ಅಂಗನವಾಡಿ ಕಾರ್ಯಕರ್ತೆಯರು–ಸಹಾಯಕಿಯರ 29 ಬೇಡಿಕೆಗಳಿಗೆ ಆಗ್ರಹ: AITUC ವತಿಯಿಂದ ಮುಖ್ಯಮಂತ್ರಿಗೆ ಮನವಿ

ಶಿವಮೊಗ್ಗ, ಆಗಸ್ಟ್ 25: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ (AITUC) ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆವರಣದಲ್ಲಿ ಜಿಲ್ಲಾದ್ಯಕ್ಷೆ ಶ್ರೀಮತಿ ಕೆ.ಸಿ .ವಿಶಾಲ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸಮರ್ಪಕ ಗೌರವಧನ, ನಿವೃತ್ತಿ ಸೌಲಭ್ಯ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ₹15,000 ಹಾಗೂ ಸಹಾಯಕಿಯರಿಗೆ ₹10,000 ಗೌರವಧನ ನೀಡುವಂತೆ ಒತ್ತಾಯಿಸಲಾಗಿದೆ. ನಿವೃತ್ತಿಯಾಗುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸೂಕ್ತ ನಿವೃತ್ತಿ ಸೌಲಭ್ಯ ಕಲ್ಪಿಸುವುದು, ಬಾಕಿ ಇರುವ ವಿವಿಧ ಸೌಲಭ್ಯಗಳನ್ನು ಮಂಜೂರು ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.

ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ, ಅಗತ್ಯ ಮೂಲಸೌಕರ್ಯ ಹಾಗೂ ಮಕ್ಕಳಿಗೆ ಸಮರ್ಪಕ ಸೌಲಭ್ಯ ಒದಗಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ಸಮಸ್ಯೆ ಪರಿಹರಿಸಬೇಕು. ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲೆ ಹೆಚ್ಚುತ್ತಿರುವ ಹೆಚ್ಚುವರಿ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

SIR ಸೇರಿದಂತೆ ವಿವಿಧ ಸಮೀಕ್ಷೆ ಮತ್ತು ಸರ್ಕಾರಿ ಕಾರ್ಯಗಳಲ್ಲಿ ಅಂಗನವಾಡಿ ಸಿಬ್ಬಂದಿಗೆ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕು, ಸೂಕ್ತ ಪ್ರಯಾಣ ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಬೇಕು. ಅನಾರೋಗ್ಯ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಅಗತ್ಯ ನೆರವು ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆಗಳೂ ಮನವಿಯಲ್ಲಿವೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವಾ ಭದ್ರತೆ, ವೇತನ–ಗೌರವಧನ, ನಿವೃತ್ತಿ ಸೌಲಭ್ಯ, ಕೆಲಸದ ಒತ್ತಡ ಹಾಗೂ ಕೇಂದ್ರಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಒಟ್ಟು 29 ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.

ಈ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು AITUC ಶಿವಮೊಗ್ಗ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಕಾರ್ಯದರ್ಶಿ ವೇದಾವತಿ, ರಾಜ್ಯ ಸಮಿತಿ ಮುಖಂಡರಾದ ಸುಶೀಲಾ ಬಾಯಿ, ತಾಲೂಕು ಅಧ್ಯಕ್ಷರಾದ ಪುಷ್ಪ ಸಾಗರ, ಶಶಿಕಲಾ ಹೊಸನಗರ, ಗಾಯಿತ್ರಿ ತೀರ್ಥಹಳ್ಳಿ, ರೇಣುಕಾ ಶಿವಮೊಗ್ಗ, ಕಲಾವತಿ, ಗೀತಾ ಕರಿನಗೊಳ್ಳಿ, ಲೀಲಾವತಿ, ಕುಸುಮಾ ಸೀಬಿನಕೆರೆ, ಲಕ್ಷಿö್ಮÃ ಆನಂತಪುರ, ಮೀನಾಕ್ಷಿ ಸೇರಿದಂತೆ ಹಲವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.