ಸೇವಾಕೇಂದ್ರಗಳಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಫಾರಂ ಕೊಟ್ಟು ಫಲಾನುಭವಿಗಳಿಂದ ಅರ್ಜಿ ಪಡೆದು 100 ರೂ ವಸೂಲಿ!!

ಶಿವಮೊಗ್ಗ : ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಉಚಿತವೆಂದು ಈಗಾಗಲೇ ಸರ್ಕಾರ ಘೋಷಿಸಿದೆ.ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಹಲವಾರು ಸೇವಾಸಿಂಧು ಸಲ್ಲಿಸುವ ಕೇಂದ್ರಗಳು ಅರ್ಜಿಸಲ್ಲಿಸುವ ಫಲಾನುಭವಿಗಳಿಂದ ಬೇಕಾಬಿಟ್ಟಿ ಹಣ ವಸೂಲಿಗೆ ಇಳಿದಿವೆ ಎಂಬ ಆರೋಪ ನಾಗರೀಕರಿಂದ ಕೇಳಿಬರುತ್ತಿದೆ.
ಸೇವಾಕೇಂದ್ರಗಳಲ್ಲಿ ಜಾರಿಯಾಗದ  ಗೃಹ ಲಕ್ಷ್ಮಿ ಯೋಜನೆಗೆ ಫಾರಂ ಕೊಟ್ಟು ಅರ್ಜಿ ಪಡೆದು 100 ರೂ ವಸೂಲಿ:
ಗೃಹ ಲಕ್ಷ್ಮಿ ಯೋಜನೆ ಅಡಿ ಸೌಲಭ್ಯ ಪಡೆಯಲು ಮನೆಯ ಯಜಮಾನಿ ಅರ್ಜಿ ಸಲ್ಲಿಸಲು ರೂ 2000/- ಪಡೆಯಲು ಸರ್ಕಾರ ಇನ್ನು ಆನ್ ಲೈನ್ ನಲ್ಲಿ ಅರ್ಜಿ ಬಿಡುಗಡೆ ಮಾಡಿಲ್ಲ.  ಆದರೆ ಈಗಾಗಲೇ ಗೋಪಾಳ, ಗೋಪಾಲಗೌಡ ಬಡಾವಣೆ, ದುರ್ಗಿಗುಡಿ, ಬಸ್ ಸ್ಟ್ಯಾಂಡ್, ವಿದ್ಯಾನಗರ ಸುತ್ತಮುತ್ತಲಿನ ನಾಗರೀಕ ಸೇವಾಕೇಂದ್ರಗಳಲ್ಲಿ ಈಗಾಗಲೇ ಫಲಾನುಭವಿಗಳಿಂದ  ಬೇಕಾದ ದಾಖಲಾತಿ ಗಳನ್ನು ಪಡೆದು ಅರ್ಜಿ ನೀಡಿ ರೂ.100/- ಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಈಗಾಗಲೇ ಇದಕ್ಕೆ ಬ್ರೋಕರ್ ಗಳು ಸಹ ಇದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಆದರೆ ಇತ್ತೀಚೆಗೆ  ಗೃಹ ಜ್ಯೋತಿಯಡಿ ಉಚಿತ 200 ಯುನಿಟ್ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಗ್ರಾಮ ಒನ್,ಶಿವಮೊಗ್ಗ  ಒನ್ ಮತ್ತು ಇತರೇ ಸೇವಾಸಿಂಧು ನಾಗರೀಕ ಸೇವಾಕೇಂದ್ರ ಗಳಲ್ಲಿ ಸಾರ್ವಜನಿಕರು ಫಲಾನುಭವಿಗಳು ಅರ್ಜಿ ಸಲ್ಲಿಸಬೇಕಾದರೇ ಅವರಿಂದ  70 ರಿಂದ100 ರೂಗಳವರೆಗೆ ವಸೂಲಿ ಮಾಡುತ್ತಿದ್ದಾರೆಂದು ಇದರ ಮಧ್ಯೆ ಬ್ರೋಕರ್ ಗಳ ಹಾವಳಿ ಸಹ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸುತಿದ್ದಾರೆ. 

ಈ ಯೋಜನೆ ರೂಪುರೇಷೆಗೋಳಿಸುವ ಸಂಬಂಧಿಸಿದ ಅಧಿಕಾರಿಗಳಿಗೆ ಹಣ ವಸೂಲಿ ಮಾಹಿತಿ ತಿಳಿದರೂ ಸಹ ಸುಮ್ಮನೆ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಸಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಉಪಮುಖ್ಯಮಂತ್ರಿ ಡಿಕೆಶಿ ಮಾತಿಗೆ ಕಿಮ್ಮತ್ತಿಲ್ಲ:

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸರ್ಕಾರದ ಗ್ರಾಮ ಒನ್ ಮತ್ತು ಸೇವಾಸಿಂಧು ಸೇವಾ ಕೇಂದ್ರದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗೆ ಫಲಾನುಭವಿಗಳಿಂದ ಬೇಕಾಬಿಟ್ಟಿ ಹಣ ವಸೂಲಾತಿ ಮಾಡುತ್ತಿದ್ದಾರೆಂದು ದೂರು ಬಂದರೆ ಅಂತಹ ಕೇಂದ್ರದ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ 
ಕೈಗೊಳ್ಳುವುದಾಗಿ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆಯನ್ನು ಸಹ ನೀಡಿದ್ದರೂ ಕೂಡಾ ಶಿವಮೊಗ್ಗ ನಗರದಲ್ಲಿನ  ಹಲವು ಗ್ರಾಮ ಒನ್ ಮತ್ತು ಸೇವಾಸಿಂಧು ಕೇಂದ್ರಗಳಲ್ಲಿ ಫಲಾನುಭವಿಗಳಿಂದ ತಮಗೆ ಇಷ್ಟಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಸೇವಾಕೇಂದ್ರಗಳಲ್ಲಿ ಗ್ಯಾರಂಟಿ ಯೋಜನೆ ಸೌಲಭ್ಯಗಳನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು 20 ರಿಂದ 30 ರೂ ಸರ್ವಿಸ್ ಚಾರ್ಜ್  ಹಣ ಪಡೆದರೇ ಏನು ತೊಂದರೆ ಇಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ ವಾಗಿದೆ.

ಈ ಬಗ್ಗೆ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಸರ್ಕಾರ ಗಮನಹರಿಸಿ ಹಣ ಸುಲಿಗೆ ಮಾಡುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಿ. ಸೇವಾಕೇಂದ್ರಗಳಲ್ಲಿ ಅರ್ಜಿಸಲ್ಲಿಸಲು ಸರ್ವಿಸ್‌ ಚಾರ್ಜ್ ಎಷ್ಟು ಪಡೆಯಬೇಕು ಎಂಬುದನ್ನು ನಿಗದಿ ಮಾಡಿ ಘೋಷಣೆ ಮಾಡಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.