ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಉನ್ನತ ಶಿಕ್ಷಣ ಸಚಿವರಿಗೆ ಆಯನೂರು ಮಂಜುನಾಥ್ ಒತ್ತಾಯ

ಶಿವಮೊಗ್ಗ, ನ.29:
ಉನ್ನತ ಶಿಕ್ಷಣ ಪಡೆದು ಅತಿಥಿ ಉಪನ್ಯಾಸಕರಾಗಿ ಸೇವಾಭದ್ರತೆ ಇಲ್ಲದೇ ದುಡಿಯುತ್ತಿರುವ ದೊಡ್ಡ ಸಮೋಹ ಕಳವಳಕ್ಕೆ ಒಳಗಾಗಿದ್ದು, ಕೂಡಲೇ ಉನ್ನತ ಶಿಕ್ಷಣ ಸಚಿವರು ಇತ್ತ ಗಮನಿಸಿ ಅವರ ಬೇಡಿಕೆ ಈಡೇರಿಸುವ ಜೊತೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್ ಒತ್ತಾಯಿಸಿದರು.
ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಾ ಸೇವಾ ಭದ್ರತೆಗೋಸ್ಕರ ಅತಿಥಿ ಉಪನ್ಯಾಸಕರು ಪ್ರತಿಭಟನೆಗೆ ಇಳಿದಿದ್ದು, ಕಾಲೇಜು ಆರಂಭಗೊಂಡಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ತೊಂದರೆ ಆಗಿದೆ. ಯಾವುದೇ ಸೌಲಭ್ಯವಿಲ್ಲದ ಸುಮಾರು ಹದಿನೈದಕ್ಕೂ ಹೆಚ್ಚು ವರ್ಷಗಳಿಂದ  ಅತಿಥಿ ಉಪನ್ಯಾಸಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸೌಲಭ್ಯ ನೀಡುವ ಜೊತೆಗೆ ಸೇವಾ ಭದ್ರತೆ ಒದಗಿಸುವ ಕಾರ್ಯವನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯವಾಗಿ ಉನ್ನತ ಶಿಕ್ಷಣ ಸಚಿವರು ಮಾಡುತ್ತಾರೆ ಎಂಬ ಭರವಸೆ ಇದೆ ಎಂದರು. ಕಾಲೇಜುಗಳಲ್ಲಿ ಈಗ ಪಾಠ ಪ್ರವಚನಗಳು ನಡೆಯಬೇಕಿದೆ. ಇನ್ನು ಕೆಲವು ಕಡೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿಲ್ಲ. ಅದನ್ನು ಗುರುತಿಸಿ ಅತಿಥಿ ಉಪನ್ಯಾಸಗಳನ್ನು ನೇಮಿಸಿಕೊಳ್ಳುವ ಜೊತೆಗೆ ಅವರಿಗೆ ಅವರ ಪ್ರಮುಖ ಬೇಡಿಕೆಯಾದ ಸೇವಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ವಿನಂತಿಸಿದರು. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಉಪನ್ಯಾಸದ ಪರಿಸ್ಥಿತಿಯನ್ನು ನೋಡಿದರೆ ನಿಜಕ್ಕೂ ಗಾಬರಿಯಾಗುತ್ತಿದೆ. ಇಲ್ಲಿ ಜವಾಬ್ದಾರಿ ನೋಡಿಕೊಳ್ಳುವ ಕುವೆಂಪು ವಿಶ್ವವಿದ್ಯಾನಿಲಯ ಮಕ್ಕಳ ಕಲಿಕೆ ವಿಷಯ, ಪಠ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಕಾಮಗಾರಿಗಳ ವಿಚಾರದಲ್ಲಿ ಹೆಚ್ಚು ಯೋಚಿಸುತ್ತಿದೆ. ಇದು ಕಾಮಗಾರಿ ಮನೋಭಾವದ ವಿವಿಯಾಗಿದೆ. ಕುವೆಂಪು ವಿವಿಯ ನಿರ್ಲಕ್ಷ ಧೋರಣೆ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದರು.
ರಾಜ್ಯ ಸರ್ಕಾರ ಓಪಿಎಸ್ ಹಾಗೂ ಎನ್‌ಪಿಎಸ್ ವಿಚಾರದಲ್ಲಿ ಗಮನಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ಬದ್ಧವಾಗಿ ಒಪಿಎಸ್ ನೀಡುವ ಯೋಜನೆಯನ್ನು ಜಾರಿಗೆ ತರುವ ಚಿಂತನೆಯು ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ ಎಂದರು. ಬಿಜೆಪಿಗೆ  ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಎನ್ನುವ ಬದಲು ಯಡಿಯೂರಪ್ಪ ಅವರನ್ನೇ  ಕೂರಿಸಿದ್ದಾರೆ ಎನ್ನಬೇಕು. ಹಿಂದೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಮಾಡಿದ್ದ ತಪ್ಪನ್ನು ಮುಚ್ಚಿಕೊಳ್ಳಲು ವಿಜಯೇಂದ್ರ ಅವರಿಗೆ ಈ ಸ್ಥಾನವನ್ನು ನೀಡಲಾಗಿದೆ. ಈಗ ನಿಜವಾಗಿಯೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಶಿವಮೊಗ್ಗ ಅತ್ಯುತ್ತಮ ನಾಯಕರನ್ನು ನೀಡುವ ಕೇಂದ್ರ ಸ್ಥಾನವಾಗಿದೆ. ಅಂತೆಯೇ ಯುವಕ ವಿಜಯೇಂದ್ರ ಅವರಿಗೆ ಆ ಸ್ಥಾನ ಸಿಕ್ಕಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಆಡಳಿತ ಪಕ್ಷವನ್ನು ಕೇವಲ ಟೀಕಿಸುವ ಉದ್ದೇಶವನ್ನು ಹೊಂದಿರದೆ, ಸಮರ್ಥವಾದ ವಿರೋಧ ಪಕ್ಷವಾಗಿ ಕೆಲಸ ಮಾಡಿದರೆ ಆಡಳಿತ ಪಕ್ಷಕ್ಕೆ ಹಾಗೂ ಜನರ ನೋವುಗಳಿಗೆ ಸ್ಪಂದಿಸುವ ಮನೋಭಾವ ಹಾಗೂ  ಸುಲಲಿತ ದಕ್ಷ ಆಡಳಿತ ದೊರಕುತ್ತದೆ ಎಂದರು. ಮಾಜಿ ಮುಖ್ಯಮಂತ್ರಿ ಜೆಡಿಎಸ್ ನ ಕುಮಾರಸ್ವಾಮಿ ಅವರನ್ನು ವಿಜಯೇಂದ್ರ ಅವರು ಭೇಟಿ ಮಾಡಿದ್ದಾರೆ ಎಂಬ ಪ್ರಶ್ನೆಗೆ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರ ಅವರ ಬಗ್ಗೆ ಕುಮಾರಸ್ವಾಮಿ ಆಡಿದ್ದ ಮಾತುಗಳನ್ನು ಹಾಗೂ ಸದ್ಯದಲ್ಲೇ ನೀಡುತ್ತೇನೆ ಎಂದು ಹೇಳಿದ್ದ ದಾಖಲೆಗಳನ್ನು ಕುರಿತು ಮಾತನಾಡಿರಬೇಕು ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಶಿ.ಜು. ಪಾಶಾ, ಜಿ ಪದ್ಮನಾಬ್, ವೈಹೆಚ್ ನಾಗರಾಜ್,  ಹಿರಣ್ಣಯ್ಯ, ತಿಮ್ಲಾಪುರ ಲೋಕೇಶ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.