ಪತ್ರಕರ್ತರು ಯಾರ ಮುಲಾಜಿಗೆ ಒಳಗಾಗಬಾರದು : ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ
ಬಳ್ಳಾರಿ ನವಂಬರ್ 28 : ಪತ್ರಕರ್ತನಿಗೆ ಸಮಾಜವನ್ನು ಕಾಯುವ ದೊಡ್ಡ ಜವಾಬ್ದಾರಿ ಇರುತ್ತದೆ ಅದರಿಂದ ಯಾವೊಬ್ಬ ಪತ್ರಕರ್ತನು ವಿಮುಖ ವಾಗಬಾರದು ಮತ್ತು ಯಾರ ಮುಲಾಜಿಗೂ ಒಳಗಾಗದೆ ಅಮಿಷಗಳಿಗೆ ಆಸೆ ಪಡದೆ ಸಮಾಜದ ಕಾವಲು ನಾಯಿಯಂತೆ ಕೆಲಸ ಮಾಡಬೇಕು ಎಂದು ದೇಶದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಗೌರವಾನ್ವಿತ ಸಂತೋಷ್ ಹೆಗಡೆ ಅವರು ತಿಳಿಸಿದರು.
ಅವರು ಇಂದು ಬಳ್ಳಾರಿ ನಗರದ ಡಾ. ರಾಜಕುಮಾರ ರಸ್ತೆಯಲ್ಲಿರುವ ಬಿಡಿಎ ಫುಟ್ಬಾಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ನಡೆದ ಬಳ್ಳಾರಿ ಜಿಲ್ಲಾ ಪತ್ರಕರ್ತರ ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪತ್ರಿಕಾ ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗವೆಂದು ಭಾವಿಸಲಾಗಿದೆ, ಇದು ಪತ್ರಕರ್ತರಿಗೆ ಹೆಮ್ಮೆಯ ವಿಷಯ ಅಷ್ಟೇ ಅಲ್ಲದೆ ಪತ್ರಕರ್ತನು ಯಾವುದೇ ಆಳುವ ಪಕ್ಷದ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು ಸಮಾಜದ ದಮನಿತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಪತ್ರಕರ್ತರಿಗೆ ಕರೆ ನೀಡಿದರು.
ಕಮ್ಮರಚಿಡು ಮಠದ ಕಲ್ಯಾಣ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಕೋರಿದರು.
ನಗರ ಶಾಸಕ ಭರತ್ ರೆಡ್ಡಿ ಮಾತನಾಡಿ, ಪತ್ರಕರ್ತರ ಯಾವುದೇ ಸಮಸ್ಯೆಗಳಿಗೆ ನನ್ನನ್ನು ಸಂಪರ್ಕಿಸಬಹುದು ನಾನು ಯಾವಾಗಲೂ ನಿಮ್ಮ ಸೇವೆಗೆ ಸದಾ ಸಿದ್ಧನಿರುತ್ತೇನೆ ಮತ್ತು ಯಾವುದೇ ಕಾರ್ಯಕ್ರಮಗಳಿಗೆ ತನು ಮನ ಧನದಿಂದ ಸಹಾಯ ಮತ್ತು ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ಸಂತೋಷ್ ಹೆಗಡೆಯಂತ ಮಹಾನ್ ವ್ಯಕ್ತಿ ನಮ್ಮ ಸಮ್ಮೇಳನಕ್ಕೆ ಆಗಮಿಸಿರುವುದು ನಮ್ಮ ಪುಣ್ಯ ಅವರು ಈ ಇಳಿ ವಯಸ್ಸಿನಲ್ಲಿ ಸಹ ನಮ್ಮ ಜೊತೆಯಲ್ಲಿ ಬಂದು ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ ನಮಗೆ ಶಕ್ತಿ ತುಂಬುತ್ತಿದ್ದಾರೆ ಅವರಿಗೆ ನಮ್ಮ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಹೃತ್ಪೂರ್ವಕವಾಗಿ ಧನ್ಯವಾದಗಳು ತಿಳಿಸುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಗಿರಿ ಯಾದವ್ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಚಾರ್ಟೆಡ್ ಅಕೌಂಟೆಂಟ್ ಪನ್ನರಾಜ್, ನಿವೃತ್ತ ಅಭಿಯೋಜಕರಾದ ಬಿ ಜಯರಾಮ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮಹಾನಗರ ಪಾಲಿಕೆ ಮೇಯರ್ ನಂದೀಶ್, ಸದಸ್ಯ ಕೆ ಹನುಮಂತಪ್ಪ, ಕಾನೀಪ ಧ್ವನಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಬಿ ಪ್ರಭಾಕರ್, ಕುರುಗೋಡು ಭೀಮಣ್ಣ, ಸಂಘಟನೆಯ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸೇರಿದಂತೆ ಹಲವಾರು ಜನರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ದಿಲ್ ಸೆ ಸನ್ನಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
Leave a Comment