ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ*ಲಸಿಕಾವಂಚಿತರನ್ನು ಗುರುತಿಸಿ ಲಸಿಕೆ ಹಾಕಿಸುವಂತೆ ಡಿಸಿ ಸೂಚನೆ*
ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾಗಿರುವ, ಕೈಬಿಟ್ಟು ಹೋಗಿರುವ ಗರ್ಭಿಣಿಯರು ಮತ್ತು ಮಕ್ಕಳನ್ನು ಗುರುತಿಸಿ ಶೇ.100 ಲಸಿಕೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಲಗಿದ್ದ ಮಿಷನ್ ಇಂದ್ರಧನುಷ್ 5.0(ಐಎಂಐ 5.0) ಮತ್ತು ಯು-ವಿನ್ ಪೋರ್ಟಲ್(U-WIಓ) ಕುರಿತಾದ ಜಿಲ್ಲಾ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
ಈ ಅಭಿಯಾನದಲ್ಲಿ ವೈದ್ಯಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳು ಲಸಿಕೆಯಿಂದ ವಂಚಿತರಾದ, ಬಿಟ್ಟು ಹೋಗಿರುವ ಪ್ರದೇಶಗಳು, ಅಪಾಯದಲ್ಲಿರುವ ಪ್ರದೇಶ ಹಾಗೂ ಸಮುದಾಯಗಳನ್ನು ಗುರುತಿಸಿ ಲಸಿಕೆ ನೀಡಿ, ತೀವ್ರತರ ಮಿಷನ್ ಇಂದ್ರಧನುಷ್ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದರು.
ಜಿಲ್ಲೆಯಾದ್ಯಂತ ಮನೆಗಳು, ತಲಾವಾರು ಸರ್ವೇ ಶೇ.85 ಆಗಿದೆ. ಸರ್ವೇ ಶೀಘ್ರದಲ್ಲಿ ಪೂರ್ಣಗೊಳಿಸಿ ಬಿಟ್ಟು ಹೋದವರಿಗೆ ಲಸಿಕೆ ಹಾಕಬೇಕು. ಹಾಗೂ ಮುಖ್ಯವಾಗಿ ನಗರ ಪ್ರದೇಶದ ಬಳಿ ಇರುವ ಸ್ಲಂ, ಅಲೆಮಾರಿ ತಾಣಗಳು, ವಲಸಿಗರ ತಾಣ, ಇಟ್ಟಿಗೆ ಭಟ್ಟಿಗಳು ಇತರೆ ಪ್ರದೇಶಗಳಲ್ಲಿ ಸರ್ವೇಯನ್ನು ಪರಿಣಾಮಕಾರಿಯಾಗಿ ನಡೆಸಿ, ಲಸಿಕೆಯಿಂದ ಬಿಟ್ಟು ಹೋದವರಿಗೆ ಲಸಿಕೆ ನೀಡಬೇಕು ಎಂದು ಸೂಚಸಿದರು.
ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಅಂಗನವಾಡಿಗಳಲ್ಲಿ ಲಸಿಕಾಕರಣದ ಮಾಹಿತಿ ಲಭ್ಯವಿದೆ. ಆದರೆ ನಗರ ಭಾಗದಲ್ಲಿ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾಲ್ಲೂಕು ಟಾಸ್ಕ್‍ಫೋರ್ಸ್ ಸಮಿತಿಗಳು ಸಭೆ ನಡೆಸಿ ಪ್ರಗತಿ ಸಾಧಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಗ್ರಾಮ ಸಭೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು. ಗುರಿಪಡಿಸಲಾದವರ ಲಸಿಕೆಕಾರಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದರು.
ರಿಮೋಟ್ ಪಿಹೆಚ್‍ಸಿ ಗಳಲ್ಲಿ ಹಾವು, ನಾಯಿ ಕಡಿತ ಸೇರಿದಂತೆ ಅಗತ್ಯ ಲಸಿಕೆ/ಔಷಧಿಗಳನ್ನು ಲಭ್ಯವಾಗಿರಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಡಬ್ಲ್ಯುಹೆಚ್‍ಓ ಕನ್ಸಲ್ಟೆಂಟ್ ಡಾ.ಅನಂತೇಶ್ ಮಾತನಾಡಿ, ಮುಂದಿನ ತಿಂಗಳಿನಿಂದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಈ ಅಭಿಯಾನ ಜಾರಿಯಾಗಲಿದೆ. ತೀವ್ರತರ ಮಿಷನ್ ಇಂದ್ರಧನುಷ್ 3 ಸುತ್ತಿನಲ್ಲಿ ನಡೆಯಲಿದೆ. 2023 ರ ಆಗಸ್ಟ್ 7 ರಿಂದ 12, ಸೆಪ್ಟೆಂಬರ್ 11 ರಿಂದ 16, ಅಕ್ಟೋಬರ್ 9 ರಿಂದ 14 ನಡೆಯಲಿದೆ.
0 ಯಿಂದ 23 ತಿಂಗಳಿನ ಬಿಟ್ಟು ಹೋದ, ಲಸಿಕಾ ವಂಚಿತ ಮತ್ತು 0 ಡೋಸ್ ಮಕ್ಕಳು, ಎಲ್ಲ 2 ರಿಂದ 5 ವರ್ಷದ ಎಂಆರ್ 1 & 2, ಪೆಂಟಾ ಮತ್ತು ಓಪಿವಿ ಲಸಿಕೆ ಬಿಟ್ಟುಹೋದ, ಲಸಿಕೆ ಪಡೆಯದ ಮತ್ತು ಭಾಗಶಃ ಲಸಿಕೆ ಪಡೆದ ಗರ್ಭಿಣಿ ಸ್ತ್ರೀಯರನ್ನು ಲಸಿಕೆಗೆ ಗುರಿಪಡಿಸಲಾಗಿದ್ದು, ಹೈರಿಸ್ಕ್ ಏರಿಯಾ ಸೇರಿದಂತೆ ಎಲ್ಲ ಪ್ರದೇಶದಲ್ಲಿ ಹೆಡ್‍ಕೌಂಟ್ ಸರ್ವೇ ಮಾಡಿ ಪಟ್ಟಿ ತಯಾರಿಸುವುದು, ಬಿಟ್ಟು ಹೋದವರ ಪಟ್ಟಿ ಮಾಡಿ ಮೈಕ್ರೋ ಪ್ಲಾನ್ ಸಿದ್ದಪಡಿಸಿ, ಲಸಿಕೆ ಹಾಕಿಸುವುದು ಈ ಅಭಿಯಾನದ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದರು.
ಹಾಗೂ ಯು-ವಿನ್ ಪೋರ್ಟಲ್ ಮೂಲಕ ಲಸಿಕೆ ಪಡೆಯುವ ಫಲಾನುಭವಿಗಳು ಆನ್‍ಲೈನ್ ನೋಂದಣಿ ಮಾಡಿಸಿಕೊಳ್ಳಬಹುದು. ಈ ಪೋರ್ಟಲ್ ಮೂಲಕ ಲಸಿಕಾ ಅಧಿವೇಶನ ನಿರ್ವಹಣೆ, ಲಸಿಕಾ ವರದಿ ಮತ್ತು ಇ-ವ್ಯಾಕ್ಸಿನ್ ದೃಢೀಕರಣ ನೀಡುವ ಇತರೆ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಎಂದರು.
ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ ಹೈರಿಸ್ಕ್ ಏರಿಯಾಗಳಿಗೆ ಖುದ್ದು ಅಧಿಕಾರಿಗಳು ಭೇಟಿ ನೀಡಿದಲ್ಲಿ ಯೋಜನೆ ರೂಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ ಅವರು ವೈದ್ಯಾಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ (ಮೀಸಲ್ಸ್ ರುಬೆಲ್ಲಾ)ಎಂಆರ್-1 ಮತ್ತು ಎಂಆರ್-2 ಲಸಿಕಾಕರಣ ಶೇ.95 ಪ್ರಗತಿಯಾಗಿದೆ. ಬಿಟ್ಟುಹೋದ, ಲಸಿಕೆ ವಂಚಿತರಾದವರ ಬಗ್ಗೆ ಮನೆ ಮನೆ ಸರ್ವೇ ಕಾರ್ಯವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಡಿಸಲಾಗುತ್ತಿದೆ.
ಯಾರೇ ಆಗಲಿ ಜ್ವರ ಮತ್ತು ದದ್ದು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೆಡಿಕಲ್ ಕಾಲೇಜು/ಆಸ್ಪತ್ರೆಗಳಿಗೆ 5 ವರ್ಷದೊಳಗಿನ ಮಕ್ಕಳು ಬಂದಾಗ ಅವರ ದಡಾರ ಚುಚ್ಚುಮದ್ದು ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ 5 ವರ್ಷದೊಳಗಿನ ಮಕ್ಕಳ ಲಸಿಕಾಕರಣದ ಕುರಿತಾದ ವರದಿ ನೀಡಬೇಕು. ಶೇ.100 ಲಸಿಕಾಕರಣಕ್ಕೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ದಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆಗಸ್ಟ್ 1 ರಿಂದ 7 ರವರೆಗೆ ಒಂದು ವಾರ ಕಾಲ ಮದರರ್ಸ್ ಆಬ್ಸಲ್ಯೂಟ್ ಅಫೆಕ್ಷನ್ ಪ್ರೋಗ್ರಾಂ ಅಡಿಯಲ್ಲಿ ಹಾಲುಣಿಸುವ ವಾರ ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ಗರ್ಭಿಣಿ/ತಾಯಂದಿರಿಗೆ ತಾಯಿ ಹಾಲಿನ ಪ್ರಾಮುಖ್ಯತೆ, ಮೊದಲ 6 ತಿಂಗಳು ಹಾಲುಣಿಸುವ ಕುರಿತು ಹಾಗೂ ಹಾಲುಣಿಸುವುದರಿಂದ ತಾಯಿಗೆ ಆಗುವ ಅನುಕೂಲಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳು, ಗರ್ಭಿಣಿಯರಿಗೆ ಮೊದಲ ಮೂರು ತಿಂಗಳ ಅವಧಿಯಲ್ಲಿ ತಾಯಿ ಹಾಲಿನ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಿ, ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ, ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಜುಲೈ 28 ರವರೆಗೆ 136 ಡೆಂಗ್ಯು ಪ್ರಕರಣ ದಾಖಲಾಗಿದೆ. ಡೆಂಗ್ಯು ನಿಯಂತ್ರಣ ಕ್ರಮಗಳನ್ನು ಜಿಲ್ಲೆಯಾದ್ಯಂತ ಕೈಗೊಳ್ಳಲಾಗುತ್ತಿದೆ. ಡೆಂಗ್ಯು ತಡೆ, ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುವ ಡೆಂಗ್ಯು ರಥಕ್ಕೆ ಇಂದು ಚಾಲನೆ ದೊರೆತಿದೆ ಎಂದರು.
ಇದೇ ವೇಳೆ ಡೆಂಗ್ಯು ಜ್ವರ ನಿಯಂತ್ರಣದ ಕುರಿತಾದ ಕರಪತ್ರ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಡಿಡಿಪಿಐ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Leave a Comment