ಹೊಸನಗರ ; ಉರುಳಿಗೆ ಸಿಲುಕಿ ಚಿರತೆ ಸಾವು !

ಹೊಸನಗರ: ತಾಲೂಕಿನಲ್ಲಿ ನಗರ ಹೋಬಳಿ ವ್ಯಾಪ್ತಿಯ ಅಂಡಗದೋದೂರು ಗ್ರಾಮದ ಸರ್ವೆ ನಂಬರ್ 64 ರಲ್ಲಿ 4-5 ವರ್ಷ ಪ್ರಾಯದ ಗಂಡು ಚಿರತೆ ಕಾಡು ಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಶುಕ್ರವಾರ ನಗರ ವಲಯ ಅರಣ್ಯ ಅಧಿಕಾರಿ ಸಂಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾ ವನ್ಯಜೀವಿ ಸಂರಕ್ಷಣ ವಿಭಾಗದ ವೈದ್ಯರನ್ನು ಸ್ಥಳಕ್ಕೆ ಕರೆಸಿ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಚಿರತೆ ಸಾವಿಗೀಡಾಗಿ ಒಂದು ದಿನವಷ್ಟೆ ಕಳೆದಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲಿ ಸೂಕ್ತ ವಿಧಿವಿಧಾನ ಕೈಗೊಳ್ಳಲಾಗಿದೆ ಎಂದು ನಗರ ವಲಯ ಆರ್.ಎಫ್.ಒ ಸಂಜಯ್ ಪತ್ರಿಕೆಗೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೆಲವರ ಮೇಲೆ ಅನುಮಾನ ವ್ಯಕ್ತವಾಗಿದ್ದು ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕ್ಕೆ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.