ನಕಾರಾತ್ಮಕ ವರದಿಗಾರಿಕೆ ಸಮಾಜ ಒಪ್ಪುವುದಿಲ್ಲ. ಸಕಾರಾತ್ಮಕ ಪತ್ರಿಕೋದ್ಯಮಕ್ಕೆ ಓದುಗರ ಬೆಂಬಲ ಇರುತ್ತದೆ :ಸಂಸದ ಬಿ.ವೈ.ರಾಘವೇಂದ್ರ
ಶಿವಮೊಗ್ಗ,ಜು.29 : ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಅತಿಮುಖ್ಯ, ನಕಾರಾತ್ಮಕ ವರದಿಗಾರಿಕೆ ಮಾಡುವವರನ್ನು ಸಮಾಜ ಒಪ್ಪುವುದಿಲ್ಲ. ಸಮಾಜಮುಖಿಯಾದ ಸಕಾರಾತ್ಮಕ ಪತ್ರಿಕೋದ್ಯಮಕ್ಕೆ ಯಾವಾಗಲೂ ಓದುಗರ ಬೆಂಬಲ ಇರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾ ಮಾಧ್ಯಮ ಯಾವತ್ತೂ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು. ಹೀಗಾದಲ್ಲಿ ಆಳುವ ಸರಕಾರ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ ಎಂದರು.ಬದಲಾದ ದಿನಮಾನದಲ್ಲಿ ಪತ್ರಿಕೋದ್ಯಮ ಸಂಕಷ್ಟದಲ್ಲಿದೆ. ಪ್ರಾಮಾಣಿಕ ಪತ್ರಕರ್ತರು ಬಡವರಾಗಿಯೇ ಜೀವನ ಮುಗಿಸುತ್ತಾರೆ. ಅವರ ವೃತ್ತಿ ಬಗೆಗಿನ ಬದ್ಧತೆ ಮೆಚ್ಚುವಂತದ್ದು. ಶಿವಮೊಗ್ಗ ಎಲ್ಲಾ ಕ್ಷೇತ್ರಗಳಂತೆ ಪತ್ರಿಕಾ ಕ್ಷೇತ್ರದಲ್ಲಿಯೂ ಸಹ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ವಿದಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ,ಪತ್ರಿಕಾ ರಂಗ ಪವಿತ್ರವಾದ ಮಾಧ್ಯಮವಾಗಿದೆ. ಇಲ್ಲಿ ಕೇವಲ ಸುದ್ದಿಗಳು ಮಾತ್ರ ಇರುವುದಿಲ್ಲ. ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳೂ ಇರುತ್ತವೆ. ಪತ್ರಕರ್ತರಿಗೆ ಅಧ್ಯಯನ ಅಗತ್ಯವಿದೆ. ಅದರಲ್ಲೂ ಸಾಹಿತ್ಯಕ ಜ್ಞಾನ ಅಗತ್ಯವಾಗಿ ಬೇಕಾಗಿದೆ. ಪತ್ರಿಕೆಗಳಲ್ಲಿ ಬರುವ ಅಂಕಣಗಳ ಮೂಲಕ ನಮ್ಮ ಬದುಕನ್ನೇ ತಿದ್ದಿಕೊಳ್ಳಬಹುದಾಗಿದೆ. ಪತ್ರಕರ್ತರು ಜಾಗೃತರಾಗಬೇಕು. ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಶಿವಮೊಗ್ಗದಲ್ಲಿ ಪತ್ರಿಕೋದ್ಯಮ ಗಟ್ಟಿಯಾಗಿದೆ. ಅದಕ್ಕೆ ಪೂರಕ ವಾತಾವರಣವೂ ಇದೆ. ಪತ್ರಕರ್ತರ ಭವನದ ನವೀಕರಣಕ್ಕೆ ಸಂಸದರು ಮತ್ತು ಶಾಸಕರು ಮತ್ತಷ್ಟು ಅನುದಾನ ನೀಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಗೋಪಾಲ್ ಎಸ್.ಯಡಗೆರೆ ಪತ್ರಕರ್ತರು ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳಬೇಕಾಗಿದೆ. ಇದರ ಜೊತೆಗೆ ಮಾದಕ ವಸ್ತುಗಳ ವಿರೋಧಿ ದಿನಾಚರಣೆ, ಕುಗ್ರಾಮಗಳಿಗೆ ಭೇಟಿ, ಆರೋಗ್ಯ ಶಿಬಿರ ಮುಂತಾದ ಸಾಮಾಜಿಕ ಕಾರ್ಯಕ್ರಮಗಳಿಗೂ ಕೂಡ ಸಂಘ ಸ್ಪಂದಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗ ಶಾಸಕ ಇವರು ಮಾತನಾಡುತ್ತಾ, ಪತ್ರಕರ್ತರು ಒತ್ತಡಗಳ ನಡುವೆ ಕೆಲಸ ಮಾಡುತ್ತಾರೆ. ಪತ್ರಿಕಾ ದಿನಾಚರಣೆ ಎಂಬುದು ಗೌರವವನ್ನು ಹೆಚ್ಚಿಸುವಂಥದ್ದಾಗಿದೆ. ಅದರಲ್ಲೂ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವುದು ಬಹಳ ಮುಖ್ಯವಾಗಿದೆ. ಪತ್ರಕರ್ತರು ಸಂಕಷ್ಟಗಳಲ್ಲಿದ್ದಾರೆ. ಪಾಲಿಕೆವತಿಯಿಂದಲೂ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಹಣವನ್ನು ತೆಗೆದಿರಿಸಲಾಗಿದೆ. ಇದರ ಸದುಪಯೋಗವನ್ನು ಪತ್ರಕರ್ತರು ಪಡೆದುಕೊಳ್ಳಬೇಕು ಎಂದರು.
ಸನ್ಮಾನ ಸ್ವೀಕರಿಸಿದ ನಂತರ ಹೊನಕೆರೆ ನಂಜುಂಡೇಗೌಡ, ವಿಶೇಷ ವರದಿಗಾರ ಪ್ರಜಾವಾಣಿ ಇವರು ಮಾತನಾಡುತ್ತಾ, ಪತ್ರಕರ್ತರು ಇಂದು ಸವಾಲುಗಳ ನಡುವೆ ಕೆಲಸ ಮಾಡಬೇಕಿದೆ. ಬರೀ ಸುದ್ದಿ ಮಾಡುವುದು ಮಾತ್ರವಲ್ಲ, ಮಾರ್ಕೆಟಿಂಗ್‌ನ ಜವಾಬ್ದಾರಿಯೂ ಇದೆ. ಬಹುಬೇಗ ಬದಲಾವಣೆ ಆಗುತ್ತಿರುವ ಮಾಧ್ಯಮ ಕ್ಷೇತ್ರ ಮುಂದಿನ ದಶಕದಲ್ಲಿ ಯಾವ ರೂಪದಲ್ಲಿರುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ. ಶಿವಮೊಗ್ಗ ನನಗೆ ತವರು ಮನೆ ಇದ್ದಂತೆ ಇಲ್ಲಿನ ಪತ್ರಕರ್ತರು ಅತ್ಯಂತ ಸ್ನೇಹಪರರು. ಸನ್ಮಾನ ಖುಷಿತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿಯೇ ಮಾದರಿಯಾದ ಪತ್ರಿಕಾ ಭವನ ಮತ್ತು ಪ್ರೆಸ್‌ಮೀಟ್ ಹಾಲ್ ಶಿವಮೊಗ್ಗದಲ್ಲಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ ನಿವೇಶನ ಹೆಚ್ಚಿನ ಅನುದಾನ ಸಿಕ್ಕಿದೆ. ಪತ್ರಕರ್ತರ ಸಂಘ ಮತ್ತು ಪ್ರೆಸ್‌ಟ್ರಸ್ಟ್ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸಲಿದೆ ಎಂದು ಹೇಳಿದರು. ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತ ಹೊನಕೆರೆ ನಂಜುಂಡೇಗೌಡ, ವಿ.ಎಸ್.ಕೆ. ಮಾಧ್ಯಮ ಪ್ರಶಸ್ತಿ ಪುರಸ್ಕೃತ ಎಂ. ಶ್ರೀನಿವಾಸನ್ ಅವರನ್ನು ಅಭಿನಂದಿಸಲಾಯಿತು.
ಪತ್ರಿಕಾ ವಿತರಕರಾದ ಕೆ.ಎಸ್. ಕೃಷ್ಣಮೂರ್ತಿ, ಆರ್. ರಾಮಚಂದ್ರ, ಮುದ್ರಣ ವಿಭಾಗದ ತವಮಣಿ ಸಿ., ಹೆಚ್. ಶ್ರೀನಿವಾಸಲು, ಜಾಹೀರಾತು ವಿಭಾಗದ ಜೋಸೆಫ್‌ಟೆಲ್ಲಿಸ್, ಜೆ. ರಾಜಣ್ಣ, ಪುಟ ವಿನ್ಯಾಸಕಿಯರಾದ ಎ. ಸರೋಜ, ಹೆಚ್.ಕೆ. ಉಷಾ, ಭಾವಿತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಎಸ್. ಚಂದ್ರಕಾಂತ್, ಶೃಂಗೇಶ್,
ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ, , ಗಿರೀಶ್ ಉಮ್ರಾಯ್, ವೈ.ಕೆ. ಸೂರ್ಯನಾರಾಯಣ, ಜೇಸುದಾಸ್ ಮತ್ತಿತರರಿದ್ದರು. ಲಕ್ಷ್ಮಿಪ್ರಸಾದ್ ಸ್ವಾಗತಿಸಿದರು.
ವಿವೇಕ್ ಮಹಾಲೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ನಿತಿನ್ ಕೈದೊಟ್ಲು ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕಂಕಾರಿ ವಂದನೆ ಸಲ್ಲಿಸಿದರು.
Leave a Comment