*ಹಾನಿಗೊಳಗಾದ ಚಾರ್ಜರ್‍ಗೆ ವಿಮೆ ಪರಿಹಾರ ನೀಡದ ವಿಮೆ ಸಂಸ್ಥೆಗೆ ದಂಡ ವಿಧಿಸಿದ ಗ್ರಾಹಕ ಆಯೋಗ*
ಶಿವಮೊಗ್ಗ, ಅಕ್ಟೋಬರ್ 25: ಶಿವಮೊಗ್ಗದ ಗೋವಿಂದನ್ ನಾಯರ್ ಎಂಬುವವರು ತಮ್ಮ ವಿದ್ಯುತ್‍ಚಾಲಿತ ಟಾಟಾ ಕಾರಿನ ವಿಮೆಯನ್ನು ದಿ:06/11/2022 ರಿಂದ ದಿ:05/10/2023ರ ಅವಧಿಗೆ ಮೆಚೋಲಮಂಡಲಮ್ ಜನರಲ್ ಇನ್ಸೂರೆನ್ಸ್ ಕಂಪನಿಯಿಂದ ಪಡೆದಿದ್ದು, ದಿ: 29/11/2022 ರಂದು ತಮ್ಮ ಮನೆಯ ಪೋರ್ಟಿಕೋದಲ್ಲಿ ನಿಲ್ಲಿಸಿದ್ದ ಕಾರಿಗೆ ವಿದ್ಯುತ್ ಚಾರ್ಜಿಂಗ್‍ಗಾಗಿ ಚಾರ್ಜರ್‍ನ್ನು ಅಳವಡಿಸಿದ್ದು, ಆಕಸ್ಮಿಕದಿಂದ ವಿದ್ಯುತ್ ಚಾರ್ಜರ್‍ಗೆ ಹಾನಿಯಾಗಿದೆ. ಈ ಬಗ್ಗೆ ವಿಮೆ ಪರಿಹಾರ ಕೋರಿ ಕಾರಿನ ಮಾಲೀಕರು ಇನ್ಸೂರೆನ್ಸ್ ಕಂಪನಿಗೆ ಸಲ್ಲಿಸಿದ ಕ್ಲೈಂ ಅನ್ನು ಪುರಸ್ಕರಿಸದ ಕಾರಣ, ಇನ್ಸೂರೆನ್ಸ್ ಸಂಸ್ಥೆಯ ವಿರುದ್ಧ ಸೇವಾ ನ್ಯೂನ್ಯತೆ ಆರೋಪಿಸಿ ಮತ್ತು ಪರಿಹಾರ ಕೋರಿ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ಎರಡೂ ಪಕ್ಷಗಾರರ ವಿಚಾರಣೆ ನಡೆಸಿದ ಆಯೋಗವು ಇನ್ಸೂರೆನ್ಸ್ ಕಂಪನಿ ವಿಮೆ ಪರಿಹಾರ ಒದಗಿಸುವಲ್ಲಿ ಸೇವಾ ನ್ಯೂನ್ಯತೆ ಎಸಗಿರುವುದು ದೃಢಪಟ್ಟ ಕಾರಣ ಮೆಟೋಲಮಂಡಲಮ್, ಜನರಲ್ ಇನ್ಸೂರೆನ್ಸ್ ಕಂಪನಿಯವರು ವಿದ್ಯುತ್ ಚಾರ್ಜರ್ ಬಾಬು ರೂ.34,840/-ಗಳನ್ನು ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ 7% ರಂತೆ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ರೂ.10,000/-ಗಳನ್ನು ದೂರುದಾರರಿಗೆ ಆದ ಮಾನಸಿಕ ಹಿಂಸೆಗಾಗಿ ಮತ್ತು ರೂ.10,000/-ಗಳನ್ನು ವ್ಯಾಜ್ಯ ವೆಚ್ಚವಾಗಿ ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ 10% ರಂತೆ ಬಡ್ಡಿಯೊಂದಿಗೆ ಪಾವತಿಸುವಂತೆ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ, ಬಿ. ಪಟ್ಟಣಶೆಟ್ಟಿ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಇವರನ್ನು ಒಳಗೊಂಡ ಪೀಠವು ಆದೇಶಿಸಿದೆ.
-------------------
Leave a Comment