*ಸಾರ್ವಜನಿಕರು ಸ್ಟಾಪ್ ಟೊಬ್ಯಾಕೊ ಆ್ಯಪ್ ಮೂಲಕ ದೂರು ನೀಡಬಹುದು : ಡಿಸಿ*

ಶಿವಮೊಗ್ಗ, ಸೆಪ್ಟೆಂಬರ್ 15, : 
     ಕೋಟ್ಪಾ(COTPA) ಕಾಯ್ದೆಯ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ಉಚಿತವಾಗಿ ದೂರು ಸಲ್ಲಿಸಲು ಹಾಗೂ ಕಾಯ್ದೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ತಂಬಾಕು ನಿಯಂತ್ರಣ ಘಟಕ ‘stoptobacco’ ಮೊಬೈಲ್ ಆ್ಯಪ್‍ನ್ನು ಅಭಿವೃದ್ದಿಪಡಿಸಿ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳುವ ಎಲ್ಲಾ ಐಇಸಿ ಪರಿಕರಗಳಲ್ಲಿ ಕೆಳಕಾಣಿಸಿದ ಕ್ಯೂಆರ್ ಕೋಡ್‍ನ್ನು ಪ್ರಕಟಿಸಿ ಮುದ್ರಿಸಿ, ಸಾರ್ವಜನಿಕರಿಗೆ ಈ ಆ್ಯಪ್‍ನ್ನು ಬಳಸಲು ಹಾಗೂ ಇದರ ಬಗ್ಗೆ ತಿಳುವಳಿಕೆ ಮೂಡಿಸಲು ಸೂಚಿಸಿದರು. 
       ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಮೊಬೈಲ್ ಆಪ್‍ನ್ನು ರಚಿಸಲಾಗಿದೆ. ಈ ಆಪ್ ಮೂಲಕ ತಮ್ಮ ಜಿಲ್ಲೆಯಲ್ಲಿ ಪ್ರತಿದಿನ ಎಷ್ಟು ಪ್ರಕರಣಗಳು ದಾಖಲಾಗಿದೆ ಮತ್ತು ಎಷ್ಟು ಪ್ರಕರಣಗಳನ್ನು ಜಿಲ್ಲಾ ಅಥವಾ ತಾಲ್ಲೂಕು ಕೋಟ್ಪಾ ತನಿಖಾ ತಂಡದಿಂದ ನಿಯಮಾನುಸಾರ ಕ್ರಮ ವಹಿಸಲಾಗಿದೆ ಎನ್ನುವುದರ ಬಗ್ಗೆ ವಿವರವನ್ನು ಪರಿಶೀಲಿಸಬಹುದು ಮತ್ತು ಈ ಆಪ್ ಮೂಲಕ ದೂರುದಾರರಿಗೆ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.
    ಜಿಲ್ಲಾ ಸರ್ವೇಕ್ಷಣಾಧಿ ಡಾ.ಓ.ಮಲ್ಲಪ್ಪ ಮಾತನಾಡಿ, 2023 ರ ಏಪ್ರಿಲ್ ನಿಂದ ಆಗಸ್ಟ್ ಮಾಹೆವರೆಗೆ ಜಿಲ್ಲೆಯಲ್ಲಿ ಒಟ್ಟು 65 ತಂಬಾಕು ದಾಳಿ ನಡೆಸಿ 1135 ಪ್ರಕರಣ ದಾಖಲಿಸಿ, ರೂ.91250 ದಂಡ ಸಂಗ್ರಹಿಸಲಾಗಿದೆ. 35 ಶಾಲಾ ತರಬೇತಿ ಕಾರ್ಯಕ್ರಮ, 07 ಗುಲಾಬಿ ಆಂದೋಲನ ನಡೆಸಲಾಗಿದೆ. 1685 ಜನರು ಟಿಸಿಸಿ ಕೇಂದ್ರಕ್ಕೆ ಭೇಟಿ ನೀಡಿದ್ದು ಶೇ.18 ಜನರು ತಂಬಾಕು ವ್ಯಸನ ತ್ಯಜಿಸಿದ್ದಾರೆ ಎಂದು ತಿಳಿಸಿದರು.
      ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು, ಅಂಗಡಿಗಳಲ್ಲಿ ತಂಬಾಕು ಕುರಿತು ಜಾಹಿರಾತು ಹಾಗೂ ಶಾಲಾ ಸುತ್ತಮುತ್ತ 100 ಗಜದಲ್ಲಿ ತಂಬಾಕು/ಸಿಗರೇಟ್ ಮಾರಾಟ ಹೀಗೆ ಕೋಟ್ಪಾ ಕಾಯ್ದೆ ಉಲ್ಲಂಘನೆ ಕುರಿತು ಸಾರ್ವಜನಿಕರು ಮೊಬೈಲ್ ಆಪ್ ಮೂಲಕ ದೂರು ಸಲ್ಲಿಸಬಹುದು. ಇಲಾಖೆ ನೀಡಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉಚಿತವಾಗಿ ಆಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ದೂರು ಸಲ್ಲಿಸಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ದೂರು ನೀಡಿದ ಲೊಕೇಷನ್ ಆಧರಿಸಿ ತಾಲ್ಲೂಕು, ಜಿಲ್ಲಾ ತಂಡ ಭೇಟಿ ನೀಡಿ ಮುಂದಿನ ಕ್ರಮ ವಹಿಸುವುದು ಎಂದು ಮಾಹಿತಿ ನೀಡಿದರು.
     ಸಭೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ವತಿಯಿಂದ ಪ್ರಕಟಿಸಿರುವ ತಂಬಾಕು ಮುಕ್ತ ಪೋಸ್ಟರ್‍ಗಳನ್ನು ಡಿಸಿ ಯವರು ಹಾಗೂ ಅಧಿಕಾರಿಗಳು ಬಿಡುಗಡೆಗೊಳಿಸಿದರು.  
   ಸಭೆಯಲ್ಲಿ ಎಎಸ್‍ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಆರ್‍ಸಿಹೆಚ್‍ಓ ಡಾ.ನಾಗರಾಜ ನಾಯ್ಕ, ಡಿಎಲ್‍ಓ ಡಾ.ಕಿರಣ್, ಎಆರ್‍ಸಿ ಡಾ.ಪೂರ್ಣಿಮ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.