3 ವರ್ಷಗಳಲ್ಲಿ 3000 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳ ಸ್ಥಾಪನೆ : ಎಸ್. ಮಧು ಬಂಗಾರಪ್ಪ
ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಎಸ್. ಮಧು ಬಂಗಾರಪ್ಪ ಹೇಳಿದರು.
ಹಳೇಸೊರಬದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿ, ಎಸ್ ಎಸ್ ಎಲ್ ಸಿ ಹಾಗೂ 8, 9 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿ ಅವರು ಮಾತನಾಡಿದರು.
ಕೆಪಿಎಸ್ ಶಾಲೆಗಳ ಸ್ಥಾಪನೆಯಿಂದ ಮಕ್ಕಳಿಗೆ ಎಲ್ ಕೆಜಿ ಯುಕೆಜಿಯಿಂದ ಹಿಡಿದು ಪ್ರೌಢಶಾಲೆಯವರೆಗೆ ಉತ್ತಮ ಶಿಕ್ಷಣದೊಂದಿಗೆ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡೆ , ಕಲೆ, ಸಂಗೀತ, ಸಂಸ್ಕೃತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ದೊರಕಲಿದೆ. ಮುಂದಿನ ವರ್ಷ ಸುಮಾರು 600 ಕೆಪಿಎಸ್ ಶಾಲೆಗಳನ್ನು ತೆರೆಯಲು ಯೋಜಿಸಲಾಗುತ್ತಿದೆ. ಮುಂದಿನ 3 ವರ್ಷಗಳಲ್ಲಿ 3 ಸಾವಿರ ಕೆಪಿಎಸ್ ಶಾಲೆಗಳ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದರಿಂದ ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 12 ರಿಂದ 18 ಶಾಲೆಗಳು ದೊರಕಲಿವೆ. ಶಿಕ್ಷಣ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಕಾಲಮಿತಿಯಲ್ಲಿ ಇವುಗಳನ್ನು ಬಗೆಹರಿಸಲಾಗುವುದು. ಇತಿಹಾಸದಲ್ಲೇ ಅಲ್ಪಾವಧಿಯಲ್ಲಿ ರಾಜ್ಯದಲ್ಲಿ 13,000 ಶಿಕ್ಷಕರನ್ನು ನೇಮಿಸಿದ್ದು ಈಗಾಗಲೇ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಪಿಎಸ್ ಶಾಲೆಗಳಲ್ಲಿ ಶೇ.400 ಮಕ್ಕಳ ಸಂಖ್ಯೆ ಹೆಚ್ಚಿದೆ. ಸರ್ಕಾರಿ ಶಾಲೆಗಳಲ್ಲಿ ಓದಲು ಹೆಮ್ಮೆ ಪಡುವಂತೆ ರಾಜ್ಯದ ಎಲ್ಲಾ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂಬ ವಿಶ್ವಾಸ ವ್ಯಕ್ತಪಡಿಸಿದರು.
2024 ರೊಳಗೆ ರಾಜ್ಯಾದ್ಯಂತ ಶಾಲೆಗಳಲ್ಲಿ 8,500 ಕೊಠಡಿಗಳ ಕಾಮಗಾರಿ ಜೊತೆಗೆ ಶೌಚಾಲಯಗಳನ್ನು ಪೂರ್ಣ ಗೊಳಿಸಲಾಗುವುದು. ಇಲ್ಲಿ ಶೌಚಾಲಯದ ಅಗತ್ಯವಿದ್ದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದ ಅವರು ಶಿಕ್ಷಣ ಮಂಡಳಿಯು ಮಕ್ಕಳಿಗೆ ಅವಕಾಶಗಳನ್ನು ನೀಡುವ ದೃಷ್ಠಿಯಿಂದ ಎಸ್‍ಎಸ್ ಎಲ್‍ಸಿ ವಾರ್ಷಿಕ ಪರೀಕ್ಷೆಯನ್ನು ಮೂರು ಪ್ರಯತ್ನಗಳಲ್ಲಿ ನಡೆಸಲು ತೀರ್ಮಾನಿಸಿದೆ. ಒಂದೇ ಬಾರಿ ಮಾತ್ರ ಪರೀಕ್ಷಾ ಶುಲ್ಕವನ್ನು ಪಾವತಿಸಿ 3 ಅವಕಾಶಗಳೊಂದಿಗೆ ಪರೀಕ್ಷೆಗಳನ್ನು ಬರೆಯಬಹುದಾಗಿದೆ. ಮೊದಲ ಪರೀಕ್ಷೆಯಲ್ಲಿಯೇ ಉತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ಎರಡು ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದು ಅವರ ಐಚ್ಛಿಕ ವಿಷಯ. ಮೂರು ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೋ ಆ ಅಂಕವನ್ನು ಪರಿಗಣಿಸಲಾಗುತ್ತದೆ. ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಅವಕಾಶಗಳನ್ನು ಕಲ್ಪಿಸಲಾಗಿದೆ. ವಿದ್ಯೆ ನೀಡುವುದೇ ದೇವರ ಕೆಲಸ ಎಂದು ಭಾವಿಸಿ ವಿದ್ಯಾರ್ಥಿಗಳಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುತ್ತೇನೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಎ. ಮೆಹಬೂಬ್ ಖಾನ್, ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್, ಸೊರಬ ತಾಲ್ಲೂಕು ಇ.ಒ ಪ್ರದೀಪ್ ಕುಮಾರ್, ಓಂಕಾರಪ್ಪ, ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇತರರು ಹಾಜರಿದ್ದರು. ನೀಲೇಶ್.ಆರ್ ಹಾಗೂ ಭಾರತ್ ಕಾರೇಕೊಪ್ಪ ಉಪನ್ಯಾಸ ನೀಡಿದರು.
Leave a Comment