ಕೋಟೆ ಶ್ರೀ ಮಾರಿಕಾಂಬಾ ದೇವಿಯ ಅದ್ದೂರಿ ವೈಭವದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ: ಫೆ.24 ರಂದು ಚಾಲನೆ ವಿಶೇಷ ಪೂಜೆ ವಿಧಿವಿಧಾನಗಳು

ಶಿವಮೊಗ್ಗ: ಮಲೆನಾಡಿನ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿ ಐತಿಹಾಸಿಕ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ. 5 ದಿನಗಳ ಈ ಜಾತ್ರೆಗೆ ಜನಸಾಗರವೇ ಹರಿದು ಬರಲಿದೆ. ಸೇವಾ ಸಮಿತಿಯವರು ಜಾತ್ರೆಯು ಅದ್ದೂರಿಯಾಗಿ ವೈಭವ ಯುತವಾಗಿ ನಡೆಯುವ ಸಲುವಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.ಶಿವಮೊಗ್ಗ ನಗರ ಇದೀಗ ಅಲಂಕೃತಗೊಂಡಿದೆ.

ಸಮಿತಿಯ ಅಧ್ಯಕ್ಷರು ಎಸ್.ಕೆ.ಮರಿಯಪ್ಪರವರ ಮನವಿ
ವಿಶೇಷವಾಗಿ ಗಮನಾರ್ಹ ಸಂಗತಿಯೆಂದರೆ, ಶ್ರೀ ಮಾರಿಕಾಂಬಾ ಸೇವಾ ಸಮಿತಿ ವತಿಯಿಂದ ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ಸಮಿತಿಗೆ ಸಹಕಾರ ನೀಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಗಾಂಧಿಬಜಾರ್ ಪ್ರವೇಶ ಮಾಡುವ ರಸ್ತೆಯಲ್ಲಿ ಕಾಳಿ ಅಲಂಕಾರದ ಭವ್ಯ ಮಹಾದ್ವಾರ 
ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿ ಕಾಳಿ ಅಲಂಕಾರದ ಭವ್ಯ ಮಹಾದ್ವಾರ ನಿರ್ಮಿಸಲಾಗಿದ್ದು, ಜಾತ್ರಾ ವಾತಾವರಣವನ್ನು ಮತ್ತಷ್ಟು ಭಕ್ತಿಪೂರ್ಣವಾಗಿಸಲಾಗಿದೆ. 
ಜರ್ಮನ್ ಟೆಂಟ್ ವ್ಯವಸ್ಥೆ: ಆಗಮಿಸುವ ಭಕ್ತರಿಗೆ ಸುರಕ್ಷಿತ ನೆರಳಿನ ವ್ಯವಸ್ಥೆ ಸೌಲಭ್ಯ

ಶಿವಪ್ಪ ನಾಯಕ ಪ್ರತಿಮೆಯಿಂದ ಗದ್ದಿಗೆವರೆಗೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ದೂರದೂರಿನಿಂದ ಆಗಮಿಸುವ ಭಕ್ತರಿಗೆ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿ.ಹೆಚ್. ರಸ್ತೆಯಲ್ಲೂ ಶಾಮಿಯಾನಗಳನ್ನು ಹಾಕಿ ನೆರಳು ಹಾಗೂ ವಿಶ್ರಾಂತಿ ಸೌಲಭ್ಯ ಒದಗಿಸಲಾಗಿದೆ.

ನಗರದೆಲ್ಲೆಡೆ ವಿದ್ಯುತ್ ದೀಪಾಲಂಕಾರ: ಗದ್ದಿಗೆ ಹತ್ತಿರ ಸುಂದರವಾದ ಹೂವಿನ ಅಲಂಕಾರ

ಈ ಬಾರಿ ಗದ್ದಿಗೆ ಬಳಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ವಿವಿಧ ಬಗೆಯ ಹಣ್ಣುಗಳು ಮತ್ತು ಹೂಗಳನ್ನು ಬಳಸಿ ದೇವಿಯ ಅಲಂಕಾರವನ್ನು ಅತಿ ಸುಂದರವಾಗಿ ರೂಪಿಸಲಾಗಿದೆ. ನಗರದೆಲ್ಲೆಡೆ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿದ್ದು, ಜಾತ್ರಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಮುಖ ರಸ್ತೆಗಳಲ್ಲಿ ಪ್ಲೆಕ್ಸ್‌ಗಳು ಅಳವಡಿಸಲಾಗಿದ್ದು, ಭಕ್ತರಲ್ಲಿ ಉತ್ಸಾಹದ ವಾತಾವರಣ ಮೂಡಿಸಿದೆ.

ಫೆಬ್ರವರಿ 24 – ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಮಂಗಳವಾದ್ಯದ ನಾದದೊಂದಿಗೆ ಬಿ.ಬಿ. ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಗೌರವಪೂರ್ವಕವಾಗಿ ಆಹ್ವಾನಿಸಲಾಗುತ್ತದೆ. ಮುತ್ತೈದೆಯರು ಭಕ್ತಿಭಾವದ ಮೆರವಣಿಗೆಯೊಂದಿಗೆ ಗಾಂಧಿಬಜಾರದ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬಾ ದೇವಿಗೆ ಉಡಿ ತುಂಬಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಸಾರ್ವಜನಿಕರ ಪೂಜೆಗೆ ದರ್ಶನಕ್ಕೆ ಚಾಲನೆ
ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯಧಾರಣೆ ನೆರವೇರಿಸಿದ ನಂತರ ಸಾರ್ವಜನಿಕ ಪೂಜೆಗೆ ಚಾಲನೆ ನೀಡಲಿದ್ದಾರೆ. ದಿನಪೂರ್ತಿ ಲಕ್ಷಾಂತರ ಮುತ್ತೈದೆಯರು ಮಡ್ಲಕ್ಕಿ ನೀಡಿ ಉಡಿ ತುಂಬುವ ಸಂಪ್ರದಾಯವನ್ನು ಆಚರಿಸಲಿದ್ದಾರೆ. ಬಳಿಕ ಉಪ್ಪಾರ ಸಮಾಜದವರು ಅಮ್ಮನವರನ್ನು ರಥದಲ್ಲಿ ಗದ್ದಿಗೆಗೆ ಕರೆತರುವ ವೈಭವಮಯ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗಾಮತಸ್ಥ ಸಮಾಜದವರು ಗಂಗೆ ಪೂಜೆಯೊಂದಿಗೆ ಭಕ್ತಿಪೂರ್ವಕ ಸ್ವಾಗತ ಕೋರಲಿದ್ದಾರೆ.

ಫೆಬ್ರವರಿ 25 – ಬುಧವಾರ: ಸಾಂಪ್ರದಾಯಿಕ ಪೂಜೆ ಬೆಳಿಗ್ಗೆ 4 ಗಂಟೆಗೆ ಹರಿಜನ ಸಮಾಜದವರು ಬೇವಿನುಡುಗೆಯೊಂದಿಗೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಕೂರಿಸಲಾಗುತ್ತದೆ. ಕುರುಬ ಸಮಾಜದ ಚೌಡಿಕೆ ಕುಟುಂಬದವರು ನೈವೇದ್ಯ ಸಲ್ಲಿಸಲಿದ್ದಾರೆ. ವಾಲ್ಮೀಕಿ, ಉಪ್ಪಾರ ಹಾಗೂ ಮಡಿವಾಳ ಸಮಾಜದವರು ಕ್ರಮವಾಗಿ ನಾಲ್ಕು ದಿನಗಳ ಕಾಲ ಸಂಪ್ರದಾಯಬದ್ಧ ಪೂಜೆಗಳನ್ನು ನೆರವೇರಿಸಲಿದ್ದಾರೆ. ಜಾತ್ರೆಯ ಪ್ರಮುಖ ವೈಶಿಷ್ಟ್ಯವೆಂದರೆ ವಿವಿಧ ಸಮಾಜಗಳ ಸಮಾನ ಪಾಲ್ಗೊಳ್ಳುವಿಕೆ ಮತ್ತು ಸಹಭಾಗಿತ್ವ.

ಫೆಬ್ರವರಿ 28 – ಶನಿವಾರ: ಉತ್ಸವಕ್ಕೆ ತೆರೆ
ರಾತ್ರಿ 7 ಗಂಟೆಗೆ ಜಾನಪದ ಕಲಾತಂಡಗಳ ಮೆರಗು ನಡುವೆ ಶ್ರೀ ಮಾರಿಕಾಂಬೆಯ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅಮ್ಮನವರನ್ನು ವನ ಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಜಾತ್ರೆಗೆ ಸಂಪ್ರದಾಯಬದ್ಧವಾಗಿ ತೆರೆ ಎಳೆಯಲಾಗುತ್ತದೆ. ಮಡಿವಾಳ ಸಮಾಜದವರು ವನದಲ್ಲಿ ಅಂತಿಮ ಪೂಜೆ ನೆರವೇರಿಸಲಿದ್ದಾರೆ.

ಒಟ್ಟಿನಲ್ಲಿ, ಐದು ದಿನಗಳ ಕಾಲ ನಡೆಯಲಿರುವ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಈ ಬಾರಿ ಅದ್ಧೂರಿ ಸಿದ್ಧತೆಗಳೊಂದಿಗೆ ನಗರಕ್ಕೆ ಮತ್ತೊಮ್ಮೆ ಧಾರ್ಮಿಕ ಉತ್ಸಾಹ ಮತ್ತು ಸಾಂಸ್ಕೃತಿಕ ವೈಭವವನ್ನು ತಂದುಕೊಡಲು ಸಜ್ಜಾಗಿದೆ.


ಜಾತ್ರೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್  ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗಾಂಧಿಬಜಾರ್ ಭಾಗದಲ್ಲಿ ದೇವಿಯ ದರ್ಶನಕ್ಕೆ ಯಾವುದೇ ಅಡಚಣೆ ಆಗದಂತೆ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. 
 
 ಸಮಿತಿಯ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ಎನ್. ಉಮಾಪತಿ, ಎಂ.ಕೆ. ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ವಿ. ರಾಜು, ಸುನೀಲ್, ಹರೀಶ್ ಲಾಲ್ ಸೇರಿದಂತೆ ಪದಾಧಿಕಾರಿಗಳ ಸಮನ್ವಯದಿಂದ ಜಾತ್ರೆಯ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ.
ನೂರಾರು ಸೇವಾ ಕಾರ್ಯಕರ್ತರು ಸಹ ಜಾತ್ರೆಯ ಯಶಸ್ವಿಯಾಗಿ ನಡೆಯಲು ಸಹಕರಿಸಲಿದ್ದಾರೆ.

 ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಇನ್ನಷ್ಟು ವೈಭವದಿಂದ ಅದ್ದೂರಿಯಾಗಿ, ಯಶಸ್ವಿಯಾಗಿ, ಸುಗಮವಾಗಿ, ನಡೆಯಲಿ ಎಂದು ಹಲೋ ಶಿವಮೊಗ್ಗ ದಿನಪತ್ರಿಕೆಯ ಬಳಗ ಶುಭ ಹಾರೈಸಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.