*ಟಿವಿ ವಾಹಿನಿಗಳಲ್ಲಿ ಆಕ್ಷೇಪಾರ್ಹ ಕಾರ್ಯಕ್ರಮಗಳು ಪ್ರಸಾರವಾದರೆ ವಾರ್ತಾ ಇಲಾಖೆಗೆ ದೂರು ನೀಡಿ*

ಶಿವಮೊಗ್ಗ ಜನವರಿ 18 :
     ಜಿಲ್ಲೆಯಲ್ಲಿ ಕೇಬಲ್ ಟಿವಿ ಹಾಗೂ ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ದೂರುಗಳಿದ್ದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇಲ್ಲಿಗೆ ದೂರುಗಳನ್ನು ಸಲ್ಲಿಸಬಹುದು.
        ಕೇಬಲ್ ಟೆಲಿವಿಷನ್ ನೆಟ್ವರ್ಕ್ (ರೆಗ್ಯುಲೇಶನ್) ಆಕ್ಟ್ 1995 ರ ಪರಿಚಯದ 6 ಕಾರ್ಯಕ್ರಮ ಸಮಿತಿಯಂತೆ ಸೇವೆಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮವು ಸದಭಿರುಚಿ ಅಥವಾ ಸಭ್ಯತೆ ವಿರುದ್ಧ, ಮಿತ್ರ ರಾಷ್ಟ್ರಗಳ ಟೀಕೆ, ಧರ್ಮ ಸಮುದಾಯ ಅಥವಾ ಧಾರ್ಮಿಕ ಸಮೂಹಗಳನ್ನು ನಿಂದಿಸುವ ಮಾತುಗಳು, ದೃಶ್ಯಗಳು ಅಥವಾ ಕೋಮುವಾದಿ ಭಾವನೆಗಳನ್ನು ಉತ್ತೇಜಿಸುವುದು, ಯಾವುದೇ ಅಸಹ್ಯಕರ, ಮಾನನಷ್ಟ ಮಾಡುವಂತಹ ಉದ್ದೇಶಪೂರ್ವಕ ಸುಳ್ಳು, ಸೂಚನಾತ್ಮಕ ವ್ಯಂಗ್ಯೋಗ್ತಿ,  ಅರ್ಧ ಸತ್ಯ, ಹಿಂಸೆಯನ್ನು ಉತ್ತೇಜಿಸುವ, ಪ್ರಚೋದಿಸುವ,  ಕಾನೂನು ಮತ್ತು ಶಿಸ್ತು ಪಾಲನೆ ಕೆಣಕುವುದು, ರಾಷ್ಟ್ರ ವಿರೋಧಿ ಭಾವನೆಯನ್ನು ಉತ್ತೇಜಿಸುವುದು ಅಥವಾ ನ್ಯಾಯಾಲಯ ನಿಂದನೆಗೆ ಕಾರಣವಾಗುವಂತಹ ಅಂಶಗಳು ಕಂಡು ಬಂದರೆ ಯಾವುದೇ ನಾಗರಿಕರು ಅದರ ವಿರುದ್ಧ ವಾರ್ತಾ ಇಲಾಖೆಗೆ ದೂರು ಸಲ್ಲಿಸಬಹುದಾಗಿದೆ.
       ಕಾಯ್ದೆಯ ಪರಿಚ್ಚೇದ 7 ರಂತೆ ಜಾಹೀರಾತು ಸಂಹಿತೆಗೆ ಸಂಬಂಧಿಸಿದಂತೆ ಕೇಬಲ್ ಸೇವೆಯಲ್ಲಿ ಪ್ರಸಾರವಾಗುವ ಜಾಹೀರಾತುಗಳು ದೇಶದ ಕಾನೂನುಗಳಿಗೆ ಪೂರಕವಾಗಿರಬೇಕು ಮತ್ತು ಚಂದಾದಾರರ ನೈತಿಕತೆ ಮತ್ತು ಸಭ್ಯತೆ ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡಬಾರದು. ಯಾವುದೇ ಮತ, ಜಾತಿ, ವರ್ಣ,  ಕೋಮು ಮತ್ತು ರಾಷ್ಟ್ರೀಯತೆಯನ್ನು ಅವಹೇಳನ ಮಾಡಬಾರದು. ಭಾರತ ಸಂವಿಧಾನದ ಯಾವುದೇ ಉಪಬಂಧದ ವಿರುದ್ಧ ಇರಬಾರದು, ಜನರನ್ನು ಅಪರಾಧಕ್ಕೆ ಪ್ರಚೋದಿಸುವುದಾಗಲಿ, ಅಶಾಂತಿ ಅಥವಾ ಹಿಂಸೆಗೆ ಯಾವುದೇ ರೀತಿಯ ಅಶ್ಲೀಲತೆಗೆ ಕಾರಣವಾಗುವುದಕ್ಕೆ ಅವಕಾಶ ಉಂಟಾಗಬಾರದು. ಅಪರಾಧಿಕರಣ ಬಯಸುವಂತೆ ಬಿಂಬಿಸಬಾರದು ಹಾಗೂ ರಾಶಿಯ ಲಾಂಛನ, ಸಂವಿಧಾನದ ಯಾವುದೇ ಭಾಗ ಅಥವಾ ವ್ಯಕ್ತಿ ರಾಷ್ಟ್ರೀಯ ನಾಯಕರ ವ್ಯಕ್ತಿತ್ವ ಅಥವಾ ರಾಷ್ಟ್ರದ ಗಣ್ಯರ ಶೋಷಣೆ ಆಗಬಾರದು. ಇವುಗಳನ್ನು ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಸಾರ್ವಜನಿಕರು ದೂರುಗಳನ್ನು ಸಂಬಂಧಿಸಿದ ಜಿಲ್ಲಾ ನಿರ್ವಹಣಾ ಸಮಿತಿಗೆ ಅಥವಾ ರಾಜ್ಯ ನಿರ್ವಹಣಾ ಸಮಿತಿಗೆ ಸಲ್ಲಿಸಬಹುದಾಗಿದೆ.
        ಕೇಬಲ್ ಟಿವಿ ಹಾಗೂ ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಯಾವುದೇ ಆಕ್ಷೇಪಗಳು ಕಂಡು ಬಂದಲ್ಲಿ ಜಿಲ್ಲಾ ನಿರ್ವಹಣಾ ಸಮಿತಿ,  ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಅಥವಾ ಮೊಬೈಲ್ ಸಂಖ್ಯೆ 9480841222 ಅಥವಾ ಇ-ಮೇಲ್ ವಿಳಾಸ varthabhavansmg1@gmail.com ಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.