*ಎಂ.ಆರ್ ಲಸಿಕಾಕರಣ : ಶೇ.100 ರಷ್ಟು ಗುರಿ ಸಾಧಿಸಲು ಡಿಸಿ ಸೂಚನೆ*
ಶಿವಮೊಗ್ಗ, ಮೇ.30,;
ಮಾರಕ ದಡಾರ ರುಬೆಲ್ಲಾ ರೋಗದಿಂದ ರಕ್ಷಿಸಲು ಎಲ್ಲ ಅರ್ಹ ಮಕ್ಕಳಿಗೆ ಎಂ.ಆರ್ ಲಸಿಕಾಕರಣ ಆಗಬೇಕು. ಈ ನಿಟ್ಟಿನಲ್ಲಿ ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ಶೇ.100 ಗುರಿ ಸಾಧಿಸಬೇಕೆಂದು ಡಾ.ಸೆಲ್ವಮಣಿ ಆರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಡಾರ ರುಬೆಲ್ಲಾ ನಿರ್ಮೂಲನಾ(ಎಂಆರ್ ಎಲಿಮಿನೇಷನ್)2023 ರೋಡ್‍ಮ್ಯಾಪ್ ಕಾರ್ಯಕ್ರಮ ಹಾಗೂ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ(ಐಡಿಸಿಎಫ್)ಕುರಿತಾದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಡರಾ ರುಬೆಲ್ಲಾ ಲಸಿಕಾಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ಶೇ.100 ರಷ್ಟು ಲಸಿಕೆ ಹಾಕಬೇಕು. ಯಾವುದೇ ಅರ್ಹ ಮಕ್ಕಳು ಎಂ.ಆರ್.ಲಸಿಕಾಕರಣದಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು.
2023 ರ ಡಿಸೆಂಬರ್ ಅಂತ್ಯದ ವೇಳೆಗೆ ದಡಾರ-ರುಬೆಲ್ಲಾ ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು ಮಕ್ಕಳನ್ನು ಎಂ.ಆರ್.ವೈರಸ್ ಸೋಂಕಿನಿಂದ ಮುಕ್ತಗೊಳಿಸಿ ಅದರಿಂದುಂಟಾಗುವ ಸಾವುಗಳನ್ನು ತಡೆಗಟ್ಟುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
ಮನೆ ಮನೆ ಭೇಟಿ ನೀಡಿ 0 ಯಿಂದ 5 ವರ್ಷದ ಮಕ್ಕಳನ್ನು ಗುರುತಿಸಿ, ಲಸಿಕೆ ಪಡೆದಿದ್ದಾರೆಯೇ ಎಂದು ಖಚಿತ ಪಡಿಸುವುದು, ಬಿಟ್ಟು ಹೋದ ಮಕ್ಕಳನ್ನು ಪತ್ತೆ ಹಚ್ಚುವುದು ಹಾಗೂ ಅವರಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡಿ ಶೇ.100 ಪ್ರಗತಿ ಸಾಧಿಸಲು ಅಗತ್ಯವಾದ ಸರ್ವೇ ಕಾರ್ಯ, ಅರಿವು ಮೂಡಿಸುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಹಾಗೂ ಎಂಆರ್ ಕಾಯಿಲೆ ಇರುವ ಮಕ್ಕಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು.
ಪ್ರತಿದಿನ ಸಂಜೆ ಲಸಿಕಾಕರಣದ ಕುರಿತು ಜಿ.ಪಂ ಸಿಇಓ ಅವರಿಗೆ ವರದಿ ಸಲ್ಲಿಸಬೇಕು. ಸಿಇಓ ಅವರು ಪ್ರತಿವಾರ ಈ ಬಗ್ಗೆ ಪ್ರಗತಿ ಪರಿಶೀಲನೆ ಮಾಡುತ್ತಾರೆ. ಡಿಹೆಚ್‍ಓ ರವರು ಕಡಿಮೆ ಲಸಿಕಾಕರಣ ಆದ ತಾಲ್ಲೂಕುಗಳಲ್ಲಿ ವಿಶೇಷ ಸರ್ವೇ ಮಾಡಿ ಸ್ಥಳೀಯ ಆಡಳಿತ ಸಂಸ್ಥೆಗಳು, ಇಲಾಖೆಗಳ ಸಹಕಾರದೊಂದಿಗೆ ಶೇ.100 ಲಸಿಕಾಕರಣ ಮಾಡಬೇಕು ಎಂದು ಸೂಚನೆ ನೀಡಿದರು.
ಲಸಿಕಾಕರಣ ಕೇವಲ ಆರೋಗ್ಯ ಇಲಾಖೆಯ ಕೆಲಸ ಮಾತ್ರವಲ್ಲ. ಇದೊಂದು ಸಾಮೂಹಿಕ ಜವಾಬ್ದಾರಿಯಾಗಿದ್ದು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವೃತ್ತಿ ನಿರತ ಸಂಘಟನೆಗಳು ಸಮನ್ವಯ ಸಾಧಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ ಬ್ಲಾಕ್‍ವಾರು ಕಡಿಮೆ ಲಸಿಕಾಕರಣ ಆಗಿರುವೆಡೆ ಕೇಂದ್ರೀಕರಿಸಿ ತಾಲ್ಲೂಕು ವೈದ್ಯಾಧಿಕಾರಿಗಳು, ಸಿಡಿಪಿಓ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆ ನಡೆಸಿ, ಮನೆ ಮನೆ ಅಭಿಯಾನ ಕೈಗೊಂಡು ಶೇ.100 ಲಸಿಕಾಕರಣ ಆಗಬೇಕೆಂದರು.
ಆರ್‍ಸಿಹೆಚ್‍ಓ ಅಧಿಕಾರಿ ಡಾ.ನಾಗರಾಜನಾಯ್ಕ್ ಮಾತನಾಡಿ 5 ವರ್ಷದೊಳಗಿನ ಮಕ್ಕಳ ಮರಣಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ತೀವ್ರತರ ಅತಿಸಾರ ಬೇಧಿಯೂ ಒಂದು ಪ್ರಮುಖ ಕಾರಣವಾಗಿದ್ದು, ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.5.7 ಪ್ರತಿಶತ ಸಾವು ಈ ಕಾಯಿಲೆಯಿಂದ ಸಂಭವಿಸುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿ ವರ್ಷ ಮೇ ಅಥವಾ ಜೂನ್ ತಿಂಗಳಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. 0 ರಿಂದ 5 ವರ್ಷದ ಮಕ್ಕಳು ಇರುವ ಮನೆಗಳಿಗೆ ಓಆರ್‍ಎಸ್ ಪೊಟ್ಟಣ ನೀಡುವುದು ಮತ್ತು ಅತಿಸಾರ ಬೇಧಿ ಲಕ್ಷಣ ಕಂಡು ಬಂದ ಮಕ್ಕಳಿಗೆ ಚಿಕಿತ್ಸೆ ಮತ್ತು ಅರಿವು ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಮಳೆಗಾಲ ಆರಂಭವಾಗುತ್ತಿದೆ. ಎಲ್ಲ ಅಂಗನವಾಡಿ, ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಓಆರ್‍ಎಸ್ ಪೊಟ್ಟಣ ಸಿದ್ದಪಡಿಸಿ ಇಟ್ಟುಕೊಳ್ಳಬೇಕು. ಮನೆ-ಮನೆಗೆ ತೆರಳಿ ಅತಿಸಾರ ಬೇಧಿ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ತೆರಳಿ ಓಆರ್ ಎಸ್ ಪೊಟ್ಟಣ ನೀಡಬೇಕು. ಕೈತೊಳೆಯುವ ವಿಧಾನದ ಬಗ್ಗೆ ಎಲ್ಲೆಡೆ ಅರಿವು ಮೂಡಿಸುವುದರೊಂದಿಗೆ ಮೈಕ್ರೊಪ್ಲಾನ್ ತಯಾರಿಸಿ, ಐಇಸಿ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದರು
ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ಶಮಾ ಮಾತನಾಡಿ, ಕುಷ್ಟರೋಗ ಲಕ್ಷಣ ಕಂಡುಬಂದ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಚಿಕಿತ್ಸೆ ಪಡೆಯದ ಕುಷ್ಟರೋಗಿಗಳ ಮೂಗಿನ ದ್ರವದಿಂದ, ಉಸಿರಿನ ಮೂಲಕ ಆರೋಗ್ಯವಂತರಿಗೆ ಹರಡುತ್ತದೆ. ಆದ್ದರಿಂದ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು. ಈ ರೋಗವನ್ನು ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು.
ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 40 ಪ್ರಕರಣ ಪತ್ತೆಯಾಗಿದ್ದು ಪ್ರಸಕ್ತ ಸಾಲಿನ ಇಲ್ಲಿಯವರೆಗೆ 12 ಪ್ರಕರಣ ಪತ್ತೆಯಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ ಅರಿವು ಕಾರ್ಯಕ್ರಮ, ಆರಂಭಿಕ ಪತ್ತೆ ಅಭಿಯಾನ, ರಾಷ್ಟ್ರೀಯ ಕುಷ್ಟರೋಗ ನಿವಾರಣಾ ಕಾರ್ಯಕ್ರಮ, ಐಇಸಿ ಮೂಲಕ ಕುಷ್ಟರೋಗ ನಿರ್ಮೂನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು,
ಜಿಲ್ಲಾಧಿಕಾರಿಗಳು, ಕುಷ್ಟರೋಗ ನಿರ್ಮೂಲನೆಗೆ ನಿರಂತರವಾಗಿ ಸರ್ವೇ ಕಾರ್ಯ ನಡೆಸಿ, ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ನಿರಂತರ ಸರ್ವೇ ಕಾರ್ಯ ಕೈಗೊಂಡು ಜಿ.ಪಂ. ಸಿಇಓ ಅವರಿಗೆ ವರದಿ ಸಲ್ಲಿಸಬೇಕು, ಗ್ರಾಮ ಪಂಚಾಯ್ತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ಈ ಬಗ್ಗೆ ಅರಿವು ಹೆಚ್ಚಿಸಬೇಕು. ಶಾಲಾ ಪ್ರಾರ್ಥನೆ ಅವಧಿಯಲ್ಲಿ ಈ ಬಗ್ಗೆ ತಿಳಿಸಬೇಕು. ಹಾಗೂ ಎನ್‍ಜಿಓ ಸಹಯೋಗದಲ್ಲಿ ಹೆಚ್ಚಿನ ಅರಿವು ಮತ್ತು ಪತ್ತೆ ಹಚ್ಚುವ ಕೆಲಸ ಆಗಬೇಕು. ಪರಿಣಾಮಕಾರಿಯಾಗಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ವಿಶ್ವ ತಂಬಾಕುರಹಿತ ದಿನಾಚರಣೆ ಅಂಗವಾಗಿ ದಿ: 31-05-2023 ರಂದು ನಗರದಲ್ಲಿ ಜಾಗೃತಿ ಜಾಥಾ ಹಾಗೂ ತಾಲ್ಲೂಕುಗಳಲ್ಲಿ ಗುಲಾಬಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ಕುಷ್ಟರೋಗ ಪತ್ತೆ ಹಚ್ಚು ಆಂದೋಲನ-2023 ಮತ್ತು ಕುಷ್ಟರೋಗ ಮುಕ್ತ ಭಾರತದ ಕಡೆಗೆ ಎಂಬ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸುರೇಶ್, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಸಿಡಿಪಿಓ ಗಳು, ವೈದ್ಯಾಧಿಕರಿಗಳು, ಅಧಿಕಾರಿಗಳು ಹಾಜರಿದ್ದರು.
Leave a Comment