ತಡಸ ಗ್ರಾಮದಲ್ಲಿ ಮನೆ ಕಳ್ಳತನ: ಇಬ್ಬರು ಬಾಲಕರು ವಶಕ್ಕೆ; ₹6.89 ಲಕ್ಷ ಮೌಲ್ಯದ ಆಭರಣ ವಶ
ಭದ್ರಾವತಿ: ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಡಸ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದು, ₹6,89,965 ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 17ರಂದು ತಡಸ ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಅಡುಗೆ ಕೋಣೆಯ ವೆಂಟಿಲೇಟರ್ ಮೂಲಕ ಮನೆಯೊಳಗೆ ಪ್ರವೇಶಿಸಿ, ಸುಮಾರು ₹6.39 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 177/2026ರಂತೆ ಬಿಎನ್‌ಎಸ್ ಕಾಯ್ದೆಯ ಕಲಂ 331(3), 305(A) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ವಿ.ಜಿ. ಅವರ ಸಹಕಾರದಿಂದ ಹಾಗೂ ಭದ್ರಾವತಿ ಉಪವಿಭಾಗದ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಚಿದಾನಂದ, ಪಿಎಸ್‌ಐ ಶಿಲ್ಪಾ ನಾಯನೇಗಲಿ, ಪಿಎಸ್‌ಐ ಮಹೇಶ್ ಸೇರಿದಂತೆ ಎಎಸ್‌ಐಗಳು ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆಗಸ್ಟ್ 19ರಂದು ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದು, ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ₹6,89,965 ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಮನೆಯ ಸುರಕ್ಷತೆ ಕುರಿತು ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Comment