*ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ*

ಶಿವಮೊಗ್ಗ, ಏಪ್ರಿಲ್ 18, :
     ಮತದಾನ ಒಂದು ವರದಾನ.., ಸಾಕು ಜಾತಿ ಮತ ಹಾಕಿ ಒಂದು ಮತ.. ನಿಮ್ಮ ಬೆರಳಿಗೆ ಇಂಕು, ಪ್ರಜಾಪ್ರಭುತ್ವಕ್ಕೆ ಲಿಂಕು, ಮತದಾನ ನಮ್ಮೆಲ್ಲರ ಹಕ್ಕು, ನೀವು ಹಾಕುವುದು ಒಂದೇ ಒಂದು ಮತ ಅದರ ಹಿಂದೆ ಅಡಗಿದೆ ದೇಶದ ಹಿತ, ಕಳಬೇಡ, ಕೊಲಬೇಡ ಮತದಾನ ಮಾಡುವುದು ಮರಿಯಬೇಡ.. ಎಂಬಿತ್ಯಾದಿ ಫಲಕಗಳನ್ನು ಹಿಡಿದು, ಘೋಷಣೆ ಕೂಗುತ್ತಾ ಜಿಲ್ಲಾಡಳಿತ ಕಚೇರಿ ಆವರಣದಿಂದ ಸಾಗಿ ನಗರದಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.
      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಶಿಕ್ಷಣ ಸಮಿತಿ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಇವರ ಸಹಯೋಗದಲ್ಲಿ ಇಂದು ಜಿಲ್ಲಾಡಳಿತ ಕಚೇರಿ ಆವರಣದಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಉದ್ಘಾಟಿಸಿದರು.
    ಈ ವೇಳೆ ಅವರು ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು. ನಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡಬೇಕು. ಈ ಹಿಂದೆ ಇಲ್ಲಿ ಶೇ.60 ರಷ್ಟು ಮಾತ್ರ ಮತದಾನವಾಗಿದ್ದು, ಈ ಪ್ರಮಾಣ ಹೆಚ್ಚಬೇಕು. ಮತದಾನ ಪ್ರಮಾಣ ಹೆಚ್ಚುನ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಾದ ನೀವು ಮತದಾನದ ಮಹತ್ವವನ್ನು ಅರಿತು ಇತರರಿಗೂ ತಿಳಿಸಿ, ಮತದಾನ ಮಾಡಲು ಪ್ರೇರೇಪಿಸಬೇಕೆಂದರು.
      ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಮಾತನಾಡಿ, ಮತದಾನದ ಮಹತ್ವ ತಿಳಿಸಲು ಈ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಎಲ್ಲರಲ್ಲಿ ಮತದಾನದ ಕುರಿತು ಅರಿವು ಮೂಡಿಸಬೇಕು. ಅರ್ಹರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದರು.
    ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೀರಭದ್ರಪ್ಪ, ಕುವೆಂಪು ವಿವಿ ರಾ.ಸೇ.ಯೋ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಧು ಜಿ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಿದಾನಂದ ಎನ್.ಕೆ, ಸ್ವೀಪ್ ಉಪ ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಹಾಜರಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು/ಸಿಬ್ಬಂದಿಗಳು ಮತದಾನ ಜಾಗೃತಿ ಜಾಥಾದಲ್ಲಿ ಸಾಗಿದರು.
(ಫೋಟೊ ಇದೆ)

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.