ಶಿಕ್ಷಕ ಎನ್.ಡಿ.ಹೆಗಡೆಗೆ ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ*
ಆನಂದಪುರ: ಇಲ್ಲಿನ ನಿವಾಸಿಯಾಗಿರುವ ಎನ್.ಡಿ.ಹೆಗಡೆಗೆ ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಚಿಕ್ಕಜೇನಿ ಸರ್ಕಾರಿ ಪ್ರೌಢ ಶಾಲಾ ಕನ್ನಡ ಶಿಕ್ಷಕ ಎನ್.ಡಿ.ಹೆಗಡೆಗೆ ಬಹುಮುಖ ವ್ಯಕ್ತಿತ್ವದಿಂದ ಜಿಲ್ಲೆಯಲ್ಲಿ ಹೆಸರು ಗಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದೇ ಡಿಸೆಂಬರ್ 27 ರಿಂದ 29 ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. 28/12/24 ರಂದು ಗಣ್ಯರು ಮತ್ತು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನದಲಾಗುವುದು ಎಂದು ಸಂಚಾಲಕ ಶ್ರೀಕಾಂತ ಹೆಗಡೆ ಅಂತರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್.ಡಿ.ಹೆಗಡೆಯವರು ಈಗಾಗಲೇ ಚಿಕ್ಕಜೇನಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಶಾಲಾ ಮೂಲ ಸೌಕರ್ಯ ಅಭಿವೃದ್ದಿ ಕಾರ್ಯದಲ್ಲಿ ತೊಡಗಿ ಯಶಸ್ವಿಯಾಗಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರಾದ ಇವರು ಕಳೆದ 30 ವರ್ಷಗಳಿಂದ ಸಾಗರ ತಾಲೂಕಿನ ಆನಂದಪುರದ ನಿವಾಸಿಯಾಗಿದ್ದಾರೆ. ಜೊತೆಗೆ ಬಿಡುವಿನ ಸಮಯದಲ್ಲಿ ಯಕ್ಷಗಾನ ತಾಳಮದ್ದಲೆ, ಗಮಕ ಕಲಾ ಪ್ರದರ್ಶನ, ಕಥೆ,ಕವನ, ಪ್ರವಾಸ ಸ್ಥಳಗಳ ಮಾಹಿತಿ ಲೇಖನ ಬರೆದು ವಿಶಿಷ್ಟ ಕಾರ್ಯ ನಡೆಸುತ್ತಿದ್ದಾರೆ. ರಾಜ್ಯದ ವಿವಿಧೆಡೆ ಸಂಚರಿಸಿ ಕೊಳವೆ ಬಾವಿ ಮತ್ತು ತೆರೆದ ಬಾವಿ ಪಾಯಿಂಟ್ ಗೆ ಯಶಸ್ವಿ ಜಲ ಸಂಶೋಧನೆ ನಡೆಸಿ ಕೊಟ್ಟು ಸಾವಿರಾರು ರೈತರಿಗೆ ಉಪಕಾರ ಮಾಡಿದ್ದಾರೆ. ಭಾವೈಕ್ಯತೆ ಮೂಡಿಸುವ ವಿವಿಧ ಸಮಾಜಮುಖಿ ಕಾರ್ಯದಲ್ಲಿ ತೊಡಗಿ ಸಾರ್ವಜನಿಕ ಗಮನ ಸೆಳೆದಿದ್ದಾರೆ. ಪ್ರಬಂಧ, ಭಾಷಣ ಇತ್ಯಾದಿಗಳಲ್ಲಿ ತೊಡಗಿಕೊಂಡಿದ್ದಾರೆ.ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಾಯದಿಂದ ಶಾಲೆಯಲ್ಲಿ ಸಿಮೆಂಟ್ ನ ಇಂಟರ್ ಲಾಕ್ ತಯಾರಿಸಿ ಶಾಲಾ ಕಾರಿಡಾರ್ ಗೆ ಅಳವಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾದರಿ ಕಾರ್ಯ ನಡೆಸಿದ್ದಾರೆ.
Leave a Comment