ಮೇ 9,10 ರಂದು ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ಪ್ರಸಾರಕ್ಕೆ ತಡೆ: ಆಯೋಗ ಆದೇಶ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ  2023 ತೀವ್ರ ಜಿದ್ದಾಜಿದ್ದಿಯಿಂದ ಕೂಡಿದೆ. ಮತದಾನಕ್ಕೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಬಹಿರಂಗ ಪ್ರಚಾರ ಸೋಮವಾರ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಇದರ ಮಧ್ಯೆ ಮೇ 9 ಮತ್ತು 10 ರಂದು ಮಾಧ್ಯಮಗಳಲ್ಲಿ ಚುನಾವಣಾ ವಿಷಯ ಪ್ರಸಾರಕ್ಕೆ ತಡೆ ಹಾಗೂ ಜಾಹೀರಾತು ನಿರ್ಬಂಧಿಸುವ ಕುರಿತು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಂದ ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಈ ನಿರ್ಬಂಧವಿದ್ದು, ದಿನಾಂಕ 9 ಮತ್ತು 10 ಮೇ 2023 ರಂದು (ಚುನಾವಣೆಯ ದಿನದ ಒಂದು ದಿನ ಮೊದಲು ಮತ್ತು ಮತದಾನದ ದಿನದಂದು) ಪ್ರಕಟಿಸಲು ಉದ್ದೇಶಿಸಿರುವ ರಾಜಕೀಯ ಜಾಹೀರಾತಿನ ವಿಷಯವನ್ನು ಆಯಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಇತ್ಯಾದಿ ಸಂಸ್ಥೆಗಳು ಸಂದರ್ಭಾನುಸಾರ ರಾಜ್ಯ, ಜಿಲ್ಲಾ ಮಟ್ಟದಲ್ಲಿ MCMC ಸಮಿತಿಯಿಂದ ಪೂರ್ವ-ಪ್ರಮಾಣೀಕರಣ ಪಡೆದು ಪ್ರಕಟಿಸಬಹುದಾಗಿದೆ.

ಇದನ್ನೂ ಓದಿ: ಮೇ 8ರಿಂದ ಬಹಿರಂಗ ಪ್ರಚಾರಕ್ಕೆ ತೆರೆ: ಸಂಜೆ 5ರಿಂದ ಮೇ10ರ ಮಧ್ಯರಾತ್ರಿವರೆಗೆ ಮದ್ಯ ನಿಷೇಧ


ಈ ನಿಟ್ಟಿನಲ್ಲಿ, ಮೇ 9 ಮತ್ತು 10 ರಂದು ಮುದ್ರಣ ಮಾಧ್ಯಮದಲ್ಲಿ ಜಾಹೀರಾತುಗಳನ್ನು ಪ್ರಕಟಿಸಲು ಬಯಸುವ ಯಾವುದೇ ರಾಜಕೀಯ ಪಕ್ಷಗಳು ಉದ್ದೇಶಿತ ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಅನುಬಂಧ-ಸಿ ನಮೂನೆಯಲ್ಲಿ 07.05.2023 ರೊಳಗೆ ಸರಿಯಾಗಿ ಭರ್ತಿ ಮಾಡಿದ ಅರ್ಜಿಯನ್ನು ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ನಿರ್ವಾಚನ ನಿಲಯ, ಶೇಷಾದ್ರಿ ರಸ್ತೆ, ಬೆಂಗಳೂರು 560001 ರಲ್ಲಿ ಇರುವ ರಾಜ್ಯ ಪೂರ್ವ ಪಮಾಣೀಕರಣ ಸಮಿತಿ ಅಥವಾ ಆಯಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಪೂರ್ವ ಪ್ರಮಾಣೀಕರಣ ಸಮಿತಿಗೆ ಸಲ್ಲಿಸಿ ಪೂರ್ವ ಪ್ರಮಾಣೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ.

ಮತದಾನದ 48 ಗಂಟೆಗಳ ಮೊದಲು ಮಾಧ್ಯಮಗಳಲ್ಲಿ ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 120ರ ಪ್ರಕಾರ ನಿಷೇಧಿಸಲಾಗಿದೆ. ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ಎಂದರೆ ಚುನಾವಣೆಯ ಫಲಿತಾಂಶದ ಮೇಲೆ ಪುಭಾವ ಬೀರಲು ಅಥವಾ ಪರಿಣಾಮ ಬೀರಲು ಉದ್ದೇಶಿಸಿರುವ ಅಥವಾ ಲೆಕ್ಕಹಾಕಿದ ಯಾವುದೇ ವಿಷಯವಾಗಿರುತ್ತದೆ. ಈ ನಿಬಂಧನೆಯನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿರುತ್ತದೆ.

ಟಿವಿ, ರೇಡಿಯೋ ಚಾನೆಲ್‌ಗಳು, ಕೇಬಲ್ ನೆಟ್‌ವರ್ಕ್‌ಗಳು ಮತ್ತು ಎಲ್ಲಾ ಡಿಜಿಟಲ್ ಮಾಧ್ಯಮಗಳು ಮತದಾನದ ಮೊದಲ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ಸಂಬಂಧಿ ವಿಷಯಗಳ ಪ್ರಸಾರ ಮಾಡದಂತೆ ಕ್ರಮಕೈಗೊಳ್ಳಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಭವಿಷ್ಯವನ್ನು ಪುಚಾರ ಮಾಡುವುದು, ಪೂರ್ವಾಗ್ರಹ ಪಡಿಸುವುದು ಅಥವಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ಯಾವುದೇ ಕಾರ್ಯಕ್ರಮ ಪ್ರಸಾರ ನಿಷೇಧಿಸಲಾಗಿದೆ.

ಮತದಾನದ ಮೊದಲ 48 ಗಂಟೆಗಳ ಅವಧಿಯಲ್ಲಿ ಯಾವುದೇ ಅಭಿಪ್ರಾಯ ಸಂಗ್ರಹದ ಫಲಿತಾಂಶಗಳ ಪ್ರದರ್ಶನ ಮತ್ತು ಪ್ರಮಾಣಿತ ಚರ್ಚೆಗಳು, ವಿಶ್ಲೇಷಣೆ, ದೃಶ್ಯಗಳು ಮತ್ತು ಧ್ವನಿ ಬ್ಲೆಟ್‌ಗಳನ್ನು ಒಳಗೊಂಡಿರುತ್ತದೆ. ರಾಜ್ಯದಲ್ಲಿ ಮತದಾನ ಪ್ರಾರಂಭವಾದಾಗಿನಿಂದ ಮತ್ತು ಮತದಾನ ಮುಗಿದ ಅರ್ಧ ಗಂಟೆಯ ಅವಧಿಯಲ್ಲಿ ಎಕ್ಸಿಟ್ ಪೋಲ್ ನಡೆಸುವುದನ್ನು ಮತ್ತು ಅವುಗಳ ಫಲಿತಾಂಶಗಳನ್ನು ಪ್ರಸಾರ ಮಾಡುವುದನ್ನು ಪ್ರಜಾಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 126 A ರ ಪ್ರಕಾರ ನಿರ್ಬಂಧಿಸಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.