*ಮಹಾನ್ ಪುರುಷರ ಮನ ಮಿಡಿದಿದ್ದು ಮನುಕುಲದ ಒಳಿತಿಗಾಗಿ*

ಶಿವಮೊಗ್ಗ, ಮಾರ್ಚ್ 07, :
     ಶ್ರೀ ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಸೇರಿದಂತೆ ಎಲ್ಲ ಮಹಾನ್ ಪುರುಷರ ಮನ ಮಿಡಿದಿದ್ದು ಮನುಜ ಕುಲದ ಒಳಿತಿಗಾಗಿ ಎಂದು ಭದ್ರಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಕುಮಾರ್ ಎನ್ ನುಡಿದರು.
       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
      ಬಸವಣ್ಣ, ಕನಕದಾಸ, ಪುರಂದರ ದಾಸ, ಅಕ್ಕಮಹಾದೇವಿ, ವಿವೇಕಾನಂದ, ಕೈವಾರ ತಾತಯ್ಯ ಹೀಗೆ ಈ ಎಲ್ಲ ಮಹಾನ್ ಪುರುಷರು ಮನು ಕುಲದ ಒಳಿತಿಗಾಗಿ ಬದುಕಿದವರು. ಇವರ್ಯಾರೂ ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತರಾದವರಲ್ಲ. ಇಡೀ ಮನು ಕುಲಕ್ಕೆ ದಾರಿದೀಪ ಆದವರು. 
    ಕೈವಾರ ತಾತತ್ಯನವರು ಕೈವಾರದಲ್ಲಿ ಮುದ್ದಮ್ಮ ಮತ್ತು ಕೊಂಡಪ್ಪ ದಂಪತಿಗೆ ಜನಿಸಿದರು. ಇವರದು ದೈವಭಕ್ತರ ಕುಟುಂಬವಾಗಿದ್ದು, ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರು. ಮುನಿಯಮ್ಮನನ್ನು ಮದುವೆಯಾದ ಇವರು ಬಳೆ ಮಾರುವ ವೃತ್ತಿಯಲ್ಲಿ ತೊಡಗಿದ್ದರು. ಆಧ್ಯಾತ್ಮಿಕತೆ, ಧ್ಯಾನದಲ್ಲಿ ಹೆಚ್ಚಾಗಿ ನಿರತರಾಗಿರುತ್ತಿದ್ದ ಇವರು ಪವಾಡ ಪುರುಷರು ಸಹ ಆಗಿದ್ದರೆಂಬುದಕ್ಕೆ ಅನೇಕ ದಂತ ಕಥೆಗಳು ಇವೆ.
     ತಾತತ್ಯನವರು ಹಸಿದು ಬಂದವರ ಹಸಿವು ನೀಗಿಸುತ್ತಿದ್ದ, ಕಲ್ಲನ್ನು ಕಲ್ಲು ಸಕ್ಕರೆಯಾಗಿಸುತ್ತಿದ್ದ, ಧ್ಯಾನಾಸಕ್ತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಂತಹ ಅನೇಕ ಉಲ್ಲೇಖಗಳನ್ನು ನಾವು ಕಾಣಬಹುದು. ಇವರು ನಾರಾಯಣನ ಸಾಕ್ಷಾತ್ಕಾರದಿಂದ 90 ನೇ ವಯಸ್ಸಿನಿಂದ 110 ವರ್ಷವಾಗುವವರೆಗೆ ಮನುಕುಲದ ಒಳಿತಿಗಾಗಿ ಕಾಲಜ್ಞಾನವನ್ನು ಬರೆದರು. ಸದಾ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿದರು. ಜೀವ ಪರ ಚಿಂತನೆ, ನಡೆದಂತೆ ನುಡಿ ಮತ್ತು ಸಜ್ಜನವರ ಸಹವಾಸದಿಂದ ಆನಂದಮಯ ಜೀವನ ನಡೆಸಬಹುದೆಂದು ತಿಳಿಸಿಕೊಟ್ಟರು ಎಂದು ತಿಳಿಸಿದ ಅವರು ಇವರ ಕೆಲವಾರು ತತ್ವಗಳನ್ನು ನಾವು ಅಳವಡಿಸಿಕೊಂಡಿರೆ ಅದೇ ಸಮಾಜಕ್ಕೆ ನಾವು ಕೊಡುವ ನಿಜವಾದ ಕಾಣಿಕೆ ಎಂದು ಅಭಿಪ್ರಾಯಪಟ್ಟರು.
    ಕಾರ್ಯಕ್ರಮವನ್ನು ತಹಶೀಲ್ದಾರರು ಗ್ರೇಡ್-2 ಆದ ಗಣೇಶ್ ಉದ್ಘಾಟಿಸಿ ಕೈವಾರ ತಾತತ್ಯ ಜಯಂತಿಯ ಶುಭ ಕೋರಿದರು.  ಜಿಲ್ಲಾ ಬಲಿಜ ಸೇವಾ ಸಂಘದ ಅಧ್ಯಕ್ಷ ಜಿ.ರಾಘವೇಂದ್ರ, ಮುಖ್ಯ ಕಾರ್ಯದರ್ಶಿ ಶಿವಕುಮಾರ್, ಬಲಿಜ ಸಮೂಹ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತಪ್ಪ, ಆದಿಲಕ್ಷ್ಮಿ ಬಲಿಜ ಸಮಾಜದ ಸ್ಮಿತಾ ಶಿವಕುಮಾರ್, ಬಲಿಜ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.