ಡಿ. 9ರಂದು ನಗರದ ಕುವೆಂಪು ರಂಗಮಂದಿರದಲ್ಲಿ ರಾಗ- ಅನುರಾಗ ಹಳೆಯ ಚಲನ ಚಿತ್ರಗೀತೆಗಳ ಕಾರ್ಯಕ್ರಮ
ಶಿವಮೊಗ್ಗ: ಶಿವಮೊಗ್ಗದಲ್ಲಿ ಸತತವಾಗಿ ಅನೇಕ ರಾಷ್ಟ್ರೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ "ಅನಿಕೇತನಾ ಸೇವಾ ಟ್ರಸ್ಟ್" ಈ ಬಾರಿ "ರಾಗ-ಅನುರಾಗ' ವೆಂಬ ವಿನೂತನವಾದ ಶಾಸ್ತ್ರೀಯ ಸಂಗೀತದ ರಾಗಾಧಾರಿತ ಹಳೆಯ ಚಲನ ಚಿತ್ರಗೀತೆಗಳ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅನಿಕೇತನಾ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ರಮೇಶ್ ಬಾಬು ಜಾಧವ್ ಹೇಳಿದರು.
ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಅಂತರಾಷ್ಟ್ರೀಯ ಖ್ಯಾತಿಯ ನಮ್ಮ ಶಿವಮೊಗ್ಗದ ಹೆಮ್ಮೆಯ ಕಲಾವಿದರಾದ ಶ್ರೀ ದೀಪಕ್ ಜಯಶೀಲನ್ ಸಂಗೀತ ಸಾರಥ್ಯದಲ್ಲಿ ನಡೆಯಲಿರುವ ಈ ಸಂಗೀತ ಸಂಜೆಯಲ್ಲಿ ನಮ್ಮ ಶಿವಮೊಗ್ಗದ ಖ್ಯಾತ ಕಲಾವಿದರಾದ ಶ್ರೀಮತಿ ಶೃತಿ ರಾಘವೇಂದ್ರನ್, ಶ್ರೀ ಪೃಥ್ವಿ ಗೌಡ, ಶ್ರೀ ಪಾರ್ಥ ಚಿರಂತನ್ ಹಾಗು ಕುಮಾರಿ ಸಂಜನಾ ಕುಮಾರ್ ಹಾಡಲಿದ್ದಾರೆ ಎಂದರು.
ಶ್ರೀ ವಿನಯ್ ಶಿವಮೊಗ್ಗ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಗಾನ ಸಂಭ್ರಮ ಇದೇ ಡಿಸೆಂಬರ್ 9ನೇ ತಾರೀಖು ಶನಿವಾರ ಸಂಜೆ 5.30 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದರು.
ಅನಿಕೇತನಾ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ರಮೇಶ್ ಬಾಬು ಜಾಧವ್ ಅವರ ಆಯೋಜನೆಯಲ್ಲಿ ನಡೆಯಲಿರುವ ಈ ವಿಶೇಷವಾದ ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಜೀವಾಳವಾದ ರಾಗಗಳ ವಿವಿಧ ಸ್ವರೂಪಗಳನ್ನು ಬಳಸಿ ಸಂಯೋಜಿಸಲಾದ ಹಳೆಯ ಮಾಧುರ್ಯಪೂರ್ಣವಾದ ಚಿತ್ರಗೀತೆಗಳನ್ನು ವಿಶೇಷ ವಾದ್ಯಗೋಷ್ಠಿಯ ಹಿನ್ನೆಲೆಯಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದರು.
"ವಿಶೇಷ ವಾಗಿ ಕಾರ್ಯಕ್ರಮ ರಂಗಭೂಮಿ, ಟಿವಿ ಧಾರವಾಹಿ,ಚಲನಚಿತ್ರ ಕಲಾವಿದರಾದ ಶ್ರೀ ವಿಹಾನ್ ಪ್ರಭಂಜನ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ" ಎಂದರು.
ಈ ಶುದ್ಧ-ಸತ್ವಪೂರ್ಣ ಮನರಂಜನೆಯ ಸಂಗೀತಮಯ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕಲಾಭಿಮಾನಿಗಳು, ಸಂಗೀತ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿ ಯಲ್ಲಿ ವಿಶ್ವೇಶ್ವರಯ್ಯ, ಪೃಥ್ವಿ ಗೌಡ,ಆನಂದ್ ರಾವ್ ಉಪಸ್ಥಿತರಿದ್ದರು.

Leave a Comment