302 ಕೊಲೆ ಪ್ರಕರಣದಡಿ ಎಫ್.ಐ.ಆರ್: ಕ್ರಮವಿಲ್ಲರತಿಲ್ ಶವ ಮರು ಮರಣೋತ್ತರ ಪರೀಕ್ಷೆಗೆ ಆಗ್ರಹ

ಶಿವಮೊಗ್ಗ: ಕೊಲೆಗಾರರ ವಿರುದ್ಧ ದೂರು ಕೊಟ್ಟರೂ ಭದ್ರಾವತಿಯ ಗ್ರಾಮಾಂತರ ಠಾಣೆಯ ಪೋಲಿಸ್ ಅಧಿಕಾರಿಗಳು ದೂರು ಸ್ವೀಕರಿಸದೆ ನನ್ನ ಮಗ ರತಿಲ್ ಕುಮಾರ್‌ ಸಾವಿನ ಸತ್ಯವನ್ನು ಮುಚ್ಚಿಹಾಕಿ ಆರೋಪಿಗಳ ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಭದ್ರಾವತಿಯ ಹೊಸಬುಳ್ಳಾಪುರದ ನಿವಾಸಿ ಮೃತ ರತಿಲ್ ಕುಮಾರ್‌ ಅವರ ಪೋಷಕರಾದ ವಿ.ಇಂದ್ರೇಶ್‌ ಅವರು ಇತ್ತೀಚೆಗೆ  ಗೃಹ ಸಚಿವ ಜಿ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದರು.

ಭದ್ರಾವತಿ ತಾಲ್ಲೂಕಿನ ಹೊಸಬುಳ್ಳಾಪುರದ ನಿವಾಸಿ ರತಿಲ್ ಕುಮಾರ್‌ ಅವರ ಕೊಲೆ ನಡೆದು ಒಂದು ವರ್ಷ ಕಳೆದಿದೆ. ಕೊಲೆಗಾರರು ಯಾರು ಎನ್ನುವುದು ಪೊಲೀಸರಿಗೆ ಸಂಪೂರ್ಣ ಮಾಹಿತಿ ಇದೆ. ಆದರೆ, ಆರೋಪಿಗಳನ್ನು ಬಂದಿಸದೆ ಪೊಲೀಸರು ಮೀನಾಮೇಶ ಎಣಿಸುತ್ತಾ ಬಂದಿದ್ದಾರೆ ಎಂದು ದೂರಿದರು.

ಆರೋಪಿಗಳ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ಆಗಿಲ್ಲ. ಆದ್ದರಿಂದ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗೂ ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರನ್ನು ಭೇಟಿಯಾಗಿ ಕೊಲೆ ಪ್ರಕರಣವಾಗಿ ಎಫ್.ಐ.ಆರ್ ದಾಖಲಿಸಲು ಮನವಿ ಮಾಡಲಾಗಿತ್ತು. ಮಧು ಬಂಗಾರಪ್ಪರವರ ಆದೇಶದ ಮೇರೆಗೆ 2024ರ ಏಪ್ರಿಲ್‌ 16 ರಂದು ಭದ್ರಾವತಿಯ ಗ್ರಾಮಾಂತರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಇಲ್ಲಿ 302 ಕೊಲೆ ಕೇಸಿನಡಿ ಎಫ್.ಐ.ಆರ್ ದಾಖಲಾಗಿದೆ. ಆದರೆ, ಪ್ರಕರಣದ ಆರೋಪಿಗಳನ್ನು ಪೋಲಿಸರು ಬಂದಿಸದೆ ಸುಮ್ಮನಿದ್ದಾರೆ. ಇದನ್ನೆಲ್ಲಾ ನೋಡಿದರೆ ಪೋಲಿಸ್ ಅಧಿಕಾರಿಗಳು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಇಲ್ಲಿ ಆ. 22 ರಂದು ಪೋಲಿಸ್ ಇಲಾಖೆಯವರು ಕೊಲೆ ನಡೆದಿದ್ದು ಸುಳ್ಳು ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ದೂರಿದರು.

ನಾವು ದಲಿತರು ಎಂಬ ಕಾರಣಕ್ಕೆ ನಮ್ಮನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬನೇ ಮಗನನನ್ನು ಕಳೆದುಕೊಂಡು ಅನಾಥರಾಗಿರುವ ನಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ನನ್ನ ಮಗನ ಸಾವಿಗೆ ಕಾರಣರಾದವರನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಿಬೇಕು. ಶವವನ್ನು ಮರು ಮರಣೋತ್ತರ ಪರೀಕ್ಷೆಗೆ  ಒಳಪಡಿಸಬೇಕು ಎಂದು ಒತ್ತಾಯಿಸಿದರು.





ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.