ವಿವಾದ್ ಸೆ ವಿಶ್ವಾಸ್ ಸ್ಕೀಮ್ ಪ್ರಯೋಜನ ಪಡೆಯಿರಿ

ಶಿವಮೊಗ್ಗ: ಹತ್ತು ವರ್ಷಗಳಿಂದ ಆದಾಯ ತೆರಿಗೆ ಇಲಾಖೆಯು ಕೈಗೊಂಡಿರುವ ಜನಸ್ನೇಹಿ ಸುಧಾರಣೆ ಕ್ರಮಗಳಿಂದ ಗಮರ್ನಾಹ ಬದಲಾವಣೆಗಳು ಆಗಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಜಿಲ್ಲಾ ಚಾರ್ಟರ್ಡ್ ಅಕೌಂಟೆಂಟ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘ, ಆದಾಯ ತೆರಿಗೆ ಇಲಾಖೆ ಸಹಯೋಗದೊಂದಿಗೆ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಾದ್ ಸೆ ವಿಶ್ವಾಸ್ ಸ್ಕೀಮ್ 2024 ಕಾರ್ಯಕ್ರಮದಲ್ಲಿ ಮಾತನಾಡಿದರು.

ಆದಾಯ ತೆರಿಗೆ ಇಲಾಖೆಯು ಇಂತಹ ಪ್ರಮುಖ ಜನಸ್ನೇಹಿ ಹಾಗೂ ಕರಾದಾತಸ್ನೇಹಿ ವ್ಯಾಜ್ಯ ಮುಕ್ತ  ತೆರಿಗೆ  ಸ್ಕೀಮ್ ಕಾರ್ಯಗಾರವನ್ನು ಎಸ್‌ಡಿಸಿಸಿಐ ಸಾರಥ್ಯದಲ್ಲಿ ನಡೆಸುತ್ತಿರುವುದು ಅಭಿನಂದನೀಯ. ತೆರಿಗೆದಾರರು ವಿವಾದ್ ಸೆ ವಿಶ್ವಾಸ್ ಸ್ಕೀಮ್ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ದಶಕಗಳಲ್ಲಿ ಆಗಿರುವ ಬದಲಾವಣೆಗಳಿಂದ ತೆರಿಗೆದಾರನಿಗೆ ಪ್ರಯೋಜನವಾಗಿದ್ದು, ಸರ್ಕಾರದ ಖಜಾನೆಗೆ ದಾಖಲೆ ಪ್ರಮಾಣದಲ್ಲಿ ನೇರ ತೆರಿಗೆ ಬಂದಿದೆ. ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ಹಾಗೂ ಮೂಲಸೌಕರ್ಯದ ಅಭಿವೃದ್ಧಿಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಮುಂದೆಯೂ ಸಹ ಆದಾಯ ತೆರಿಗೆ ಇಲಾಖೆ ಜತೆಗೆ ಸಂಘ ಕೈಗೂಡಿಸುತ್ತದೆ ಎಂದರು.

ಆದಾಯ ತೆರಿಗೆ ಆಧಿಕಾರಿ ಎಚ್.ಸಿ.ವಾಗೀಶ್ ಮಾತನಾಡಿ, ತೆರಿಗೆದಾರರಿಗೆ ಸಿಗುವ ಪ್ರಯೋಜನ ಹಾಗೂ ರಿಯಾಯಿತಿ ಕುರಿತು ವಿವರಣೆ ನೀಡಿದರು. ವಿವಾದ್ ಸೆ ವಿಶ್ವಾಸ್ ಸ್ಕೀಮ್ ಪ್ರಯೋಜನಗಳ ತೆರಿಗೆದಾರರಿಗೆ ಮಾಹಿತಿ ನೀಡಿದರು.

ಆದಾಯ ತೆರಿಗೆ ಇನ್ಸ್ಪೆಕ್ಟರ್ ಸುಧಾಮ್ ಶು ಕುಮಾರ್ ಪಿಪಿಟಿ ಮೂಲಕ ಸ್ಕೀಮ್ ನ ಅನುಕೂಲ ಪಡೆಯಲು ಅರ್ಹರಾಗುವ ತೆರಿಗೆದಾರರು, ಕೊಡಬೇಕಾದ ದಾಖಲೆ ಹಾಗೂ ಕಾರ್ಯ ವಿಧಾನದ ಬಗ್ಗೆ ವಿಸ್ಕೃತ ಮಾಹಿತಿ ನೀಡಿದರು. ನಂತರ ಸ್ಕೀಮ್ ನಿಯಮಗಳ ಹಾಗೂ ಪ್ರಯೋಜನದ ಬಗ್ಗೆ ಸಿಎ ಶ್ರೀರಾಮ್ ಸಾಗರ ಉಪನ್ಯಾಸ ನೀಡಿದರು.

ಸಿಎ ಶರತ್ ಮಾತನಾಡಿ, ತೆರಿಗೆದಾರನು ಮುಂಚಿತವಾಗಿಯೇ ತೆರಿಗೆ ವ್ಯಾಜ್ಯಗಳಿಗೆ ಒಳಪಡದೇ ಸರಿಯಾದ ದಾಖಲೆಗಳನ್ನು ಹೇಗೆ ನಿರ್ವಹಣೆ ಮಾಡಬಹುದು ಎನ್ನುವುದರ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲಾ ಸಿಎ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ವಿ.ರವೀಂದ್ರನಾಥ್, ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಅತ ಉರ್ ರೆಹಮಾನ್ ಕಾರ್ಯಗಾರದ ಉಪಯುಕ್ತತೆ ಬಗ್ಗೆ ಮಾತನಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್‌.ಮನೋಹರ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರು, ತೆರಿಗೆದಾರರು, ವಾಣಿಜ್ಯೋದ್ಯಮಿಗಳು, ಸನ್ನದು ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು, ಸದಸ್ಯರು, ಪದಾಧಿಕಾರಿಗಳು, ನಿರ್ದೇಶಕರು, ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.