ಕುವೆಂಪು ವಿವಿ ಕುಲಪತಿಗೆ ಘಟಿಕೋತ್ಸವದಲ್ಲಿ ಕಪ್ಪು ಭಾವುಟ ಪ್ರದರ್ಶಿಸಿ NSUI ಪ್ರತಿಭಟನೆ
ಶಿವಮೊಗ್ಗ/ಶಂಕರಘಟ್ಟ; ಕುವೆಂಪು ವಿವಿ ಘಟಿಕೋತ್ಸವದ ರಾಜ್ಯಪಾಲರ ಭಾಷಣದ ವೇಳೆ ವಿವಿಯಲ್ಲಾಗುತ್ತಿರುವ ಅಹಿತಕರ ಬೆಳವಣಿಗೆಗಳನ್ನು ಖಂಡಿಸಿ ಎನ್.ಎಸ್.ಯು.ಐ. ಕಾರ್ಯಕರ್ತರು ವಿವಿ ಕುಲಪತಿ ವಿರುದ್ಧ ಘೋಷಣೆ ಕೂಗಿ, ಕಪ್ಪು ಭಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿದರು. ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರೆ, ನಂತರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಭಟನಾಕಾರರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಆಲಿಸಿದರು.
ಕುವೆಂಪು ವಿವಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಹಿತಕರ ಬೆಳವಣಿಗೆಗಳು ನಡೆಯುತ್ತಿದ್ದು, ವಿವಿ ಗೌರವಕ್ಕೆ ಧಕ್ಕೆಯಾಗುವುದರ ಜೊತೆಗೆ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಆತಂಕವಾಗುತ್ತಿದೆ ಎಂದು ಆರೋಪಿಸಿದ ಎನ್.ಎಸ್.ಯು.ಐ. ಕಾರ್ಯಕರ್ತರು ಕುಲಪತಿ ಪ್ರೊ. ವೀರಭದ್ರಪ್ಪ ಅವರ ವಿರುದ್ಧ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ಉಂಟಾಯಿತು.ಅತಿಥಿ ಉಪನ್ಯಾಸಕರ ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸಬೇಕು. ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು. ವಿವಿಯ ಎಲ್ಲಾ ಕಾಲೇಜುಗಳಿಗೆ ಕಂಪ್ಯೂಟರ್ ಹಾಗೂ ಲ್ಯಾಬ್ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಬೇಕು. ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ವಿವಿಯ ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಎಲ್ಲಾ ಅಧಿಕಾರಿಗಳನ್ನೂ ತಕ್ಷಣ ವಜಾ ಮಾಡಬೇಕು. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡಬೇಕು. ವಿವಿ ಯಲ್ಲಿನ ತಾಂತ್ರಿಕ ತೊಂದರೆಗಳಿಗೆ ಸರ್ಕಾರವನ್ನು ದೂರದೆ ಸರಿಪಡಿಸುವ ವ್ಯವಸ್ಥೆ ಮಾಡಬೇಕು. ದೂರಶಿಕ್ಷಣ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಅಂಕಪಟ್ಟಿ ಹಾಗು ಪಲಿತಾಂಶದ ಬಗ್ಗೆ ಕೂಡಲೆ ಗಮನಹರಿಸಬೇಕು. ಎನ್ ಇ ಪಿ ನೆಪವೊಡ್ಡಿ ಏರಿಸಿದ ಪರೀಕ್ಷಾಶುಲ್ಕ ಹಾಗು ಪ್ರವೇಶ ಶುಲ್ಕವನ್ನು ವಿಧ್ಯಾರ್ಥಿಗಳಿಗೆ ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿದರು.ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ವಿವಿ ಕುಲಪತಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಕುಲಪತಿಗಳು ಜುಲೈ ೭ರಂದು ಲಿಖಿತವಾಗಿ ಈ ಎಲ್ಲಾ ಸಮಸ್ಯೆಗಳಿಗೆ ಜುಲೈ ೨ರೊಳಗೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಈಡೇರಿಲ್ಲ. ಆದ್ದರಿಂದ ಅವರ ವಿರುದ್ಧ ಕಪ್ಪು ಭಾವುಟ ಪ್ರದರ್ಶನ ಮಾಡುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು. ರಾಜ್ಯಪಾಲರು ತಮ್ಮ ಭಾಷಣ ಮುಗಿಸಿದ ನಂತರ ಮತ್ತೆ ಪ್ರತಿಭಟನಾಕಾರರನ್ನು ಸ್ಥಳಕ್ಕೆ ಕರೆಯಿಸಿ, ಸಮಸ್ಯೆಯನ್ನು ಆಲಿಸಿದರಲ್ಲದೆ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ್, ಜಿಲ್ಲಾ ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ನಗರಾಧ್ಯಕ್ಷ ಚರಣ್, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ಮುಖಂಡರಾದ ರವಿ, ಚಂದ್ರೋಜಿರಾವ್, ಪ್ರದೀಪ್, ಪ್ರಮೋದ್, ಅಶೋಕ್, ಲಿಂಗರಾಜು ಸೇರಿದಂತೆ ಮುವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪಾಲ್ಗೊಂಡಿದ್ದರು.
Leave a Comment