*ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಆರೋಪಿಗಳ ಬಂಧನ*

ಶಿವಮೊಗ್ಗ, ಆಗಸ್ಟ್ 24,  : 
     ಹೊಳೆಹೊನ್ನೂರಿನ ಗಾಂಧಿ ಸರ್ಕಲ್‍ನಲ್ಲಿ ಆ.20 ರ ತಡರಾತ್ರಿಯಲ್ಲಿ ಗಾಂಧೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
     ಇಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಹೊಳೆಹೊನ್ನೂರು ಗಾಂಧಿ ಸರ್ಕಲ್‍ನಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸಗೈದ ಆರೋಪಿಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು. 
      ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯ ಗಣೇಶ್, 24 ವರ್ಷ ಮತ್ತು ವಿನಯ್ 25 ವರ್ಷ, ಇವರು ಕೃಷಿ ಮತ್ತು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಈ ಆರೋಪಿಗಳು ಆ.20 ರ ರಾತ್ರಿ ಜೋಗ ಜಲಪಾತಕ್ಕೆ ತೆರಳುವ ಮಾರ್ಗಮಧ್ಯೆ ಈ ಕೃತ್ಯವನ್ನು ಎಸಗಿದ್ದಾಗಿ ಒಪ್ಪಿಕೊಂಡಿರುತ್ತಾರೆ.
      ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು 50 ಜನ ಪೊಲೀಸರ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಅಧಿಕಾರಿ/ಸಿಬ್ಬಂದಿಗಳು ಕ್ಷಿಪ್ರವಾಗಿ ಕಾರ್ಯೋನ್ಮುಖರಾಗಿ ಆರೋಪಿಗಳನ್ನು ಬಂಧಿಸಿ, ಉತ್ತಮ ಕೆಲಸ ಮಾಡಿದ್ದಾರೆ.
    ಆರೋಪಿಗಳು ಯಾವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿದ್ದಾರೆ ಮತ್ತು ಇತರೆ ಮಾಹಿತಿಯನ್ನು ಕಲೆ ಹಾಕಲು ತನಿಖೆ ಕೈಗೊಳ್ಳಲಾಗುವುದು. ಇವರು ತೆರಳುತ್ತಿದ್ದ ಬೈಕ್‍ನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಸ್ಥಳೀಯರು, ಗ್ರಾಮಸ್ಥರು ಗಾಂಧಿ ಪ್ರತಿಮೆಯನ್ನು ಪುನಃ ಪ್ರತಿಷ್ಟಾಪಿಸುವ ಕುರಿತು ಮನವಿ ಮಾಡಿದ್ದು, ಈ ವಿಷಯವನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
    ಸುದ್ದಿಗೋಷ್ಟಿಯಲ್ಲಿ ಎಎಸ್‍ಪಿ ಅನಿಲ್‍ಕುಮಾರ್ ಭೂಮರೆಡ್ಡಿ, ಡಿವೈಎಸ್‍ಪಿ ನಾಗರಾಜ್, ಇತರೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.