ಮಾಧ್ಯಮಗಳು ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಬೇಕು.ಮುಗ್ಧ ಜನರ ತಬ್ಬಿಕೊಳ್ಳಬೇಕು:ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಎನ್. ನಾಗಮೋಹನ್ ದಾಸ್
ಶಿವಮೊಗ್ಗ :- ಮಾಧ್ಯಮ ಇಂದು ಪ್ರಬಲವಾಗಿದೆ. ಆದರೆ ನಿಜವಾದ ಮಾಧ್ಯಮ ಸೃಷ್ಟಿಯಾಗುತ್ತಿಲ್ಲ. ಮಾಲಿಕತ್ವದ ಹಂಗು ಇಲ್ಲಿ ಕಾಣಿಸತೊಡಗಿದೆ. ಗಂಭೀರವಾದ ಸವಾಲುಗಳಿಗೆ ಮಾಧ್ಯಮಗಳು ಉತ್ತರ ಕೊಡಲು ಹೆಣಗುತ್ತಿವೆ. ಮಾಲೀಕರ ಹಿಡಿತಲ್ಲಿರುವುದರಿಂದ ಜನಹಿತ ಕಾಪಾಡುವುದರಲ್ಲೂ ಕೆಲವು ಸಲ ಸೋಲು ಉಂಟಾಗುತ್ತದೆ. ಇಂತಹ ಸಂಕಷ್ಟಗಳನ್ನು ಎದುರಿಸಿಯೂ ಮಾಧ್ಯಮಗಳು ಸರ್ಕಾರದ ಅತಿರೇಕಗಳಿಗೆ ಬುದ್ಧಿ ಹೇಳಬೇಕಾಗುತ್ತದೆ. ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಬೇಕು. ಮುಗ್ಧ ಜನರ ತಬ್ಬಿಕೊಳ್ಳಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಉತ್ತರವಾಗಬೇಕು ಎಂದು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಎನ್. ನಾಗಮೋಹನ್ ದಾಸ್ ಹೇಳಿದರು. ಕಿವಿಮಾತು ಹೇಳಿದರು.
ಅವರು ಇಂದು ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಇಂದು ಸಂವಿಧಾನವೇ ಸರಿಯಾದ ದಾರಿಯಾಗಿದೆ. ಸಂವಿಧಾನದ ಆಶಯಗಳು ಎಲ್ಲಾ ವರ್ಗದ ಎಲ್ಲಾ ಸ್ಥರದ ಜನರನ್ನು ತಲುಪಬೇಕಾಗಿದೆ. ನ್ಯಾಯಾಂಗ ಸೇರಿದಂತೆ ಶಾಸಕಾಂಗ, ಕಾರ್ಯಾಂಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಸಂವಿಧಾನವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಎಚ್ಚರಿಕೆಯಿಂದ ಉಳಿಸಿಕೊಳ್ಳಬೇಕಾಗಿದೆ ಎಂದರು.
ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ತಾವು ಸಂವಿಧಾನ ಓದು ಹೆಸರಿನಲ್ಲಿ ರಾಜ್ಯಾದ್ಯಂತ ಅಭಿಯಾನವನ್ನು ಆರಂಭಿಸಿದ್ದೇನೆ. ಈ ಅಭಿಯಾನ ನನಗೆ ಸಮಾಧಾನ ತಂದಿದೆ. ಕಾಲೇಜು ವಿದ್ಯಾರ್ಥಿಗಳಿಗೆಂದು ಆರಂಭವಾದ ಸಂವಿಧಾನ ಓದು ಇಂದು ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರು, ಮಠಾಧೀಶರು, ಹೀಗೆ ಎಲ್ಲಾ ವರ್ಗದ ಜನರನ್ನು ತಲುಪುತ್ತಿದೆ. ಮತ್ತು ತಲುಪಬೇಕು, ಎಲ್ಲಾ ದಾರಿಗಳ ಮೂಲಕ ಮುಂದುವರಿಯುವುದೇ ಸಂವಿಧಾನ. ಸಂವಿಧಾನದ ದಾರಿಯೇ ಇಂದು ಸಮರ್ಥವಾದ ದಾರಿ ಎಂದರು.
ನ್ಯಾಯಾಲಯದ ಕೇಸುಗಳು ವಿಳಂಬ ಆಗುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿಜ. ಇದಕ್ಕೆ ಹಲವು ಕಾರಣಗಳಿವೆ. ಈಗ ಜನಸಂಖ್ಯೆ ಹೆಚ್ಚಿದೆ. ಜನರು ಬುದ್ಧಿವಂತರಾಗಿದ್ದಾರೆ. ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೂ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಅಗತ್ಯಕ್ಕೆ ತಕ್ಕಂತೆ ನ್ಯಾಯಾಧೀಶರುಗಳ ನೇಮಕ ಆಗಿಲ್ಲ. ಕೋರ್ಟ್ಗಳ ಸಂಖ್ಯೆಯೂ ಹೆಚ್ಚಿಲ್ಲ. ಸೌಲಭ್ಯಗಳೂ ಇಲ್ಲ. ಜೊತೆಗೆ ಬ್ರಿಟಿಷರ ಕಾಲದ ವ್ಯವಸ್ಥೆಯೇ ನಮ್ಮ ಮುಂದಿದೆ. ಸುಪ್ರೀಂ ಕೋರ್ಟ್ನಲ್ಲಿ ಪ್ರತಿ ವರ್ಷ ಸುಮಾರು 70 ಸಾವಿರ ಕೇಸ್ ಇತ್ಯರ್ಥವಾಗುತ್ತಿವೆ. ಹೈಕೋರ್ಟ್ ಮೂಲಕ ಸುಮಾರು 20 ಲಕ್ಷ ಕೇಸುಗಳು ವಿಲೇವಾರಿಯಾಗುತ್ತಿವೆ. ಸ್ಥಳೀಯ ಕೋರ್ಟುಗಳು ಒಂದು ಕೋಟಿಗೂ ಹೆಚ್ಚು ಕೇಸುಗಳನ್ನು ಬಗೆಹರಿಸುತ್ತದೆ. ಇಷ್ಟಾದರೂ 5ಕೋಟಿ ಕೇಸ್ ಬಾಕಿ ಇದೆ ಎಂದರು.
ವಕೀಲ ಶ್ರೀಪಾಲ್ ಮಾತನಾಡಿ, ನಾಗಮೋಹನ್ ದಾಸ್ ಅವರು 10 ವರ್ಷಗಳಲ್ಲಿ 40ಸಾವಿರ ತೀರ್ಪು ನೀಡಿದ್ದಾರೆ. ಇಪ್ಪತ್ತೊಂದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಸಂವಿಧಾನ ಓದು ಪುಸ್ತಕ ನಾಲ್ಕು ಭಾಷೆಗಳಲ್ಲಿ ಪ್ರಕಟವಾಗಿದ್ದು, ಐದು ವರ್ಷಗಳಲ್ಲಿ 20ಲಕ್ಷ ಪ್ರತಿಗಳು ಖರ್ಚಾಗಿವೆ. 1000ಕ್ಕೂ ಹೆಚ್ಚು ಸಂವಿಧಾನ ಓದಿನ ಕಾರ್ಯಕ್ರಮ ಮಾಡಿದ್ದಾರೆ. 6 ಆಯೋಗಗಳ ವರದಿ ನೀಡಿದ್ದಾರೆ ಎಂದರು. ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಮುಖರಾದ ನಾಗರಾಜ ನೇರಿಗೆ, ಸಂತೋಷ್ ಕಾಚಿನಕಟ್ಟೆ, ರಾಜಶೇಖರ್ ಇದ್ದರು.

Leave a Comment