ಆದಿಚುಂಚನಗಿರಿ ಮಠದ ಜಮೀನು ಕಬಳಿಸಲೆತ್ನಿಸಿದ ಸರ್ಕಾರಿ ಅಧಿಕಾರಿಗಳು ಸೇರಿ 10 ಮಂದಿ ಬಂಧನ

ಬೆಂಗಳೂರು : ನಗರದ ಕೆಂಗೇರಿ ಬಳಿ ಆದಿಚುಂಚನಗಿರಿ ಶ್ರಿ?ಮಠಕ್ಕೆ ಸೇರಿದ 120 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಜಾಗವನ್ನು ಕಬಳಿಸಲು ಸಂಚು ನಡೆಸಿದ್ದ, ಸರ್ಕಾರಿ ಅಧಿಕಾರಿಗಳು ಸೇರಿದಂತೆ 10 ಮಂದಿಯನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಿನಿಮೀಯವಾಗಿದ್ದ ಆರೋಪಿಗಳ ಸಂಚು ಜನಸಾಮಾನ್ಯರನ್ನು ಬೆಚ್ಚಿ ಬೀಳಿಸುವಂತಿದೆ. ಮೂರು ದಶಕಗಳ ಹಿಂದೆ ಕೆಂಗೇರಿ ಹೋಬಳಿ ಕಂಬಳಿಪುರ ಗ್ರಾಮದ ಸರ್ವೇ ನಂಬರ್ 43 ರಲ್ಲಿ 45 ಎಕರೆ ಭೂಮಿಯನ್ನು ಭಕ್ತರು ಆದಿಚುಂಚನಗಿರಿ ಮಠಕ್ಕೆ ದೇಣಿಗೆಯಾಗಿ ನೀಡಿದ್ದರು. ಅದರಲ್ಲಿ 6 ಎಕರೆಯನ್ನು ಕಬಳಿಸಲು ನೆಲಮಂಗಲ ಮೂಲದ ನರೇಶ್‌ಗೌಡ ಮತ್ತು ರಿಯಲ್ ಎಸ್ಟೇಟ್ ಮಧ್ಯವರ್ತಿ ಆರೋಗ್ಯ ಸ್ವಾಮಿ ಸಂಚು ನಡೆಸಿದ್ದರು.

ಮಠಕ್ಕೆ ನೀಡಲಾದ ಭೂಮಿಯ ಇತಿಹಾಸದಲ್ಲಿ ಮೂಲ ಮಾಲೀಕರ ಹೆಸರುಗಳನ್ನು ಮೊದಲು ಆರೋಪಿಗಳು ಕಲೆ ಹಾಕಿದ್ದಾರೆ. ನಂತರ ಆ ಹೆಸರಿನ ವ್ಯಕ್ತಿಗಳು ಮೃತಪಟ್ಟಿರುವುದನ್ನು ಪತ್ತೆ ಹಚ್ಚಲು ಸ್ಮಶಾನಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಸಮಾಧಿಗಳ ಮೇಲಿರುವ ಹೆಸರು ಮತ್ತು ಜಮೀನಿನ ಮೂಲ ಮಾಲೀಕರ ಹೆಸರು ಹೊಂದಾಣಿಕೆಯಾಗಿರುವುದನ್ನು ಪತ್ತೆ ಹಚ್ಚಲಾಗಿದೆ. ಬಳಿಕ ಮೃತಪಟ್ಟ ವ್ಯಕ್ತಿಗಳ ಕುಟುಂಬದ ಸದಸ್ಯರನ್ನು ಹುಡುಕಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.

ಮೃತಪಟ್ಟ ವ್ಯಕ್ತಿಗಳ ಹೆಸರುಗಳನ್ನು ಒಳಗೊಂಡ ನಕಲಿ ವಂಶವೃಕ್ಷ ತಯಾರಿಸಲಾಗಿದೆ. ಅದನ್ನು ಆಧಾರವಾಗಿಟ್ಟುಕೊಂಡು ದೇಣಿಗೆ ನೀಡಿದ ಭೂಮಿಗೆ ನಕಲಿ ದಾಖಲೆಗಳ ಮೂಲಕ ವಾರಸುದಾರರನ್ನು ಸೃಷ್ಟಿಸಲಾಗಿದೆ. ಈ ರೀತಿ ನಕಲಿ ದಾಖಲಾತಿ ಸೃಷ್ಟಿಗೆ ಲಕ್ಷಾಂತರ ರೂಪಾಯಿ ಭ್ರಷ್ಟಚಾರ ನಡೆದಿರುವುದು ಪತ್ತೆಯಾಗಿದೆ. ಬೆಂಗಳೂರು ಹೊರ ವಲಯದ ಬೇಗೂರಿನ ಕಂದಾಯ ಇಲಾಖೆ ಅಧಿಕಾರಿಗಳು ಭೂ ಕಬಳಿಕೆ ಯತ್ನ ನಡೆಸಿದ ಆರೋಪಿಗಳಿಗೆ ಸಹಕರಿಸಿದ್ದಾರೆ ಎಂದು ದೂರಲಾಗಿದೆ.

 ವಾಸ್ತವಾಂಶ ಗೊತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ನಕಲಿ ದಾಖಲಾತಿಗಳ ಸೃಷ್ಟಿಗೆ ನೆರವಾಗಿದ್ದರು ಎಂದು ಹೇಳಲಾಗಿದೆ. ನಕಲಿ ದಾಖಲಾತಿಗಳ ಆಧಾರದ ಮೇಲೆ ಮಠದ ಭೂಮಿಯನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ. ಈ ಕುರಿತು ಶ್ರೀಮಠದಿಂದ ದೂರು ದಾಖಲಿಸಿತ್ತು.

ಭೂಮಿ ಪರಭಾರೆಯಾಗಿರುವ ಮಾಹಿತಿ ಪಡೆದು ತನಿಖೆ ಆರಂಭಿಸಿರುವ ಕೆಂಗೇರಿ ಪೊಲೀಸ್  ಠಾಣೆಯ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ರೌಡಿ ಶೀಟರ್ ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಮತ್ತಷ್ಟು ಮಾಹಿತಿ ಕಲೆ ಹಾಕಲು ತನಿಖೆ ಮುಂದುವರೆದಿದೆ 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.