ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಎನ್‌ಸಿಟಿಇ ಮಾನ್ಯತೆ ಇಲ್ಲ: ಕುವೆಂಪು ವಿವಿ ಸ್ಪಷ್ಟನೆ
ಶಂಕರಘಟ್ಟ, ಆ. 27: ಸಾಗರದ ಉಳ್ಳೂರಿನಲ್ಲಿರುವ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ 2023-24ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಮಾನ್ಯತೆ ರದ್ದಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ತಿಳಿಸಿದೆ.
ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನ ಬಿಇಡಿ ಕೋರ್ಸ್‌ಗೆ ಪ್ರವೇಶ ಪಡೆಯುವ ವಿಚಾರ ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಕಾಲೇಜು ಸಕಾಲದಲ್ಲಿ ಅರ್ಜಿ ಸಲ್ಲಿಸದ ಕಾರಣ 2023-24ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆ ದೊರೆತಿರಲಿಲ್ಲ. 2024-25ನೇ ಸಾಲಿನಲ್ಲಿ ಎನ್‌ಸಿಟಿಇ ಮಾನ್ಯತೆ ಇಲ್ಲದ ಕಾರಣ ಸಂಯೋಜನೆ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.
2025-26 ಮತ್ತು 2026-27ನೇ ಸಾಲಿನಲ್ಲಿ ಯುಯುಸಿಎಂಎಸ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ, ಸ್ಥಳೀಯ ತಪಾಸಣಾ ಸಮಿತಿಯ ಪರಿಶೀಲನೆ ಸೇರಿದಂತೆ ನಿಯಮಾನುಸಾರ ಸಂಯೋಜನಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ, ವಿಶ್ವವಿದ್ಯಾಲಯದಿಂದ ಸಂಯೋಜನಾ ಆದೇಶ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಕರ್ನಾಟಕ ಹೈಕೋರ್ಟ್‌ನ 2026ರ ಜೂನ್ 24ರ ಮಧ್ಯಂತರ ಆದೇಶದ ಅನ್ವಯ ಕಾಲೇಜಿಗೆ ಪರೀಕ್ಷೆ ಹಾಗೂ ಪ್ರವೇಶಾತಿಗೆ ಅನುಮತಿ ದೊರೆತಿದೆ. ಆದರೆ ಈ ಅನುಮತಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.
ಒಂದು ವೇಳೆ ಅಂತಿಮ ತೀರ್ಪಿನಲ್ಲಿ ಮಧ್ಯಂತರ ಆದೇಶ ರದ್ದಾದರೆ, ಸಂಸ್ಥೆಯಾಗಲಿ ಅಥವಾ ವಿದ್ಯಾರ್ಥಿಗಳಾಗಲಿ ಸಮತೆಯ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಇದರಿಂದ ವಿದ್ಯಾರ್ಥಿಗಳು ಪಡೆದ ಪದವಿಯ ಮಾನ್ಯತೆ ಕಳೆದುಕೊಳ್ಳುವ ಭೀತಿ ಎದುರಾಗಬಹುದು ಎಂದು ವಿಶ್ವವಿದ್ಯಾಲಯ ಎಚ್ಚರಿಸಿದೆ.
ಹೀಗಾಗಿ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ ಕೋರ್ಸ್‌ಗೆ ಪ್ರವೇಶ ಪಡೆಯುವ ಮುನ್ನ ವಿದ್ಯಾರ್ಥಿಗಳು ಈ ಅಂಶಗಳನ್ನು ಪರಿಗಣಿಸಬೇಕು. ಪ್ರವೇಶ ಪಡೆಯುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಕುವೆಂಪು ವಿಶ್ವವಿದ್ಯಾಲಯ ತಿಳಿಸಿದೆ.
ಹೆಚ್ಚಿನ ಸ್ಥಳೀಯ ಸುದ್ದಿಗಳಿಗಾಗಿ ‘ಹಲೋ ಶಿವಮೊಗ್ಗ’ ಚಾನೆಲ್‌ನ್ನು ಸಬ್‌ಸ್ಕ್ರೈಬ್ ಮಾಡಿ, ವಿಡಿಯೋವನ್ನು ಲೈಕ್ ಮತ್ತು ಶೇರ್ ಮಾಡಿ.

Leave a Comment