*ಕಣ್ಮನ ಸೆಳೆಯುವ ಬಾಳೆಬರೆ ಜಲಪಾತ*.


ಶಿವಮೊಗ್ಗ: ಮಳೆಗಾಲ ಬಂತೆಂದರೆ ಮಲೆನಾಡಿನಲ್ಲಿ ಅನೇಕ ಜಲಪಾತಗಳು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡು ನೂರಾರು ಜನರನ್ನು ತನ್ನತ್ತ ಸೆಳೆಯುತ್ತವೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಯಿಂದ ಏಳೆಂಟು ಕಿ ಮೀ ದೂರದ ಹುಲಿಕಲ್ ಘಾಟಿಯ ಒಂದು ಸುಂದರ ಜಲಪಾತ ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಜನರಿಗೆ ಮನಸ್ಸಿಗೆ ಮುದ ನೀಡುವ ಮೂಲಕ ತನ್ನ ವೈಭವವನ್ನು ಜಗತ್ತಿಗೆ ಪ್ರಚುರ ಪಡಿಸುತ್ತಿದೆ.
ಬಾಳೆ ಬರೆ ಘಾಟಿಯ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಶ್ರೀ ಚಂಡಿ ಕಾಂಬ ದೇವಸ್ಥಾನದಿಂದ ಕುಂದಾಪುರ ಮುಖ್ಯ ರಸ್ತೆಯ ಕೇವಲ ಒಂದು ಕೀ. ಮೀ ದೂರದ ಘಾಟಿಯಲ್ಲಿ ಭೋರ್ಗರೆಯುವ ಈ ಜಲಪಾತ ಹುಲಿಕಲ್ ಘಾಟಿಯ ಮೇಲ್ಭಾಗದಿಂದ ಬೀಳುವ ಮಳೆಯ ನೀರು ಒಟ್ಟಾಗಿ ನದಿ ರೂಪದಲ್ಲಿ ಹರಿದು ಕಲ್ಲು ಬಂಡೆಗಳ ಮೇಲೆ ಧುಮುಕಿ ಕಾಡಿನ ಮಧ್ಯೆ ಚಿದ್ರವಾಗಿ ಹರಿದು ವಾರಾಹಿ ನದಿಗೆ ಸೇರಿ ಸಮುದ್ರ ಸೇರುತ್ತದೆ.
       ದಿನನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆ ನಡುವೆ ಕಾಣಸಿಗುವ ಈ ಜಲಪಾತವು ವಾಹನ ಸವಾರರನ್ನು ತನ್ನ ಭೋರ್ಗರೆತ ದ ಮೂಲಕ ಸೆಳೆದು ತಡೆದು ನಿಲ್ಲಿಸಿ ಬರುವ ಪ್ರವಾಸಿಗರಿಗೆ ನೀರಿನ ಸಿಂಚನ ಹರಿಸಿ ಒಮ್ಮೆಲೇ ಹೊಸ ಅನುಭವ ದೆಡೆಗೆ ಕೊಂಡೊಯ್ಯುತ್ತದೆ.
ಜಲಪಾತವನ್ನು ಕೆಳಗಿನಿಂದ ವೀಕ್ಷಿಸುವಾಗ ,ಆಹ್ಲಾಧಿಸುವಾಗ ಎಲ್ಲೋ ಮೇಲಿನಿಂದ ಬಂಡೆಗಳು ಜಾರಿದರೆ ಹೇಗೆ ಎಂಬ ಭಯವೂ ಸಹ ಒಮ್ಮೊಮ್ಮೆ ಮನಸ್ಸಿಗೆ ಬಂದು ಹೋಗುತ್ತದೆ.
    ಹಾಗೆಯೇ ಮನುಷ್ಯ ಪ್ರಕೃತಿಯ ನಡುವೆ ಬೆರೆತರೆ ಅದರಲ್ಲಿ ಸಿಗುವ ಆನಂದ ಅಷ್ಟಿಷ್ಟಲ್ಲ.. ಅಂತಹ ಒಂದು ಅನುಭವ ನಮಗೆ ಅಲ್ಲುಂಟು..
ಒಂದಷ್ಟು ಜನರು ಹೊಯ್ ಎಂಥಾ ಮಾರ್ರೆ ಒಂದ್ ನಮೂನಿ ಚಂದ ಕಾಣುತ್ ಮಾರ್ರೆ, ಅಯ್ಯಬ್ಬ ...! ಅಲ್ಕಾಣಿ ಬಂಡಿ,, ಸ್ನಾನ ಮಾಡುಕೆ ಲಾಯಕ್ ಆತ್ತು ಅಲ್ದಾ ಅಂತ್ರು.
ಮತ್ತಷ್ಟು ಜನರು ವಾವ್ ಸೂಪರ್, ಏನ್ ಮಜಾ ಇದೆ ಅಲ್ವಾ ಅಣ್ಣ,, ಅಕ್ಕ ಇಲ್ಲಿ ಬಾ ಸೆಲ್ಫಿ ತೆಗೆಯೋಣ, ಅಮ್ಮ ಅಲ್ಲಿ ನಿಧಾನ ಬಾ ಅಂತ ಹೇಳುವ ಮಲೆನಾಡು ಹಾಗೂ ದಕ್ಷಿಣ ಕನ್ನಡ ಭಾಷೆ ಇದರ ನಡುವೆ ಕುತೂಹಲ ಮೂಡಿಸುತ್ತವೆ.
     ಆದರೆ ಈ ಜಲಪಾತವನ್ನು ವೀಕ್ಷಿಸಲು ನಿಲ್ಲುವ ಪ್ರವಾಸಿಗರು ತುಂಬಾ ಎಚ್ಚರ ವಹಿಸಬೇಕಾಗುತ್ತದೆ. ಕಾರಣ ಮಾರ್ಗ ಮಧ್ಯೆ ನೂರಾರು ವಾಹನಗಳು ಸಂಚರಿಸುವಾಗ ಮಕ್ಕಳು, ಮಹಿಳೆಯರು ಫೋಟೋ, ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಮೈಮರೆಯಬಾರದು.. ವಾಹನ ಸಂಚಾರವನ್ನು ಗಮನಿಸಿ ನೋಡಬೇಕಾಗುತ್ತದೆ.
     ಇಲ್ಲಿಗೆ ಆಗಮಿಸುವ ಅನೇಕ ಪ್ರವಾಸಿಗರು ಶ್ರೀ ಚಂಡಿಕಾಂಭ ದೇವಿಯ ದರುಶನ ಪಡೆದು , ಪೂಜೆ ಮಾಡಿಸಿ ಅನ್ನ ಪ್ರಸಾದ ಸ್ವೀಕರಿಸಿ ಮುಂದೆ ಹೋಗುತ್ತಾರೆ. 
ಶ್ರೀ ದೇವಿಯ ಅನುಗ್ರಹ ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂಬುದೇ ನಮ್ಮೆಲ್ಲರ ನಂಬಿಕೆ.
  ಏನೇ ಆದರೂ ನಾವೆಲ್ಲ ಇಂತಹ ಪ್ರಕೃತಿ ಸೌಂದರ್ಯ ಅನುಭವಿಸಲು ಬಂದು ಹಾಗೆಯೇ ಜಾಗರೂಕತೆಯಿಂದ ಮುಂದೆ ಹೋದರೆ ಎಲ್ಲರಿಗೂ ಕ್ಷೇಮ.
*ವರದಿ: ಹೆಚ್. ವಾಸಪ್ಪ ಮಾಸ್ತಿಕಟ್ಟೆ*.9449948721.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.