ಶಿವಮೊಗ್ಗ ವಿಧಾನಸಭಾ ಕ್ಷೇತ್ರ:ಪುರುಷ- ಮಹಿಳಾ ಮತದಾರರು ಒಟ್ಟು ಎಷ್ಟು ಅಂಕಿಅಂಶಗಳು ನೋಡಿ...

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂಕಿಅಂಶಗಳು:
Statistics on Shivamogga City Assembly Constituency:
10 May 2023ರಂದು ನಡೆಯುವ 16ನೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಚುನಾವಣೆಯ ಕೆಲವು ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. 15 August 1947ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಪ್ರಪ್ರಥಮವಾಗಿ ದೇಶಾದ್ಯಂತ 1951ರಲ್ಲಿ ಪ್ರಥಮ ಬಾರಿಗೆ ಲೋಕಸಭೆ ಚುನಾವಣೆಗೆ ಈ ದೇಶ ಸಾಕ್ಷಿಯಾಗುತ್ತದೆ. ಅದೇ ರೀತಿ 26 March 1952ರಂದು ಅಂದಿನ ಮೈಸೂರ್ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆ ನಡೆಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಅಂದಿನ ಮೈಸೂರ್ ರಾಜ್ಯದಲ್ಲಿ ಕೂರ್ಗ್ (ಕೊಡಗು), ಬಾಂಬೆ ಕರ್ನಾಟಕ (ಕಿತ್ತೂರು ಕರ್ನಾಟಕ), ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಹಾಗೂ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಕರಾವಳಿ ಮತ್ತು ಬಳ್ಳಾರಿ ಪ್ರದೇಶಗಳು ಸೇರಿರುವುದಿಲ್ಲ. 1952ರಿಂದ 2018ರವರೆಗೆ ಕರ್ನಾಟಕದಲ್ಲಿ ಒಟ್ಟು 15 ವಿಧಾನಸಭಾ ಚುನಾವಣೆಗಳು ಆಗಿದ್ದು ಈ ಬಾರಿ ನಡೆಯುತ್ತಿರುವುದು 16ನೇ ವಿಧಾನಸಭಾ ಚುನಾವಣೆ.  1 November 1956ರಂದು ನಡೆದ ಮೈಸೂರ್ ರಾಜ್ಯದ ಏಕೀಕರಣದ ನಂತರ 1957ರಲ್ಲಿ ಚುನಾವಣೆ ಆದರೆ, ಇನ್ನು 1973ರಲ್ಲಿ ಮೈಸೂರ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಆದನಂತರ 1978ರಲ್ಲಿ ವಿಧಾನಸಭಾ ಚುನಾವಣೆಗೆ ಈ ರಾಜ್ಯದ ಜನರು ಸಾಕ್ಷಿ ಆಗುತ್ತಾರೆ. ಇನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1952ರಲ್ಲಿ ನಡೆದ ಪ್ರಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಶ್ರೀ ಎಸ್. ಆರ್. ನಾಗಪ್ಪ ಶೆಟ್ಟಿಯವರು ಜಯಗಳಿಸಿದರೆ, 1957ರ ಚುನಾವಣೆಯಲ್ಲಿ ಶ್ರೀಮತಿ ರತ್ನಮ್ಮ ಮಾಧವ್ ರಾವ್ (INC) ಇವರು ಜಯಗಳಿಸುವ ಮೂಲಕ ನಮ್ಮ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಪ್ರಥಮ ಮಹಿಳಾ ಶಾಸಕರಾಗುತ್ತಾರೆ. ಇಲ್ಲಿಯವರೆಗೆ ನಡೆದ 15 ವಿಧಾನಸಭಾ ಚುನಾವಣೆಗಳಲ್ಲಿ ಒಂಬತ್ತು (9) ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷ ಜಯಗಳಿಸಿದರೆ, ಆರು (6) ಬಾರಿ ಭಾರತೀಯ ಜನತಾ ಪಕ್ಷ (BJP) ಈ ಕ್ಷೇತ್ರದಲ್ಲಿ ಜಯಗಳಿಸಿರುತ್ತದೆ. ಹಾಲಿ  ಶಾಸಕರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಒಟ್ಟು ಐದು ಬಾರಿ ಗೆದ್ದು ಈ ಕ್ಷೇತ್ರವನ್ನು ಅತಿ ಹೆಚ್ಚು ಬಾರಿ ಪ್ರತಿನಿಧಿಸುವ ಮೂಲಕ ಇತಿಹಾಸವನ್ನು ರಚಿಸಿದರೆ, ಇನ್ನೊಂದು ಕಡೆ ಶ್ರೀಮತಿ ರತ್ನಮ್ಮ ಮಾಧವ ರಾವ್ ಅವರು ಎರಡು ಬಾರಿ ಮಹಿಳಾ ಶಾಸಕರಾಗಿ ಇನ್ನೊಂದು ಇತಿಹಾಸವನ್ನು ನಿರ್ಮಾಣ ಮಾಡಿರುವುದು ಗಮನಾರ್ಹ ಸಂಗತಿ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಐದು ವರ್ಷದ ಮಟ್ಟಿಗೆ ಶಾಸಕರಾಗುವ ಭಾಗ್ಯ ಇದ್ದರು ಸಹಾ ನಮ್ಮ ಕರ್ನಾಟಕದಲ್ಲಿ ಮೂರು ಬಾರಿ ಅವಧಿಗೆ ಮುನ್ನವೇ ಚುನಾವಣೆ ಆಗಿದ್ದನ್ನು ಗಮನಿಸಬಹುದು. 1983-1985, 1985-1989 ಮತ್ತು  2004-2008ರಲ್ಲಿ 
ಅವಧಿಗೆ ಮುನ್ನವೇ ಚುನಾವಣೆ ನಡೆದಿರುತ್ತದೆ. ಇನ್ನು ಸಮಸ್ತ ಭಾರತದಲ್ಲಿ 1975ರಿಂದ 1977ರವರೆಗೆ ಜಾರಿಯಲ್ಲಿದ್ದ ಎಮರ್ಜೆನ್ಸಿಯ (Emergency Period) ಕಾರಣದಿಂದ 1972ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಒಟ್ಟು ಆರು ವರ್ಷಗಳ ಸುದೀರ್ಘಕಾಲ ಶಾಸಕರಾಗಿ ಕಾರ್ಯ ಮಾಡಿದ್ದು ಬಹಳ ವಿಶೇಷವಾದ ಅಂಶ. ಎಮರ್ಜೆನ್ಸಿಯ ಕಾಲಘಟ್ಟದಲ್ಲಿ ಅಂದರೆ 1972ರಿಂದ 1978ರವರೆಗೆ ಒಟ್ಟು ಆರು ವರ್ಷಗಳ ಕಾಲ ನಮ್ಮ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸಿದವರು ಶ್ರೀ ನಾರಾಯಣ ಅಯ್ಯಂಗಾರ್.  

ಬರುವ 10 ಮೇ 2023ರಂದು ನಡೆಯುತ್ತಿರುವ 16ನೇ ಚುನಾವಣೆಗೆ ನಮ್ಮ ಹೆಮ್ಮೆಯ ಶಿವಮೊಗ್ಗ ನಗರದ ಪ್ರತಿಯೊಬ್ಬರು ಆಸಕ್ತಿಯಿಂದ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವ ಮುಖಾಂತರ ತಮ್ಮ ಶಾಸಕರನ್ನು ಆರಿಸಲು ಈ ಚುನಾವಣೆ ಎಂಬ ದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
ನಮ್ಮ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳ ಬಗ್ಗೆ ನಾವು ಗಮನ ಹರಿಸೋಣ:-

ಒಟ್ಟು ಮತದಾರರ ಸಂಖ್ಯೆ - 2,60,704
ಪುರುಷ ಮತದಾರರ ಸಂಖ್ಯೆ - 1,27,441
ಮಹಿಳಾ ಮತದಾರರ ಸಂಖ್ಯೆ - 1,33,249
ಮಂಗಳಮುಖಿ ಮತದಾರರ ಸಂಖ್ಯೆ - 14
ಒಟ್ಟು ಮತಗಟ್ಟೆಗಳ ಸಂಖ್ಯೆ - 284

ಇನ್ನೂ ಈ ಬಾರಿ ಭಾರತದ ಚುನಾವಣಾ ಆಯೋಗ ಪ್ರಥಮ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ವಿಕಲಾಂಗ ವ್ಯಕ್ತಿಗಳಿಗೆ ಮನೆಯಿಂದಲೇ ಚುನಾವಣೆ ಮಾಡುವ ವ್ಯವಸ್ಥೆಯನ್ನು ನೀಡಿದ ಪರಿಣಾಮವಾಗಿ ಒಟ್ಟು 349 ಹಿರಿಯ ನಾಗರಿಕರು ಹಾಗೂ 47 ವಿಕಲಾಂಗ ವ್ಯಕ್ತಿಗಳು ಅಂದರೆ ಒಟ್ಟಾರೆ 396 ಶಿವಮೊಗ್ಗದ ನಾಗರಿಕರು ಪ್ರಪ್ರಥಮ ಬಾರಿಗೆ ತಮ್ಮ ಮನೆಯಿಂದಲೇ ಮತವನ್ನು ಚಲಾಯಿಸಿರುತ್ತಾರೆ.  ಹಾಗೆ ಈ ಚುನಾವಣೆ ಕಾರ್ಯದಲ್ಲಿ ಭಾಗವಹಿಸುವ ಸರ್ಕಾರಿ ಅಧಿಕಾರಿಗಳಿಗೆ ಅಂಚೆಪತ್ರದ ಮೂಲಕ ಮತದಾನ ಮಾಡುವ ಅವಕಾಶ ಇದ್ದು ಈ ಬಾರಿ 2273 ಸರ್ಕಾರಿ ಸಿಬ್ಬಂದಿಗಳು ಈ ವ್ಯವಸ್ಥೆಯನ್ನು ಉಪಯೋಗಿಸುವ ಮೂಲಕ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ. 

2018ರಲ್ಲಿ ನಡೆದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 1,73,081 ನಾಗರಿಕರು ಮಾತ್ರ ಈ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮೂಲಕ ನೀರಸ ಪ್ರತಿಕ್ರಿಯೆಯನ್ನು ತೋರಿಸಿರುವುದು ಬಹಳ ದುಃಖಕರ ಸಂಗತಿ. 2018ರ ಚುನಾವಣೆಯಲ್ಲಿ ಒಟ್ಟು ಮತದಾನದ ಶೇಕಡವಾರು  66.7% ಇದ್ದರೆ  ಈ ಬಾರಿ ನಾವೆಲ್ಲರೂ ತಪ್ಪದೆ ಮತದಾನ ಮಾಡುವ ಮೂಲಕ ಕೇವಲ ಶಿವಮೊಗ್ಗ ಜಿಲ್ಲೆ ಅಲ್ಲದೆ ಸಮಸ್ತ ರಾಜ್ಯದಲ್ಲಿ ಅತಿ ಹೆಚ್ಚು ಮತದಾನ ಮಾಡಿದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ನಾವೆಲ್ಲರೂ ಕಾರಣಭೂತರಾಗೋಣ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮತದಾನದ ದಿನವಾದ 10ನೇ ತಾರೀಖಿನಂದು ಕರ್ನಾಟಕದ ಕೆಲವು ಕಡೆ (ಶಿವಮೊಗ್ಗ ನಗರ ಸಹಿತ) ಮಳೆ ಆಗುವ ಸೂಚನೆ ಇದ್ದರೂ ಸಹ ನಾವೆಲ್ಲರೂ ಇದಕ್ಕೆ ತಲೆಗೊಡದೆ ನಮ್ಮ ಮತಗಟ್ಟೆಗೆ ಭೇಟಿ ನೀಡಿ ನಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವ ಮುಖಾಂತರ ಈ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸೋಣ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.