ಶಿವಮೊಗ್ಗದಿಂದ ಪ್ರಸಾರ ಕೇಂದ್ರ ಆರಂಭಿಸಲು ಮನವಿ

ಶಿವಮೊಗ್ಗ: ಆಕಾಶವಾಣಿ ಭದ್ರಾವತಿ (ಎಫ್‌ಎಂ 103.5) ಕೇಂದ್ರದಿಂದ ಪ್ರಸಾರ ಆಗುತ್ತಿರುವ ಕಾರ್ಯಕ್ರಮಗಳ ಪ್ರಸಾರವನ್ನು ಶಿವಮೊಗ್ಗದಿಂದ ಹೆಚ್ಚಿನ ತರಂಗಾಂತರದ ಮೂಲಕ ಪ್ರಸಾರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವಂತೆ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ಆಕಾಶವಾಣಿ ಭದ್ರಾವತಿ ಕೇಂದ್ರ 1 ಕಿವ್ಯಾ (ತರಂಗಾಂತರ 103.5) ಸಾಮರ್ಥ್ಯದ ಪ್ರಸರಣಾ ವ್ಯವಸ್ಥೆ ಹೊಂದಿದ್ದು, ಇದು 20 ಕಿಲೋ ಮೀಟರನಲ್ಲಿ ವಾಸಿಸುತ್ತಿರುವ ಜನ ಸಾಮಾನ್ಯರಿಗೆ ಅನುಕೂಲ ಆಗುತ್ತಿದೆ. ಲೋಕಸಭಾ ಸದಸ್ಯರ ಆಸಕ್ತಿಯಿಂದ ಈಗಾಗಲೇ ಶಿವಮೊಗ್ಗ ದೂರದರ್ಶನ ಕೇಂದ್ರದ 150 ಮೀ ಪ್ರಸರಣಾ ಗೋಪುರದ ಮೇಲೆ 10 ಕಿವ್ಯಾ ಸಾಮರ್ಥ್ಯದ ಎಫ್‌ಎಂ ಟ್ರಾನ್ಸ್ಮೀಟರ್ ಸ್ಥಾಪಿಸಲು ಕೇಂದ್ರಸರ್ಕಾರ (ಪ್ರಸಾರ ಭಾರತಿ) ಒಪ್ಪಿಗೆ ನೀಡಿ ಆದೇಶಿಸಿದೆ.
ಭದ್ರಾವತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮದ ಪ್ರಸಾರ ವ್ಯಾಪ್ತಿ ಸುತ್ತಲಿನ 8 ಜಿಲ್ಲೆಗೆ ತಲುಪಲು ಸಾದ್ಯವಾಗುತ್ತದೆ. ಈ ಕ್ರಮದಿಂದ ವಾಣಿಜ್ಯ ಚಟುವಟಿಕೆ, ಸಾಂಸ್ಕೃತಿಕ ಸೊಬಗು, ಆರೋಗ್ಯ ಮಾಹಿತಿ, ಶಿಕ್ಷಣ ಮತ್ತು ರಾಜ್ಯ ಹಾಗೂ ದೇಶದ ಸುದ್ದಿ, ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರನ್ನು ತಲುಪಲು ಸಾಧ್ಯ. ಎಫ್‌ಎಂ ಪ್ರಸಾರದಿಂದ ಸಾಮಾನ್ಯ ಮೊಬೈಲ್, ಕಂಪ್ಯೂಟರ್ ಹಾಗೂ ಕಾರ್‌ನಲ್ಲೂ ಕೇಳಲು ಸಾಧ್ಯವಾಗುತ್ತದೆ.
ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ, ಪ್ರಚಾರ ಕಾರ್ಯಕ್ರಮ, ಕುಶಲತೆಯ ತರಬೇತಿಗಳನ್ನು ರೇಡಿಯೋ ಮುಖಾಂತರ ನೀಡಬಹುದಾಗಿದೆ. ಶಿವಮೊಗ್ಗದಾದ್ಯಂತ ಪ್ರಚಾರ ಮಾಡಲು ಸಾಧ್ಯವಾಗಲಿದೆ. ಈಗಾಗಲೇ ಶಿವಮೊಗ್ಗದ ದೂರದರ್ಶನ 150 ಮೀಟರ್ ಗೋಪುರದ ಮೇಲೆ 10 ಕಿವ್ಯಾ ಟ್ರಾನ್ಸ್ಮೀಟರ್ ಸ್ಥಾಪಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವಂತೆ  ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್ ಮತ್ತು ಸಹ ಕಾರ್ಯದರ್ಶಿ ಜಿ.ವಿಜಯಕುಮಾರ ಮನವಿ ನೀಡಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.