ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೆಲವು ಪತ್ರಕರ್ತರು ಬಳಸಿಕೊಳ್ಳುತ್ತಾ ಇಡೀ ಪತ್ರಿಕಾ ಸಮೂಹವನ್ನೇ ಕತ್ತಲಲ್ಲಿ ಇಡಲಾಗಿದೆ; ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್

ಶಿವಮೊಗ್ಗ, ಮೇ 11: ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೆಲವೇ ಕೆಲವು ಪತ್ರಕರ್ತರು ಬಳಸಿಕೊಳ್ಳುತ್ತಾ ಇಡೀ ಪತ್ರಿಕಾ ಸಮೂಹವನ್ನೇ ಕತ್ತಲಲ್ಲಿ ಇಡಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ವಿಷಾದ ವ್ಯಕ್ತಪಡಿಸಿದರು.

ಅವರು ಇಂದು ಶಿವಮೊಗ್ಗದ ಮಥುರಾ ಪ್ಯಾರಡೈಸ್‍ನ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮೇ 24ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ 3ನೇ ರಾಜ್ಯ ಸಮ್ಮೇಳನ ‘ಪತ್ರಕರ್ತರ ಹಬ್ಬ’ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಅಂಕುಡೊಂಕುಗಳನ್ನು ಟೀಕಿಸಿ ತಿದ್ದುವ ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತರು ನಿಭಾಯಿಸುತ್ತಿದ್ದಾರೆ. ಆದರೆ, ಸರ್ಕಾರದ ಇಚ್ಛಾಶಕ್ತಿಯ ಕೊರತೆ, ಕೆಲವೇ ಪಟ್ಟಭದ್ರರ ಲಾಬಿಗಳಿಂದಾಗಿ ಬಹುತೇಕ ಪತ್ರಕರ್ತರು ಕಗ್ಗತ್ತಲಲ್ಲಿದ್ದಾರೆ. ಹತ್ತಾರು ವರ್ಷಗಳ ಕಾಲ ಪತ್ರಿಕಾವೃತ್ತಿಯನ್ನು ಕೈಗೊಂಡು ನಿವೃತ್ತರಾಗುವವರು ಯಾವುದೇ ಆಸರೆ ಇಲ್ಲದೇ ಸೊರಗುವಂತಾಗಿದೆ. ಆದ್ದರಿಂದ ಪತ್ರಕರ್ತರ ಪರವಾಗಿ ಧ್ವನಿ ಎತ್ತಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಹುಟ್ಟುಹಾಕಲಾಯಿತು ಎಂದರು.

ಸಂಘಟನೆ ಪ್ರಾರಂಭವಾಗಿ ಕೇವಲ ಎರಡೂವರೆ ವರ್ಷಗಳಲ್ಲಿ ರಾಜ್ಯದಾದ್ಯಂತ 3200ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಸಂಘಟನೆಯ ಸದಸ್ಯರಿದ್ದಾರೆ. ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪತ್ರಕರ್ತನೊಬ್ಬನ ಮೇಲೆ ಅಮಾನವೀಯವಾಗಿ ನಡೆದುಕೊಂಡು ಹಲ್ಲೆ ನಡೆಸಿದಾಗ ದೊಡ್ಡ ದೊಡ್ಡ ಪತ್ರಕರ್ತರು ಮೌನವಾಗಿದ್ದರು. ನಮ್ಮ ಸಂಘಟನೆ ಘಟನೆಯ ವಿರುದ್ಧ ಧ್ವನಿ ಎತ್ತಿದಾಗ ಕೇವಲ 16 ಗಂಟೆಯಲ್ಲಿ ತಪ್ಪಿತಸ್ಥ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಮಾನತ್ತುಗೊಳಿಸಲಾಗಿದೆ ಎಂದರು.

ಮೇ 24ರಂದು ರಾಜ್ಯ ಸಮ್ಮೇಳನವನ್ನು ಪತ್ರಕರ್ತರ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಅಂದು ಇಡೀ ದಿನ ಪತ್ರಕರ್ತರ ಏಳಿಕೆಯ ಕುರಿತು ಚಿಂತನೆ ನಡೆಯಲಿದೆ. ಈಗಾಗಲೇ ನಮ್ಮ ಸಂಘಟನೆಯಿಂದ ಬಸ್‍ಪಾಸ್ ಸೇರಿದಂತೆ ಹಲವು ಹೋರಾಟಗಳನ್ನು ಹಮ್ಮಿಕೊಂಡಿದ್ದು, ವಾರ್ತಾ ಇಲಾಖೆಯ ಅಧಿಕಾರಿಗಳ ಕಠಿಣ ಮಾನದಂಡಗಳಿಂದಾಗಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ. ಬಸ್ ಪಾಸ್ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‍ರವರು ಜೂನ್ ತಿಂಗಳ ವರೆಗೆ ಕಾಲಾವಕಾಶ ಕೋರಿದ್ದಾರೆ. ಅದಾದ ನಂತರ ಹೋರಾಟ ತೀವ್ರಗೊಳಿಸಲಾಗುವುದು. ಪತ್ರಕರ್ತರಿಗಾಗುತ್ತಿರುವ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಶಿವಮೊಗ್ಗ ಜಿಲ್ಲಾ ಘಟಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕ್ರಿಯಾಶೀಲ ಅಧ್ಯಕ್ಷ ಡಿ.ಜಿ. ನಾಗರಾಜ ಮತ್ತು ಅವರ ಟೀಮ್ ವರ್ಕ್‍ನಿಂದಾಗಿ ಈ ಘಟಕ ಇಡೀ ರಾಜ್ಯದ ಗಮನ ಸೆಳೆದಿದೆ. ಪತ್ರಿಕಾ ಭವನವನ್ನು ಸರ್ಕಾರಕ್ಕೆ ವಹಿಸಬೇಕೆಂಬ ಇವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಇಂತಹ ಹೋರಾಟಗಾರರು ಪ್ರತಿ ಜಿಲ್ಲೆಗೂ ನಾಲ್ಕೈದು ಮಂದಿ ಇದ್ದರೆ ಎಂತಹ ಸಂಘಟನೆ ಬೇಕಾದರೂ ಕಟ್ಟಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಶರಾವತಿ ಡೆಂಟಲ್ ಕಾಲೇಜ್‍ನ ಪ್ರೊಫೆಸರ್ ಡಾ. ಜೀನತ್ ಅಂಬ್ರೇಜ್, ದಾವಣಗೆರೆ ಜಿಲ್ಲಾಧ್ಯಕ್ಷ ಕರಿಯಪ್ಪ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸೈಯದ್ ಹುಸೈನ್, ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಗಿರೀಶ್ ಹೊದಿಗೆರೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಘಟಕದ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ್ ಮಾತನಾಡಿ, ಶಿವಮೊಗ್ಗ ಜಿಲ್ಲಾ ಘಟಕದಿಂದ ಸದಸ್ಯರ ಅನುಕೂಲಕ್ಕಾಗಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪತ್ರಕರ್ತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳಿಗೆ ಸಂಘಟಿತ ಪ್ರಯತ್ನ ಮುಖ್ಯ ಎಂದರು.

ಮೇ 24ರಂದು ನಡೆಯಲಿರುವ ಸಮ್ಮೇಳನಕ್ಕೆ ಜಿಲ್ಲೆಯಿಂದ ಎಲ್ಲಾ ಸದಸ್ಯರೂ ಪಾಲ್ಗೊಳ್ಳಬೇಕು. ಜಿಲ್ಲಾ ಘಟಕದಿಂದಲೇ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸದಸ್ಯರಿಗೆ ಆಕ್ಸಿಡೆಂಟ್ ಬೆನಿಫಿಟ್ ಪಾಲಿಸಿಯ ಬಾಂಡ್‍ಗಳನ್ನು ವಿತರಿಸಲಾಯಿತು.
ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರುಗಳನ್ನು ಅಭಿನಂದಿಸಲಾಯಿತು.

ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಬಿ.ಸಿ. ಶಿವರಾಜ್, ವಿಷ್ಣುಪ್ರಸಾದ್, ಬಿ. ಗಣಪತಿ, ಬಿ.ಎ. ಸುರೇಶ್ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಡಿ.ಪಿ. ಅರವಿಂದ ನಿರೂಪಿಸಿದರು. ಉಪಾಧ್ಯಕ್ಷ ಚಿತ್ರಪ್ಪ ಯರಬಾಳ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ಎಂ. ವಂದಿಸಿದರು. ವಿ. ಗಣೇಶ್ ಪ್ರಾರ್ಥಿಸಿ, ಷಡಾಕ್ಷರಪ್ಪ ಜಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.