ಭದ್ರಾವತಿ : ವೃದ್ಧ ದಂಪತಿ ಅನುಮಾನಸ್ಪದ ಸಾವು: ದರೋಡೆನಾ? ಕೊಲೆನಾ?
ಭದ್ರಾವತಿ: ವೃದ್ಧ ದಂಪತಿ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ ನಗರದ ಭೂತನಗುಡಿ ಬಡಾವಣೆಯಲ್ಲಿ ನಡೆದಿದೆ. ಚಂದ್ರಪ್ಪ(80), ಪತ್ನಿ ಜಯಮ್ಮ(75) ಎನ್ನುವರ ಮೃತದೇಹಗಳು ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಪತ್ತೆಯಾಗಿವೆ.
ನಿನ್ನೆ ದಂಪತಿ ಮೃತಪಟ್ಟಿದ್ದು, ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ವೃದ್ಧ ದಂಪತಿ ಒಟ್ಟಿಗೆ ಮೃತಪಟ್ಟಿರುವ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಸ್ಥಳಕ್ಕೆ ಓಲ್ಡ್ ಟೌನ್ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಿಗ್ಗೆ ಎಂದಿನಂತೆ ಮಕ್ಕಳು ತಮ್ಮ ಪೋಷಕರಿಗೆ ಫೋನ್ ಮಾಡಿದಾಗ ದಂಪತಿಗಳು ಕರೆ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡ ಮಕ್ಕಳು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಮನೆಗೆ ಹೋಗಿ ಪರಿಶೀಲಿಸಿದಾಗ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮನೆಯ ಬೆಡ್‌ರೂಮ್‌ನಲ್ಲಿ ಚಂದ್ರಪ್ಪ ಅವರ ಶವ ಪತ್ತೆಯಾದರೆ, ಹಾಲ್‌ನಲ್ಲಿ ಪತ್ನಿ ಜಯಮ್ಮ ಶವ ಬಿದ್ದಿರುವುದು ಕಂಡುಬಂದಿದೆ.
ಮೃತ ಚಂದ್ರಪ್ಪ ಭದ್ರಾವತಿಯ ವಿಐಎಸ್ಎಲ್ ನಿವೃತ್ತ ಉದ್ಯೋಗಿಯಾಗಿದ್ದು, ಮನೆಗೆ ನುಗ್ಗಿ ದರೋಡೆಕೋರರು ಹತ್ಯೆಗೈದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮನೆಯ ಪ್ರತ್ಯೇಕ ಕೊಠಡಿಯಲ್ಲಿ ವೃದ್ಧ ದಂಪತಿ ಶವಗಳು ಪತ್ತೆಯಾಗಿವೆ. ಹೀಗಾಗಿ ಕೊಲೆಯಾಗಿರಬಹುದು ಎಂದು ಮಕ್ಕಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ದಂಪತಿ ಮೈಮೇಲೆ ಯಾವುದೇ ಗಾಯದ ಗುರುತು ಪತ್ತೆ ಆಗಿಲ್ಲ. ಇದರಿಂದ ಈ ಪ್ರಕರಣ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಸಾವನ್ನಪ್ಪಿದ ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಎಲ್ಲರೂ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅತ್ಯಂತ ಅನೂನ್ಯವಾಗಿದ್ದ ಈ ದಂಪತಿ ತಮ್ಮ ಮನೆಯಲ್ಲಿ ವಾಸವಿದ್ದರು. ಪ್ರತಿದಿನದಂತೆ ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ವೃದ್ದ ದಂಪತಿಗಳ ಮೈಮೇಲಿನ ಬಂಗಾರ ಕಳ್ಳತನ:
ದಂಪತಿಗಳ ಮೈಮೇಲಿನ ವೃದ್ದ ಗಂಡಸಿನ ಅವರ ಕೊರಳಲ್ಲಿದ್ದ ಬಂಗಾರದ ಚೈನು, ಕೈಯಲ್ಲಿ ಉಂಗುರ, ವೃದ್ದೆಯ ಕೊರಳಲ್ಲಿದ್ದ ಮಾಂಗಲ್ಯ ಸರ, ಬೀರುವಿನಲ್ಲಿದ್ದ ಬಂಗಾರದ ಆಭರಣಗಳು ಕಳ್ಳತನವಾಗಿವೆ. ಇದು ಯಾರೋ ಚಿರಪರಿಚಿತರು ಮಾಡಿರುವ ಕೆಲಸವಾಗಿದೆ. ಅವರೇ ವೃದ್ದ ದಂಪತಿಗಳನ್ನು ಕೊಂದಿರಬಹುದೆಂಬ ಅನುಮಾನವನ್ನು ಸಂಬಂಧಿಕರು ಮತ್ತು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕಾರ್ಯಪ್ಪ, ವಿಧಿವಿಜ್ಞಾನ ತಂಡ ಹಾಗೂ ಶ್ವಾನ ದಳ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

Leave a Comment