ಪ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಮೇಶ್ ಎ.ಎಂ. ವಂದಿಸಿದರು.

ನಾರಾಯಣಗುರುಗಳ ತತ್ವಾದರ್ಶಗಳನ್ನು ಸಮಾಜದಲ್ಲಿ ಮತ್ತಷ್ಟು ಪ್ರಚುರಪಡಿಸುವ ಸಂಕಲ್ಪದೊಂದಿಗೆ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.