7th Pay commission ಮತ್ತು (ಓಪಿಎಸ್) ಜಾರಿಗಾಗಿ ಒತ್ತಾಯಿಸಿ, ಮಾ.1 ರಿಂದ ಮುಷ್ಕರ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹೇಳಿಕೆ
ಶಿವಮೊಗ್ಗ: ಏಳನೇ ವೇತನ ಆಯೋಗದ (7th Pay commission) ಶಿಫಾರಸುಗಳ ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗಾಗಿ ಒತ್ತಾಯಿಸಿ, ಸರ್ಕಾರಿ ನೌಕರರೆಲ್ಲರೂ ಒಗ್ಗಟ್ಟಾಗಿ ಮಾ.1 ರಿಂದ ಮುಷ್ಕರ ಆರಂಭಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹೇಳಿದ್ದಾರೆ.
ಸರ್ಕಾರದ ಎಲ್ಲ ಸೇವೆಗಳೂ ಬಂದ್ ಆಗಲಿದ್ದು, ಎಲ್ಲ ಇಲಾಖೆಗಳ ಮತ್ತು ವೃಂದಗಳ ಸರ್ಕಾರಿ ನೌಕರರೂ ಈ ಪ್ರತಿಭಟನೆಯಲ್ಲಿ
ಭಾಗವಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತು ಪಡಿಸಿ ಮತ್ತೆಲ್ಲಾ ಸೇವೆಗಳು ಬಂದ್ ಆಗಲಿವೆ. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುವುದಿಲ್ಲ, ಕಂದಾಯ ಇಲಾಖೆಯ ಸೇವೆಗಳು, ವಿಧಾನಸೌಧದ ಕಚೇರಿಗಳು ಬಂದ್ ಆಗಲಿವೆ ಎಂದು ಷಡಾಕ್ಷರಿ ತಿಳಿಸಿದರು.
ವೇತನ ಹೆಚ್ಚಳದ ಕುರಿತು ಸರ್ಕಾರ ಬಾಯಿ ಮಾತಿನ ಹೇಳಿಕೆ ನೀಡುತ್ತಿದೆ. ಆದರೆ ಈ ಸಂಬಂಧ ಆದೇಶ ಹೊರಡಿಸಲು ಯಾವುದೇ ತೊಂದರೆಗಳಿಲ್ಲ. ಇದಕ್ಕಾಗಿ ನಾವು ಕಳೆದ ಎಂಟು ತಿಂಗಳಿನಿಂದ ಕಾಯುತ್ತಿದ್ದೇವೆ. ಬಜೆಟ್‌ನಲ್ಲಿ ಈ ಬಗ್ಗೆ ಪ್ರಕಟಿಸಲಾಗುತ್ತದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂಬುದು ನಮ್ಮ ಇನ್ನೊಂದು ಬೇಡಿಕೆಯಾಗಿದ್ದು, ಈ ಬಗ್ಗೆಯೂ ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಹೀಗಾಗಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಎಲ್ಲ ಇಲಾಖೆಗಳ, ವೃಂದಗಳ ನೌಕರೂ ಇದರಲ್ಲಿ ಭಾಗಿಯಾಗುತ್ತಾರೆ. ಇದು ಹೋರಾಟದ ಮೊದಲ ಹಂತ, ಇದಕ್ಕ ಸರ್ಕಾರ ಬಗ್ಗದೇ ಇದ್ದಲ್ಲಿ ಮುಂದಿನ ಹೋರಾಟದ ಕುರಿತು ಸರ್ಕಾರಿ ನೌಕರರ ಒಟ್ಟು 16 ಲಕ್ಷ ಕುಟುಂಬದ ಸದಸ್ಯರಲ್ಲರೂ ಸೇರಿ ತೀರ್ಮಾನಿಸುತ್ತೇವೆ ಎಂದು ಹೇಳಿದ ಅವರು, ದೇಶದಲ್ಲಿಯೇ ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರಾದ ನಮ್ಮ ಬಗ್ಗೆ ಸರ್ಕಾರ ಉದಾಸೀನತೆ ತೋರುತ್ತಿರುವುದರಿಂದ ಅಸಮಾಧಾನಗೊಂಡು, ಅನಿವಾರ್ಯವಾಗಿ ಈ ಹೋರಾಟಕ್ಕಿಳಿದಿದ್ದೇವೆ ಎಂದು ಹೇಳಿದರು.
ದಿನಾಂಕ 01-07-2022ರಿಂದ ಜಾರಿಗೆ ಬರುವಂತೆ ಶೇ.40 ರಷ್ಟು ವೇತನ ಹೆಚ್ಚಳ ಮಾಡಬೇಕು. ಸರ್ಕಾರಿ ಆದೇಶ ಹೊರಡಿಸುವ ಮೂಲಕ ಇದನ್ನು ಅನುಷ್ಠಾನಗೊಳಿಸಬೇಕು. ಇದರ ಜತೆಗೆ ಪಂಜಾಬ್, ರಾಜಸ್ಥಾನ, ಛತ್ತಿಸ್‌ಗಢ, ಜಾರ್ಖಂಡ್, ಹಿಮಾಚಲಪ್ರದೇಶ ರಾಜ್ಯಗಳ ಮಾದರಿಯಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.
Leave a Comment