KWJV ಶಿವಮೊಗ್ಗ ಘಟಕದಿಂದ ಐಡಿ ಕಾರ್ಡ್ ವಿತರಣೆ:ಸದಸ್ಯರ ಅನುಕೂಲಕ್ಕಾಗಿ ಹಲವು ಯೋಜನೆಗಳ ಘೋಷಣೆ ಮಾಡಿದ ಅಧ್ಯಕ್ಷ ಡಿ.ಜಿ.ನಾಗರಾಜ್

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರಿಂದ ಸದಸ್ಯರ ವೃತ್ತಿಪರ ಜೀವನಕ್ಕೆ ಅನುಕೂಲವಾಗಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ ತಿಳಿಸಿದರು.

ಅವರು ಇಂದು ಸಂಜೆ (ಏಪ್ರಿಲ್ 14) ಮಥುರಾ ಪ್ಯಾರಡೈಸ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ಮಾಡಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಶಿವಮೊಗ್ಗದಲ್ಲಿ ಸಕ್ರಿಯವಾಗಿದ್ದು, ಅತೀ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪತ್ರಕರ್ತರು ಸದಸ್ಯತ್ವ ಪಡೆದಿದ್ದಾರೆ. ಸಂಘಟನೆ ಸದೃಢವಾಗಿದೆ. ನಮ್ಮ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಸಹಕಾರದಿಂದ ಪತ್ರಕರ್ತರ ಅಭ್ಯುದಯಕ್ಕಾಗಿ ಸಂಘಟನೆ ವತಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದ ಸದಸ್ಯರಿಗೆ ಅಪಘಾತವಾದ ಸಂದರ್ಭದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ 5 ಲಕ್ಷ ರೂ.ಗಳ ಆಕ್ಸಿಡೆಂಟ್-ವೈದ್ಯಕೀಯ ವಿಮೆ ಸೌಲಭ್ಯ, ವರದಿಗಾರರಿಗೆ ಪ್ರತಿ ತಿಂಗಳು 500 ರೂ.ಗಳ ಪೆಟ್ರೋಲ್ ವೆಚ್ಚ ನೀಡುವುದು, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಭ್ಯಾಸಕ್ಕೆ ನೆರವು, ಸದಸ್ಯರ ಕುಟುಂಬಗಳೊAದಿಗೆ ವಾರ್ಷಿಕ ಕ್ರೀಡಾಕೂಟ, ಪ್ರತಿ ವರ್ಷ ಸದಸ್ಯರಿಗೆ ಉಚಿತ ಪ್ರವಾಸ, ಪ್ರತಿ ದೀಪಾವಳಿ ಹಬ್ಬಕ್ಕೆ ಸಂಘದ ವತಿಯಿಂದ ಸದಸ್ಯರಿಗೆ ಪಟಾಕಿ ಹಾಗೂ ಬಟ್ಟೆ ವಿತರಣೆ, ಸದಸ್ಯರು ಅಕಾಲಿಕವಾಗಿ ಮೃತಪಟ್ಟಲ್ಲಿ ಅಂತ್ಯಕ್ರಿಯೆಗೆ 10 ಸಾವಿರ ರೂ.ಗಳ ನೆರವು, ಅನಾರೋಗ್ಯಕ್ಕೆ ತುತ್ತಾದಲ್ಲಿ 5 ಸಾವಿರ ರೂ.ಗಳ ತುರ್ತು ನೆರವು ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲಾ ಯೋಜನೆಗಳನ್ನೂ ಹಂತಹAತವಾಗಿ ಜಾರಿಗೊಳಿಸುತ್ತಿದ್ದು, ಪ್ರತಿ ವರ್ಷವೂ ಮುಂದುವರೆಯಲಿದೆ. ಈ ಎಲ್ಲಾ ಯೋಜನೆಗಳಿಗೆ ಸದಸ್ಯರಿಂದ ಯಾವುದೇ ಹಣ ಸಂಗ್ರಹ ಮಾಡದೇ ಸಂಘದ ವತಿಯಿಂದಲೇ ಭರಿಸಲಾಗುವುದು ಎಂದರು.

ಈಗಾಗಲೇ ಜಾರಿಯಲ್ಲಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸೌಲಭ್ಯಗಳನ್ನು ಸದಸ್ಯರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಸದಸ್ಯರು ವೃತ್ತಿಯಲ್ಲಿ ನೈಪುಣ್ಯತೆ ಹೊಂದುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.

ಈಗಾಗಲೇ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗ್ಲೆಯವರು ಎಲ್ಲಾ ಪತ್ರಕರ್ತರಿಗೂ ಬಸ್ ಪಾಸ್ ವಿತರಣೆ ಮಾಡಬೇಕು ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಸೌಲಭ್ಯ ವಿಸ್ತರಿಸಲು ಹೋರಾಟ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಯೋಜನೆಯ ಸೌಲಭ್ಯ ಎಲ್ಲ ಸದಸ್ಯರಿಗೂ ಸಿಗಲು ಶ್ರಮಿಸಲಾಗುವುದು ಎಂದರು.

ಶಿವಮೊಗ್ಗದ ಸರ್ಕಾರಿ ಪತ್ರಿಕಾ ಭವನದ ಹೋರಾಟವು ತಾರ್ಕಿಕ ಅಂತ್ಯ ಕಾಣುವ ವಿಶ್ವಾಸವಿದೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಯುತ್ತಿದ್ದು, ನಾವು ನೂರಾರು ಪುಟದ ದಾಖಲಾತಿಗಳನ್ನು ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಪತ್ರಿಕಾ ಭವನಕ್ಕೆ ಆಡಳಿತಾಧಿಕಾರಿ ನೇಮಕವಾಗಿ, ಸಾರ್ವಜನಿಕರಿಗೆ ಕೇವಲ 500 ರೂ.ಗಳಲ್ಲೆ ಪ್ರೆಸ್ ಮೀಟ್ ಮಾಡಲು ಅವಕಾಶವಾಗಲಿದೆ. ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಈ ಸರ್ಕಾರಿ ಪತ್ರಿಕಾ ಭವನದಲ್ಲಿ ಮುಕ್ತ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೇ 24ರಂದು ಸಂಘದ ರಾಜ್ಯಮಟ್ಟದ 3ನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದ್ದು, ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಸದರಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ, ಪ್ರಧಾನ ಕಾರ್ಯದರ್ಶಿ ಡಿ.ಪಿ. ಅರವಿಂದ್, ಖಜಾಂಚಿ ಕೆ.ವಿ. ಸತೀಶ್ ಗೌಡ, ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ., ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ಎಂ., ಕಾರ್ಯಕಾರಿ ಸಮಿತಿ ಸದಸ್ಯರಾದ ಗಿರೀಶ್ ಬಿ.ಸಿ., ಭರದ್ವಾಜ್ ಯು.ಎಸ್., ನಂದನ್ ಕುಮಾರ್ ಸಿಂಗ್, ಕಾನೂನು ಸಲಹೆಗಾರರು ಮತ್ತು ಮಾರ್ಗದರ್ಶಕರಾದ ಷಡಾಕ್ಷರಪ್ಪ ಜಿ.ಆರ್., ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.