ಕೃಷಿ ಮಾರುಕಟ್ಟೆ ಸಚಿವ ಶಿವಾನಂದ .ಎಸ್ ಪಾಟೀಲ್ ಹಾಗೂ ಪರಿಶೀಲನಾ ಸಮಿತಿಯ ಸದಸ್ಯರು,ಶಿವಮೊಗ್ಗ ಜಿಲ್ಲಾ ಎಪಿಎಂಸಿ ಗೆ ಭೇಟಿ- ಪರಿಶೀಲನೆ- ಸಭೆ

 ಶಿವಮೊಗ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ 2023 ನ್ನು ಪರಿಶೀಲಿಸಿ ಸದನಕ್ಕೆ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ಪರಿಶೀಲನಾ ಸಮಿತಿಯ ಅಧ್ಯಕ್ಷರು ಹಾಗೂ ಜವಳಿ , ಕಬ್ಬು,ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ .ಎಸ್ ಪಾಟೀಲ್ ಹಾಗೂ ಪರಿಶೀಲನಾ ಸಮಿತಿಯ ಸದಸ್ಯರು, ಅಧಿಕಾರಿಗಳು ಶಿವಮೊಗ್ಗ ಜಿಲ್ಲಾ ಎಪಿಎಂಸಿ ಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. 
        ಹಾಗೂ ಅಡಿಕೆ ವರ್ತಕರ ಸಂಘ ಮತ್ತು ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ವಿಧೇಯಕ ತಿದ್ದುಪಡಿ ಸಂಬಂಧ ಸಲಹೆಗಳನ್ನು ಪಡೆದುಕೊಂಡರು. ನಂತರ ಎಪಿಎಂಸಿ ವರ್ತಕರ ಸಹಕಾರ ಬ್ಯಾಂಕ್ ಗೆ ಭೇಟಿ ನೀಡಿ ಚರ್ಚಿಸಿದರು. ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಶಂಕರಪ್ಪ ಮಾತನಾಡಿ, ಅಡಿಕೆ ಹೈ ವ್ಯಾಲ್ಯೂ ಕಮಾಡಿಟಿ ಎಂದು 60 ಪೈಸೆ ಸೆಸ್ ವಿಧಿಸಲಾಗುತ್ತಿದೆ. ಒಂದು ಲೋಡ್ ಗೆ ರೂ 75 ರಿಂದ 1 ಲಕ್ಷದವರೆಗೆ ಸೆಸ್ ಆಗುತ್ತದೆ. ಇದು ತುಂಬಾ ಹೊರೆಯಾಗಿದೆ. ಆದ್ದರಿಂದ ಎಲ್ಲರಿಗೂ ಸಮಾನವಾದ ಕನಿಷ್ಠ ದರವನ್ನು ನಿಗದಿಪಡಿಸಬೇಕು.
      ಹೊಸಬರಿಗೆ ಶೀಘ್ರವಾಗಿ ಪರವಾನಗಿ ನೀಡಬೇಕು. ಹಾಗೂ ಪರವಾನಗಿ ಸುಲಭವಾಗಿ ಲಭಿಸಬೇಕು. ಯಾರ್ಡ್ ನಲ್ಲಿ ಸಾಕಷ್ಟು ಮಳಿಗೆಗಳಿದ್ದು ಹೆಚ್ಚಿನವರಿಗೆ ಅವಕಾಶ ನೀಡಬೇಕು. ಮಿತಿಯನ್ನು ಸಡಿಲಗೊಳಿಸಬೇಕು. ಹಾಗೂ ಮುಖ್ಯವಾಗಿ ಎಪಿಎಂಸಿ ಮಳಿಗೆಗಳನ್ನು ಆಧಾರ ಮಾಡಿ ಸಾಲ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
      ಇನ್ನೋರ್ವ ಪದಾಧಿಕಾರಗಳು, ಎ ಸಿ ಎಂ ಸಿ ಯಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯಿಂದ ಯಾವುದೇ ರೀತಿಯ ಸೇವೆ ಪಡೆಯುತ್ತಿಲ್ಲ. ಬದಲಾಗಿ ಎಪಿಎಂಸಿ ಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಆದರೂ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸುತ್ತಿದ್ದು ಹೊರೆಯಾಗುತ್ತಿದೆ. ಆದ್ದರಿಂದ ಪ್ರತ್ಯೇಕ ವರ್ಗದ ತೆರಿಗೆಯನ್ನು ವಿಧಿಸಲು ಕ್ರಮ ವಹಿಸಬೇಕೆಂದು ಕೋರಿದರು.
        ಸಮಿತಿ ಸದಸ್ಯರಾದ ಡಿ. ಎಸ್.ಅರುಣ್ ಮಾತನಾಡಿ, ಪ್ರಸ್ತುತ ಕಮರ್ಷಿಯಲ್ ಮತ್ತು ರೆಸಿಡೆನ್ಸಿಯಲ್ ತೆರಿಗೆ ಮಾತ್ರ ಸಂಗ್ರಹಿಸಲಾಗುತ್ತಿದೆ. ಮಳಿಗೆಗಳು ಕಮರ್ಷಿಯಲ್ ತೆರಿಗೆ ಅಡಿ ಬರುತ್ತಿರುವುದರಿಂದ ಹೊರೆಯಾಗುತ್ತಿದೆ. ಕೈಗಾರಿಕೆ ಹಾಗೂ ಎ ಪಿ ಎಂಸಿ ಗೆ ಮೂರನೇ ವರ್ಗದ ಪ್ರತ್ಯೇಕ ತೆರಿಗೆ ವ್ಯವಸ್ಥೆ ಮಾಡುವಂತೆ ಕೋರಿದರು.
       ಸಭೆಯಲ್ಲಿ ಸಮಿತಿ ಸದಸ್ಯರಾದ ಅನಿಲ್ ಕುಮಾರ್, ಹೇಮಲತಾ ನಾಯಕ್, ತಿಪ್ಪೇಸ್ವಾಮಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಪ್ರಸಾದ್ ಇತರೆ ಅಧಿಕಾರಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.