ಚಾನೆಲ್‌ಗೆ ಹಾರಲು ಯತ್ನಿಸಿದ ಯುವತಿ: ಸಮಯ ಪ್ರಜ್ಞೆಯಿಂದ ರಕ್ಷಿಸಿದ ಕಾರ್ಗಲ್ ಪೊಲೀಸರು

ಶಿವಮೊಗ್ಗ: ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ಕಾರ್ಗಲ್ ಪೊಲೀಸರು ಹಾಗೂ ERSS–112 ಸಿಬ್ಬಂದಿ ಸಮಯ ಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ಜೋಗ ಸಮೀಪದ ಬಿದರೂರು ಚಾನೆಲ್ ಬಳಿ ನಡೆದಿದೆ.

ಆಗಸ್ಟ್ 26ರಂದು ಸಂಜೆ ಕಾರ್ಗಲ್ ಠಾಣಾ ವ್ಯಾಪ್ತಿಯ ಬಿದರೂರು ಚಾನೆಲ್ ಬಳಿ ಮೀನು ಹಿಡಿಯುತ್ತಿದ್ದ ಸಾರ್ವಜನಿಕರು, ಯುವತಿಯೊಬ್ಬಳು ಬಹಳ ಸಮಯದಿಂದ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಆತ್ಮಹತ್ಯೆಗೆ ಯತ್ನಿಸುತ್ತಿರಬಹುದು ಎಂದು ಕಾರ್ಗಲ್ ಪೊಲೀಸ್ ಠಾಣೆ ಹಾಗೂ ERSS–112ಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಬಂದ ತಕ್ಷಣ ERV ಅಧಿಕಾರಿಗಳಾದ ಕಾರ್ಗಲ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಅಣ್ಣಪ್ಪ, ಚಾಲಕ ರಾಘವೇಂದ್ರ, ಕಾರ್ಗಲ್ ಠಾಣೆಯ ಸಿಬ್ಬಂದಿ ಸಂದೀಪ್ ಹಾಗೂ ಪುರುಷೋತ್ತಮ್ ಸ್ಥಳಕ್ಕೆ ಧಾವಿಸಿದ್ದಾರೆ.

ಈ ವೇಳೆ ಯುವತಿ ಚಾನೆಲ್‌ಗೆ ಹಾರಲು ಓಡುತ್ತಿದ್ದುದನ್ನು ಗಮನಿಸಿದ ಪೊಲೀಸರು ತಕ್ಷಣ ಆಕೆಯನ್ನು ತಡೆದು ರಕ್ಷಿಸಿದ್ದಾರೆ. ಬಳಿಕ ಠಾಣೆಗೆ ಕರೆತಂದು ವಿಚಾರಿಸಿದಾಗ, ಯುವತಿ ತುಮಕೂರು ಮೂಲದವಳಾಗಿದ್ದು, ತನ್ನ ಸ್ನೇಹಿತೆಯರೊಂದಿಗೆ ಜೋಗಕ್ಕೆ ಬಂದಿರುವುದು ತಿಳಿದುಬಂದಿದೆ.

ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ನಂತರ ಪೊಲೀಸರು ಯುವತಿಯ ಪೋಷಕರನ್ನು ಸಂಪರ್ಕಿಸಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಯುವತಿಯನ್ನು ಸುರಕ್ಷಿತವಾಗಿ ಪೋಷಕರೊಂದಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.

ಆತ್ಮಹತ್ಯೆಯಂತಹ ಅಪಾಯಕಾರಿ ನಿರ್ಧಾರಕ್ಕೆ ಮುಂದಾಗಿದ್ದ ಯುವತಿಯ ಜೀವವನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿದ ERSS–112 ಹಾಗೂ ಕಾರ್ಗಲ್ ಪೊಲೀಸ್ ಠಾಣೆಯ ಸಿಬ್ಬಂದಿಯ ಕರ್ತವ್ಯನಿಷ್ಠೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.

ತುರ್ತು ಪರಿಸ್ಥಿತಿಯಲ್ಲಿ ERSS–112ಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.