ಸಾಗರ ತಾಲ್ಲೂಕಿನ ಆನಂದಪುರದ ಯುವಜನತೆಗಿಲ್ಲ ಪದವಿ ಕಾಲೇಜು:ಶಿಕ್ಷಣ ಸಚಿವ ಮಧುಬಂಗಾರಪ್ಪ ಮತ್ತು ಶಾಸಕ ಬೇಳೂರು ಗಮನಹರಿಸುವರೇ....
ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ ಕ್ಷೇತ್ರದಲ್ಲಿಯೇ ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಬಿಟ್ಟು ದೂರ ಸರಿಯುತ್ತಿದ್ದಾರೆ.
ಆನಂದಪುರ:ತಾಲ್ಲೂಕು ಕೇಂದ್ರ ಸಾಗರವನ್ನು ಬಿಟ್ಟರೆ ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಸಾಲಿನಲ್ಲಿ ಆನಂದಪುರವು ಒಂದಾಗಿದೆ. ಸದಾ ಜನರಿಂದ ಕೂಡಿರುವ ಪಟ್ಟಣದಲ್ಲಿ ಯಾವುದೇ ಪದವಿ ಕಾಲೇಜು ಆರಂಭ ಆಗದೆ ಇರುವುದು ಈ ಭಾಗದ ವಿದ್ಯಾರ್ಥಿಗಳು ಮತ್ತು ಪಾಲಕರ ಸಮಾಧಾನಕ್ಕೆ ಕಾರಣವಾಗಿದೆ.
ಸರಿಸುಮಾರು ಅಂದಾಜು 12 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಆನಂದಪುರವು ಅನುದಾನಿತ ಮತ್ತು ಅನುದಾನ ರಹಿತ ಏಳು ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಸಹ ಕಾರ್ಯನಿರ್ವಹಿಸುತ್ತಿವೆ.
ಇವೆಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿವರ್ಷ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅದರಲ್ಲೂ ಬಡವರು, ಹಿಂದುಳಿದ ಸಮುದಾಯದವರೇ ಹೆಚ್ಚಿದ್ದಾರೆ. ಆದರೆ, ಮುಂದಿನ ಹಂತದ ಕಲಿಕೆಗಾಗಿ ಅವರಿಗೆ ಸ್ಥಳೀಯವಾಗಿ ಸರ್ಕಾರಿ ಪದವಿ ಕಾಲೇಜಿನ ವ್ಯವಸ್ಥೆ ಇಲ್ಲದಿರುವುದು ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುತ್ತಿದೆ.
ಇಲ್ಲಿನ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಪದವಿ ಶಿಕ್ಷಣಕ್ಕಾಗಿ ದೂರದ ಸಾಗರ, ಜಿಲ್ಲಾ ಕೇಂದ್ರ ಶಿವಮೊಗ್ಗ ನಗರಕ್ಕೆ ನಿತ್ಯ 40ರಿಂದ 50 ಕಿ.ಮೀ ಕ್ರಮಿಸಿ ಪ್ರಯಾಣಿಸಬೇಕಿದೆ. ಇಲ್ಲವೆ ಓದನ್ನೇ ಮೊಟಕುಗೊಳಿಸುವ ಪರಿಸ್ಥಿತಿ ಇದೆ.ಅನೇಕ ಗ್ರಾಮೀಣ ಹಳ್ಳಿ ಭಾಗದ ವಿದ್ಯಾರ್ಥಿಗಳು ಆನಂದಪುರದಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜು ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಈಡೇರುವ ಭಾಗ್ಯ ದೊರೆಯುತ್ತಿಲ್ಲ.
ಈ ವ್ಯಾಪ್ತಿಯಲ್ಲಿ ಸರಿ ಸುಮಾರು 8 ಕ್ಕೂ ಅಧಿಕ ಸರ್ಕಾರಿ ಪ್ರೌಢಶಾಲೆಗಳಿವೆ. 2ರಿಂದ 3ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ.ಹಾಗೆ ಒಂದು ಪದವಿ ಪೂರ್ವ ಕಾಲೇಜು ಇದೆ ಇಷ್ಟೆಲ್ಲಾ ಶಿಕ್ಷಣ ಕ್ಷೇತ್ರದಲ್ಲಿ ಮುಂದಿರುವ ಆನಂದಪುರದಲ್ಲಿ ಒಂದೇ ಒಂದು ಸರ್ಕಾರಿ ಪದವಿ ಕಾಲೇಜು ಇಲ್ಲದಿರುವುದು ಬೇಸರದ ಸಂಗತಿ ಯಾಗಿದೆ.
ಇಲ್ಲಿಂದ 13 ಕಿಲೋ ಮೀಟರ್ ದೂರದ ರಿಪ್ಪನ್ ಪೇಟೆ ಪದವಿ ಕಾಲೇಜಿಗೆ ಹೋಗಲು ಆನಂದಪುರದಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಸರ್ಕಾರಿ ಬಸ್ ಕೊರತೆ ಇದೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಹ ಸಾಕಷ್ಟು ಅನಾನುಕೂಲ ಆಗುತ್ತಿದೆ. ಹಾಲಿ ಇಲ್ಲಿರುವ ಖಾಸಗಿ ಪದವಿ ಕಾಲೇಜಿನಲ್ಲಿ ಗುಣಮಟ್ಟದ ತರಗತಿಗಳು ನೆಡೆಯುತ್ತಿಲ್ಲ ಎಂಬ ದೂರು ಸ್ಥಳೀಯರಿಂದ ಬರುತ್ತಿವೆ.
ಅಷ್ಟೇ ಅಲ್ಲದೆ ಆನಂದಪುರವು ಸಾಗರ ,ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ ಕ್ಕೆ ಸಂಪರ್ಕ ಸೇತುವಾಗಿದ್ದು, ರಾಜಕೀಯವಾಗಿ ,ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರೆಯುತ್ತಿದೆ.ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಪೊಲೀಸ್ ಠಾಣೆ ಮತ್ತು ಪ್ರವಾಸಕ್ಕೆ ಚಂಪಕ ಸರಸ್ಸು ಇನ್ನಿತರ ಐತಿಹಾಸಿಕ ಸ್ಥಳಗಳು ಹಾಗೂ ಕವಿಗಳು, ಸಾಹಿತಿಗಳು, ಕಲಾವಿದರ ಊರಾಗಿದೆ.
ರಾಜಕೀಯವಾಗಿ ಆನಂದಪುರ 5ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಅತ್ಯಂತ ದೊಡ್ಡದಾದ ಪ್ರದೇಶವಾಗಿದ್ದು ಅನೇಕ ರಾಜಕಾರಣಿಗಳ ಹೋರಾಟಗಾರರ ಹುಟ್ಟೂರು ಇದಾಗಿದೆ. ಆದರೂ ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಪದವಿ ಕಾಲೇಜು ಇಲ್ಲದಿರುವುದು ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಮೊಟಕುಗೊಳಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರಾದ ಆನಂದ್ ಹರಟೆ.
ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ ಕ್ಷೇತ್ರದಲ್ಲಿಯೇ ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಬಿಟ್ಟು ದೂರ ಸರಿಯುತ್ತಿರುವುದನ್ನು ನೋಡಿ ಇನ್ನಾದರೂ ಗಮನಿಸಿ ಆನಂದಪುರದಲ್ಲಿ ಒಂದು ಪದವಿ ಕಾಲೇಜನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂಬುದು ಜನರ ಒತ್ತಾಸೆಯಾಗಿದೆ.
ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ಹೊಸದಾಗಿ ಕೆಪಿಎಸ್ಸಿ ಶಾಲೆಗಳ ಮಂಜೂರಾತಿ ಆಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಜನ ಸಂಖ್ಯೆ ಆಧಾರದ ಮೇಲೆ ಪದವಿ ಕಾಲೇಜು ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

Leave a Comment