*ಅರಣ್ಯ ಸಂರಕ್ಷಣಾ ಕಾಯ್ದೆ ತಿದ್ದುಪಡಿಯಾದರೆ ಭವಿಷ್ಯದಲ್ಲಿ ಭಾರೀ ಗಂಡಾತರ -ಪರಿಸರ ತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ*

ಅರಣ್ಯ ಸಂರಕ್ಷಣಾ  1980 ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ
ಕೇಂದ್ರ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗಬಹುದು.ಆ ಮೂಲಕ ಪರಿಸರ ಅಸಮತೋಲನ ಉಂಟಾಗುತ್ತದೆ.ಆದುದರಿಂದ ಅರಣ್ಯ ಕಾಯ್ದೆ ತಿದ್ದುಪಡಿಗೆ ವ್ಯಾಪಕ ವಿರೋಧ ವ್ಯಕ್ತಪಡಿಸಬೇಕು ಎಂದು ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
ಅವರು ಭಾನುವಾರದಂದು  ನಿರ್ಮಲ ತುಂಗಾ ಅಭಿಯಾನ ಮತ್ತು ಪರಿಸರಾಸಕ್ತರು ಶಿವಮೊಗ್ಗದ  ಹೊಯ್ಸಳ ಫೌಂಡೇಶನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅರಣ್ಯ ಕಾಯ್ದೆ 1980 ರ ತಿದ್ದುಪಡಿಯ ಸಾಧಕ ಬಾಧಕಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕೇಂದ್ರ ಹಾಲಿ ಇರುವ ಕಾಯಿದೆಗೆ ತಿದ್ದುಪಡಿ  ಮಾಡಿ ಅರಣ್ಯ ಸಂರಕ್ಷಣೆ ಕಾಯ್ದೆ 2023 ಅನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆಯ ಮೂಲಕ ಜಾರಿಗೆ ತರಲು ಉದ್ದೇಶಿಸಿರುವ ಕೆಲವು ಮಹತ್ವದ ತಿದ್ದುಪಡಿ ತೀವ್ರ ಆಘಾತಕಾರಿಯಾಗಿದೆ. ಇದು ಜಾರಿಗೆ ಬಂದರೆ ಅರಣ್ಯ ಸಂರಕ್ಷಣೆ ಎನ್ನುವುದೇ ಮರೀಚಿಕೆಯಾಗುತ್ತದೆ. ಜೊತೆಗೆ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ತೀವ್ರ ಧಕ್ಕೆ ಬರುತ್ತದೆ. ದೇಶವು ಹವಾಮಾನ ವೈಪರಿತ್ಯ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಂಡನೆಗೆ ಸಿದ್ಧವಾಗುತ್ತಿರುವ ಈ ಕಾಯ್ದೆಯಿಂದ ಭವಿಷ್ಯದಲ್ಲಿ ಕೆಟ್ಟ ಪರಿಣಾಮ ಎದುರಿಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಹೇಳಿದರು. 1996ರಲ್ಲಿ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಎಲ್ಲಿ ಮರ-ಗಿಡಗಳು ಹೇರಳವಾಗಿ ಇರುತ್ತವೆಯೋ ಅದನ್ನೆಲ್ಲ ಅರಣ್ಯ ಎಂದು ಪರಿಗಣಿಸಬೇಕು ಎಂದು ಹೇಳಿದ್ದರೆ, ಈ ಹೊಸ   ತಿದ್ದುಪಡಿ ಕಾಯ್ದೆ ಪ್ರಕಾರ ಹಿಂದೆ ಯಾವ ಪ್ರದೇಶದಲ್ಲಿ ಅರಣ್ಯ ಎಂದು ರಿಜಿಸ್ಟರ್ಡ್ ಆಗಿರುತ್ತದೆಯೋ ಅದನ್ನು ಮಾತ್ರ ಅರಣ್ಯ ಎಂದು ಪರಿಗಣಿಸಬೇಕು. ಉಳಿದ ಪ್ರದೇಶಗಳಲ್ಲಿ ಅರಣ್ಯ ಇದ್ದರೂ ಆ ಪ್ರದೇಶಕ್ಕೆ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯಿಸುವುದೇ ಇಲ್ಲ ಎಂದು ಹೇಳಲಾಗಿದೆ. ಕರ್ನಾಟಕ ಒಂದರಲ್ಲೇ ಸುಮಾರು 10 ಲಕ್ಷ ಹೆಕ್ಟರ್ ಡೀಮ್ಡ್ ಫಾರೆಸ್ಟ್ ಇದೆ ಎಂದು ಗುರುತಿಸಲ್ಪಟ್ಟಿದ್ದರೂ , ಸರ್ಕಾರಿ ಭೂಮಿ ಆಗಿದ್ದರೂ ಈ ಹೊಸ  ಕಾಯ್ದೆಯಿಂದ  ಈ ಕಾಡು ಸಂರಕ್ಷಣಾ ಕಾಯ್ದೆಯ ಹೊರಗಿರಲಾಗುತ್ತದೆ.  ಆಗ ಕರ್ನಾಟಕದಲ್ಲಿ ಕೇವಲ ಸುಮಾರು ಮೂರು ಲಕ್ಷ ಹೆಕ್ಟೇರ್  ಪ್ರದೇಶ ಮಾತ್ರ ಡೀಮ್ಡ್ ಫಾರೆಸ್ಟ್ ಆಗಿ ಉಳಿಯಲಿದೆ. ಇನ್ನು ಇಡೀ ದೇಶದಲ್ಲಿ ಲೆಕ್ಕಾಚಾರ ಹಾಕಿದರೆ ಇದು ಬಹುದೊಡ್ಡ ಪ್ರಮಾಣದ್ದಾಗುತ್ತದೆ. ಹಿಂದಿನ ಕಾಯ್ದೆಯಲ್ಲಿ ಅರಣ್ಯ ಪ್ರದೇಶದಲ್ಲಿ ಯಾವೊಂದು ಚಟುವಟಿಕೆಗೂ  ಅವಕಾಶವಿರಲಿಲ್ಲ. ಆದರೆ ಹೊಸ ಕಾಯ್ದೆಯಲ್ಲಿ ಅರಣ್ಯದಲ್ಲಿ ರೈಲ್ವೆ ಮಾರ್ಗ, ರಸ್ತೆ ನಿರ್ಮಾಣಕ್ಕೆ ಮತ್ತು ಪೂರಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದೆ .ಇದರಿಂದ ವನ್ಯಜೀವಿ ಗಳ ಸಹಜ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತದೆ. ಅಲ್ಲದೆ ದೇಶದ ಗಡಿ ನಿಯಂತ್ರಣ ರೇಖೆ ಯಿಂದ 100 ಕಿ.ಮೀ. ನಷ್ಟು ದೂರದವರೆಗೆ ಅರಣ್ಯವನ್ನು  ಕೇಂದ್ರ ಸರ್ಕಾರ ಯಾವ ಉದ್ದೇಶಕ್ಕೆ ಬೇಕಾದರೂ ಬಳಸಬಹುದೆಂದು ಹೇಳಲಾಗಿದೆ. ಉತ್ತರ ಭಾರತದ ಬಹುತೇಕ ರಾಜ್ಯದ ಗಡಿ ಭಾಗಗಳಲ್ಲಿ ದಟ್ಟ ಅರಣ್ಯವಿದ್ದು ಈ ತಿದ್ದುಪಡಿಯಿಂದ ದೇಶದ ಅರಣ್ಯ ಪ್ರದೇಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು. 

ಹೊಸ ತಿದ್ದುಪಡಿ ಕಾಯ್ದೆಯ ಪ್ರಕಾರ ಅರಣ್ಯದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಸಫಾರಿ ಮಾಡಬಹುದು, ಪರಿಸರ ಪೂರಕ ಪ್ರವಾಸ ಏರ್ಪಡಿಸಬಹುದು, ಅದಕ್ಕೆ ಪೂರಕ ಚಟುವಟಿಕೆ ನಡೆಸಬಹುದು ಎಂದಿದೆ. ಇನ್ನು ಅರಣ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೆಡುತೋಪು ಬೆಳೆಸಲು ಅವಕಾಶ ನೀಡಲಾಗಿದೆ. ಈ ರೀತಿಯ ನಡುತೋಪು ಪರಿಸರಕ್ಕೆ ಮಾರಕವಾಗಿದ್ದು ಸಹಜ ಅರಣ್ಯ ಪ್ರಧಾನತೆ ಮೂಲೆಗುಂಪಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

  ಇನ್ನೋರ್ವ ಪರಿಸರ ತಜ್ಞರಾದ ಪ್ರೊ. ಶ್ರೀಪತಿ ಎಲ್.ಕೆ. ಮಾತನಾಡಿ ಹೊಸ ತಿದ್ದುಪಡಿ ಅರಣ್ಯ ಕಾಯ್ದೆ  ಮೇಲ್ನೋಟಕ್ಕೆ   ಪರಿಸರ ಮಾರಕ ಅನೇಕ ಅಂಶಗಳು ಕಂಡುಬರುತ್ತಿದ್ದು , ಹೊಸ ಕಾಯ್ದೆಯಲ್ಲಿ  ಪೂರಕ ಚಟುವಟಿಕೆಗಳಿಗೆ ವಶಪಡಿಸಿಕೊಂಡ ಅರಣ್ಯಕ್ಕೆ ಪರ್ಯಾಯ ಅರಣ್ಯ ಬೆಳೆಸುವ ಯಾವುದೇ ವಿಚಾರ ಕಾಯ್ದೆಯಲ್ಲಿ ಕಂಡುಬರುತ್ತಿಲ್ಲ. ಜೊತೆಗೆ ಅರಣ್ಯ ಜಾಗಗಳಲ್ಲಿ ಏಕ ಜಾತಿಯ ನೆಡುತೋಪು ಸೇರಿದಂತೆ ಯಾವುದೇ ನೆಡುತೋಪು ಬೆಳೆಸುವ ಯೋಜನೆ  ನಡೆಸಿರುವುದು ಸರಿಯಲ್ಲ. ಅಂತರ್ಜಲಕ್ಕೆ ಸಹಜ ಕಾಡು ಪೂರಕವಾಗಿದ್ದರೆ  ನೆಡುತೋಪು ಗಳು ಭೂಮಿಯಲ್ಲಿ ನೀರಿಂಗಿಸಲು ಬಿಡುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ತೀವ್ರ ಜಲಕ್ಷಾಮ ತಲೆದೋರಬಹುದು . ವಾತಾವರಣದಲ್ಲಿನ ಕಾರ್ಬನ್  ಕಡಿಮೆ ಮಾಡುವುದು ಎಷ್ಟು ಮುಖ್ಯವೋ ಭೂಮಿಯಲ್ಲಿ  ನೀರಿಂಗಿಸುವ ಅಗತ್ಯವೂ ಅಷ್ಟೇ ಮುಖ್ಯವಾಗಿದೆ ಎಂದರು. 

ಈ ಸಭೆಗೆ ವಿಶೇಷ ಆಮಂತ್ರಿತರಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ರಾಷ್ಟ್ರೀಯ ಸಂಚಾಲಕರಾದ ಶ್ರೀ ಬಸವರಾಜ ಪಾಟೀಲ್ ರವರು  ಮಾತನಾಡಿ ಅರಣ್ಯ ಕಾಯ್ದೆ ತಿದ್ದುಪಡಿಯಿಂದ ಆಗುವ ಪರಿಣಾಮಗಳ ಕುರಿತು ಪರಿಸರ ತಜ್ಞರ ಚರ್ಚೆ ಅರ್ಥಪೂರ್ಣವಾಗಿದೆ.  ಜಾರಿಗೆ ತರಲು ಉದ್ದೇಶಿಸಿರುವ ತಿದ್ದುಪಡಿ ಕಾಯ್ದೆಯಲ್ಲಿ ಅನೇಕ ಲೋಪದೋಷಗಳನ್ನು ತಜ್ಞರು ಸಭೆಯ ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲಿ ಜಿಲ್ಲೆಯ ಹಾಗೂ ರಾಜ್ಯದ  ಇನ್ನಷ್ಟು ಪರಿಸರ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.  ವಿವಿಧ ರಾಜ್ಯಗಳ ಸಂಸದರನ್ನು ಭೇಟಿ ಮಾಡಿ ಸಂಸತ್ ನಲ್ಲಿ ಮಂಡಿಸಲಿರುವ ಹೊಸ ಕಾಯ್ದೆಯನ್ನು  ತಾತ್ಕಾಲಿಕವಾಗಿ ತಡೆ ಹಿಡಿಯಲು ಪ್ರಯತ್ನಿಸಬೇಕೆಂದು ಕೋರುವುದಾಗಿಯೂ ತಿಳಿಸಿದರು .

ಸಭೆಯ ಅಧ್ಯಕ್ಷತೆಯನ್ನು ಮಾಜಿ ನಗರಸಭಾ ಅಧ್ಯಕ್ಷ ಶ್ರೀ  ಎಂ.ಶಂಕರ್ ವಹಿಸಿದ್ದರು.  ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಶ್ರೀ ಮಾಧವನ್,ಮಾಚೇನಹಳ್ಳಿ ಕೈಗಾರಿಕಾ ವಸಹತು ಸಂಘದ ಅಧ್ಯಕ್ಷ ಶ್ರೀ ರಮೇಶ್ ಹೆಗ್ಡೆ, ಬಾಲಕೃಷ್ಣ ನಾಯ್ಡು, ಲೋಕೇಶ್ವರಪ್ಪ, ತ್ಯಾಗರಾಜ ಮಿತ್ಯಾಂತ, ದಿನೇಶ್ ಶೇಟ್, ರಾಜೇಶ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.