ಮಹಿಳೆಯರ ಮೇಲಿನ ಅತ್ಯಾಚಾರ- ದೌರ್ಜನ್ಯ ಪ್ರಕರಣಗಳಲ್ಲಿ ಮಾಧ್ಯಮದವರು ವರದಿ ಮಾಡ ಬೇಕಾದರೇ ಎಚ್ಚರ...ಎಚ್ಚರ... ಕಲಂ 228ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ

 ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಶೇಷವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಪತ್ರಕರ್ತರು ಈ ಹಿಂದೆ ‘ಮೊದಲು ತಮ್ಮ ಪತ್ರಿಕೆಯಲ್ಲಿ, ಸುದ್ದಿ ವಾಹಿನಿಯಲ್ಲಿ ಪ್ರಕಟಿಸುವ ಸ್ಪರ್ಧಾ ಹುಮ್ಮಸ್ಸಿನಲ್ಲಿ ಎಲ್ಲಾ ವಿವರಗಳನ್ನು ಪ್ರಕಟಿಸಿದ ನಂತರ ಕಾನೂನಿನ ಕ್ರಮಕ್ಕೆ ಒಳಗಾಗಿದನ್ನು ನೋಡಿದ್ದೇವೆ.
    ಇಂತಹ ಪ್ರಕರಣಗಳಲ್ಲಿ ಪತ್ರಕರ್ತರು ಅದರಲ್ಲೂ ದೃಶ್ಯ ಮಾಧ್ಯಮದವರು  ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿಯನ್ನು ಮಾಡುವಾಗ ಕಾನೂನಿನಲ್ಲಿ ತಮಗಿರುವ ಸೀಮಿತ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ವರದಿ ಮಾಡುವುದು ಅತ್ಯಗತ್ಯ. ಒಂದು ವೇಳೆ ಮಾಧ್ಯಮದವರು ತಿಳಿದೋ ಅಥವಾ ನಿರ್ಲಕ್ಷ್ಯತನದಿಂದಲೋ ನೊಂದ ಮಹಿಳೆಯ ಗುರುತನ್ನು ಪ್ರಕಟಿಸಿದರೆ ಅದು ಭಾರತ ದಂಡ ಸಂಹಿತ ಕಲಂ 228ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ.
     ಮಹಿಳೆಯರ ಮೇಲಿನ ದೌರ್ಜನ್ಯ ಇತರೆ ಪ್ರಕರಣಗಳ ವರದಿ ಮಾಡುವಾಗ ಕಾನೂನು ಅಂಶಗಳನ್ನು ಪರಿಗಣಿಸಿದಾಗ, ವರದಿಗಾರರ ಮೇಲೆ ಹಾಗೂ ಮಾಧ್ಯಮಗಳಮೇಲೆ ಗುರುತರವಾದ ಜವಾಬ್ದಾರಿ ಇರುವುದು ಸ್ಪಷ್ಟವಾಗುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಕುರಿತಂತೆ ವರದಿಗಾರರು ಕಡ್ಡಾಯವಾಗಿ ಈ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ-
   ನೊಂದ ಮಹಿಳೆಯ ಪರಿಚಯ ಹಾಗೂ ಗುರುತನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳಲ್ಲಿ ಬಹಿರಂಗ ಪಡಿಸತಕ್ಕುದಲ್ಲ. 
    ಕೆಲವು ಚಾಣಾಕ್ಷ ವರದಿಗಾರರು ನೇರವಾಗಿ ಹೆಸಲು ವಿಳಾಸಗಳನ್ನು ಬಹಿರಂಗಪಡಿಸದೇ ಪರೋಕ್ಷವಾಗಿ ನೊಂದ ಮಹಿಳೆಯ ಗುರುತುಗಳನ್ನು ಬಹಿರಂಗಪಡಿಸುವುದನ್ನು ನಾವು ಕಾಣಬಹುದು. ಉದಾಹರಣೆಗೆ ನೊಂದ ಮಹಿಳೆಯ ಊರಿನ ಅಥವಾ ಗ್ರಾಮದವರ ಹೇಳಿಕೆಗಳನ್ನು ಪ್ರಸಾರ ಮಾಡುವುದು. ಮಹಿಳೆಯ ಊರು, ಕೇರಿ ಹಾಗೂ ಇವುಗಳು ಕಾಣುವಂತಹ ಬಸ್ ನಿಲ್ದಾಣ, ಗ್ರಾ.ಪಂ, ದೇವಸ್ಥಾನ ಇತ್ಯಾದಿಗಳನ್ನು ವರದಿ ಮಾಡುವುದನ್ನೂ ಸಹ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿದಂತಾಗುತ್ತದೆ.
    ಇಲ್ಲಿ ‘ಗುರುತು’ ಎನ್ನುವ ಶಬ್ದವನ್ನು ಕೇವಲ ಸೀಮಿತವಾಗಿ ಅರ್ಥೈಸಿಕೊಳ್ಳದೇ ನೊಂದ ಮಹಿಳೆಯು ವಾಸಿಸುವ ಊರು, ಕೇರಿ, ಸಂಬಂಧಿಕರ ವಿವರಗಳು, ಸ್ನೇಹಿತರ ವಿವರಗಳನ್ನು ಬಹಿರಂಗಪಡಿಸುವುದನ್ನೂ ಸಹ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿದಂತಾಗುತ್ತದೆ.
      ನಿಪುಣ್ ಸಕ್ಸೇನಾ & ಎಎನ್‍ಆರ್ ವಿರುದ್ದ ಯೂನಿಯನ್ ಆಫ್ ಇಂಡಿಯಾ & ಓಆರ್‍ಎಸ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನಂತೆ ಅಭಿಪ್ರಾಯಪಟ್ಟಿರುತ್ತದೆ.
     ಒಂದು ವೇಳೆ ವರದಿಯ ಪೂರ್ಣ ಪ್ರಮಾಣದ ಚಿತ್ರಣಕ್ಕೆ ನೊಂದ ಮಹಿಳೆಯ ಗುರುತನ್ನು ಬಹಿರಂಗ ಪಡಿಸಲೇಬೇಕಾದ ಅನಿವಾರ್ಯತೆ ಕಂಡು ಬಂದಲ್ಲಿ ಆಗ, ಈ ಕಾನೂನೇ ವರದಿಗಾರರಿಗೆ ಕೆಲವೊಂದು ಮಾರ್ಗಸೂಚಿಗಳನ್ನು ನಿರ್ದಿಷ್ಟಪಡಿಸಿದೆ.     
    ಮೊದಲು ವರದಿಗಾರರು ಸಂಬಂಧಿಸಿದ ಠಾಣಾಧಿಕಾರಿ ಅಥವಾ ತನಿಕಾಧಿಕಾರಿಗಳನ್ನು ಕಂಡು ಅವರಿಂದ ತನಿಖೆಗೆ ಅಡ್ಡಿಯಾಗದ ರೀತಿಯಲ್ಲಿ ವರದಿ ಮಾಡುವುದಾಗಿ ಮನವರಿಕೆ ಮಾಡಿಕೊಟ್ಟ ನಂತರ ಆ ಠಾಣಾಧಿಕಾರಿ/ತನಿಖಾಧಿಕಾರಿಯಿಂದ ಲಿಖಿತವಾಗಿ ಮಾಹಿತಿ ಹಾಗೂ ಅನುಮತಿ ಕೇಳಿ ಪಡೆಯಬೇಕು.
     ಒಂದು ವೇಳೆ, ಪ್ರಕರಣವನ್ನು ಬೇಧಿಸಿದ ಮೇಲೆ, ಪೊಲೀಸ್ ಅಧಿಕಾರಿಗಳು ಸುದ್ದಿಗೋಷ್ಟಿ ನಡೆಸಿದಾಗ, ಪೂರೈಸಿದ ಸುದ್ದಿ ವರದಿಯನ್ನು ತಮ್ಮ ವರದಿಗೆ ಆಧಾರವನ್ನಾಗಿಸಬಹುದು. ಆದರೆ ಆ ವರದಿಯಲ್ಲಿ ಇಲ್ಲದ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿ, ಪೊಲೀಸ್ ಅಧಿಕಾರಿಗಳೇ ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ್ದಾರೆಂಬ ರಕ್ಷಣೆಯನ್ನು ಪಡೆಯಲು ಬರುವುದಿಲ್ಲ. ಆದ್ದರಿಂದ ವರದಿಗಾರರು ಈ ಕಾನೂನಿನ್ವಯ ತನಿಖಾಧಿಕಾರಿ/ಠಾಣಾಧಿಕಾರಿಯ ಲಿಖಿತವಾಗಿ ರುಜು ಮಾಡಿ ನೀಡಿದ ಮಾಹಿತಿಯನ್ನು ಪಡೆದು ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸುವುದು ಸೂಕ್ತ.
    ಈ ಕಾನೂನಿನ ಇನ್ನೊಂದು ಅವಕಾಶದಂತೆ, ವರದಿಗಾರರು ಒಂದು ವೇಳೆ ಠಾಣಾಧಿಕಾರಿ/ತನಿಖಾಧಿಕಾರಿಯ ಲಿಖಿತ ಅನುಮತಿ ಹಾಗೂ ಮಾಹಿತಿ ದೊರೆಯದೇ ಇದ್ದಾಗ ಅಥವಾ ಪಡೆಯುವ ಬದಲು, ಸ್ವತಃ ನೊಂದ ಮಹಿಳೆಯಿಂದಲೇ ರುಜು ಮಾಡಿದ ಲಿಖಿತ ಅನುಮತಿ ಮೇರೆಗೆ ಆ ನೊಂದ ಮಹಿಳೆ ನೀಡಿದ ಅವಳ ಗುರುತಿನ ಮಾಹಿತಿಗಳನ್ನು ಮಾತ್ರ ತಮ್ಮ ವರದಿಗಳಲ್ಲಿ ಬಹಿರಂಗ ಪಡಿಸಬಹುದು.
    ಒಂದು ವೇಳೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮರಣ ಹೊಂದಿದ್ದರೆ, ಅಪ್ರಾಪ್ತ ಬಾಲಕಿಯಾಗಿದ್ದರೆ ಅಥವಾ ಬುದ್ದಿ ಮಾಂದ್ಯಳಾಗಿದ್ದಲ್ಲಿ ಆಗ ಕಡ್ಡಾಯವಾಗಿ ಆ ಮಹಿಳೆಯ ಸಂಬಂಧಿಕರ ಅಥವಾ ಪೋಷಕರಿಂದ ಲಿಖಿತವಾಗಿ ಮಾಹಿತಿ ಪಡೆಯಬೇಕು. ಒಂದು ವೇಳೆ ಆ ನೊಂದ ಮಹಿಳೆ ಯಾವುದಾದರೂ ಅಧಿಕೃತ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದರೆ ಆಗ ಆ ಸಂಸ್ಥೆಯ ಕಾರ್ಯದರ್ಶಿ ಅಥವಾ ಅಧ್ಯಕ್ಷರ ಲಿಖಿತ ಅನುಮತಿ ಅತ್ಯಗತ್ಯ.
    ತನಿಖಾಧಿಕಾರಿಯು ಪ್ರಕರಣ ಪೂರ್ಣ ತನಿಖೆಯ ನಂತರ, ಆರೋಪಿಯ ವಿರುದ್ದ ಸಲ್ಲಿಸುವ ಅಂತಿಮ ವರದಿ ಅಥವಾ ದೋಷಾರೋಪಣ ವರದಿಗಳಲ್ಲಿಯೂ ಸಹ ನೊಂದ ಮಹಿಳೆಯ ಗುರುತುಗಳನ್ನು ಬಹಿರಂಗಪಡಿಸಬಾರದು. ತನಿಖಾಧಿಕಾರಿಯೂ ಸಹ ನೊಂದ ಮಹಿಳೆಯ ಗುರುತನ್ನು ಸೀಲು ಮಾಡಿದ ಲಕೋಟೆಯಲ್ಲಿರಿಸಿ ವರದಿಗಳಲ್ಲಿ ಮಾರ್ಪಡಿಸಿದ ಹೆಸರನ್ನು ಮಾತ್ರ ಉಲ್ಲೇಖಿಸಬೇಕು.
     ಒಂದು ಬಾರಿ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದ ನಂತರ ವರದಿಗಾರರು ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ನೊಂದ ಮಹಿಳೆಯ ಗುರುತನ್ನು ವರದಿ ಮಾಡತಕ್ಕುದಲ್ಲ. ಇನ್ನು ಇದೇ ವಿಷಯವನ್ನು ಪೋಕ್ಸೋ ಅಧಿನಿಯಮ(Pಡಿeಣeಛಿಣioಟಿ oಜಿ ಅhiಟಜಡಿeಟಿ ಜಿಡಿom Sexuಚಿಟ ಔಜಿಜಿeಟಿಛಿes ಂಛಿಣ, 2012(PಔಅSಔ)) ಕಲಂ 23 ಮಾಧ್ಯಮಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನ-(1) ಯಾರೇ ವ್ಯಕ್ತಿಯು, ಮಗುವಿನ ಗುಣ ಚಾರಿತ್ರ್ಯಕ್ಕೆ ಧಕ್ಕೆ ತರುವ ಅಥವಾ ಮಗುವಿನ ಏಕಾಂತತೆಗೆ ಭಂಗ ಉಂಟು ಮಾಡಬಹುದಾದಂತಹ ಪರಿಣಾಮವುಳ್ಳ ಯಾವುದೇ ವರದಿಯನ್ನು ಅಥವಾ ಅಭಿಪ್ರಾಯವನ್ನು ಅದರ ಬಗ್ಗೆ ಅಥವಾ ಅವುಗಳ ಬಗ್ಗೆ ಪರಿಪೂರ್ಣವಾದ ಹಾಗೂ ವಿಶ್ವಾಸಾರ್ಹವಾದ ಮಾಹಿತಿ ಇಲ್ಲದೆಯೇ ಯಾವುದೇ ಬಗೆಯ ಮಾಧ್ಯಮದಿಂದ ಅಥವಾ ಸ್ಟುಡಿಯೋದಿಂದ ಅಥವಾ ಛಾಯಾಚಿತ್ರ ಸೌಲಭ್ಯಗಳಿರುವ ಕಡೆಯಿಂದ ಮಗುವಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಅಂತಹ ಯಾವುದೇ ವರದಿಯನ್ನು ಮಾಡತಕ್ಕದ್ದಲ್ಲ ಅಥವಾ ಅಭಿಪ್ರಾಯಗಳನ್ನು ಪ್ರಸ್ತುತಪಡಿಸತಕ್ಕದ್ದಲ್ಲ. 
(2) ಯಾವುದೇ ಮಾಧ್ಯಮದಲ್ಲಿ ಮಗುವಿನ ಹೆಸರು, ವಿಳಾಸ, ಭಾವಚಿತ್ರ, ಕೌಟುಂಬಿಕ ವಿವರಗಳು, ಶಾಲೆ, ನೆರೆಹೊರೆ ಅಥವಾ ಮಗುವಿನ ಗುರುತನ್ನು ಬಹಿರಂಗಪಡಿಸಬಹುದಾದಂತಹ ಯಾವುದೇ ಇತರ ವಿವರಗಳನ್ನೊಳಗೊಂಡ ಯಾವ ವರದಿಗಳನ್ನು ಬಹಿರಂಗಪಡಿಸತಕ್ಕದ್ದಲ್ಲ:
     ಆದರೆ ಹಾಗೆ ಬಹಿರಂಪಡಿಸುವುದು ಮಗುವಿನ ಹಿತಾಸಕ್ತಿಗೆ ಅನುಗುಣವಾದುದಾಗಿದೆ ಎಂದು ಈ ಅಧಿನಿಯಮದ ಮೇರೆಗಿನ ಪ್ರಕರಣವನ್ನು ಅಧಿಚಾರಣೆ ಮಾಡಲು ಸಕ್ಷಮವಾದ ವಿಶೇಷ ನ್ಯಾಯಾಲಯವು ಅಭಿಪ್ರಾಯಪಟ್ಟರೆ, ಅದು ಲಿಖಿತದಲ್ಲಿ ಕಾರಣಗಳನ್ನು ದಾಖಲಿಸಿ ಹಾಗೆ ಬಹಿರಂಗಪಡಿಸುವುದಕ್ಕೆ ಆ ವಿಶೇಷ ನ್ಯಾಯಾಲಯವು ಅನುಮತಿ ನೀಡಬಹುದು.
(3) ಮಾಧ್ಯಮದ ಅಥವಾ ಸ್ಟುಡಿಯೋದ ಅಥವಾ ಛಾಯಾಗ್ರಹಣ ಸೌಲಭ್ಯಗಳನ್ನು ಹೊಂದಿರುವ ಪ್ರಕಾಶಕನು ಅಥವಾ ಮಾಲೀಕನು ಆತನ ನೌಕರನ ಕೃತ್ಯಗಳಿಗೆ ಮತ್ತು ಲೋಪದೋಷಗಳಿಗೆ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಹೊಣೆಗಾರನಾಗತಕ್ಕದ್ದು.
(4) ಉಪ ಪ್ರಕರಣ(1) ರ ಅಥವಾ ಉಪ-ಪ್ರಕರಣ (2) ರ ಉಪಬಂಧಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು ಆರು ತಿಂಗಳುಗಳಿಗಿಂತ ಕಡಿಮೆಯಿಲ್ಲದ ಆದರೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಅವಧಿಯ, ಎರಡರಲ್ಲೊಂದು ಬಗೆಯ ಕಾರಾವಾಸದ ಶಿಕ್ಷೆಯಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ಶಿಕ್ಷೆಗೆ ಒಳಗಾಗತಕ್ಕದ್ದು. 
    ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಅಧಿನಿಯಮದ ಕಲಂ 23 ಪರಿಶೀಲಿಸಿದಾಗ, ಮಾಧ್ಯಮದವರ ಮೇಲೆ ಹಾಗೂ ವರದಿಗಾರರ ಮೇಲೆ ನಿರ್ದಿಷ್ಟವಾದ ಹೊಣೆಗಾರಿಕೆಗಳನ್ನು ನಿಗದಿಪಡಿಸಿದ್ದು ಸ್ಪಷ್ಟವಾಗುತ್ತದೆ.
     ಇಲ್ಲಿ ‘ಗುರುತು’ ಎನ್ನುವ ಶಬ್ದಕ್ಕೆ ಈ ಅಧಿನಿಯಮದಡಿ ಖಚಿತಾದ ವ್ಯಾಖ್ಯಾನ ನೀಡಿದ್ದನ್ನು ಗಮನಿಸಬಹುದು. ಆ ನೊಂದ ಅಪ್ರಾಪ್ತರ ಹೆಸರು. ವಿಳಾಸ, ಭಾವಚಿತ್ರ, ಕುಟುಂಬದ ವಿವರ, ಶಾಲೆಯ ವಿವರ, ನೆರೆಹೊರೆಯವರ ವಿವರಗಳು ಅಥವಾ ಇನ್ನಿತರ ಯಾವುದೇ ವಿವರಗಳಿಂದ ನೊಂದ ಅಪ್ರಾಪ್ತರ ಗುರುತನ್ನು ಬಹಿರಂಗಪಡಿಸುವುದು ಈ ಅಧಿನಿಯಮದಡಿ ಶಿಕ್ಷಾರ್ಹ ಅಪರಾಧ.
     ಈ ವಿಶೇಷ ಅಧಿನಿಯಮಡಿ ಸಹ ಪ್ರಕರಣದ ಬಗ್ಗೆ ವರದಿ ಮಾಡುವ ಮಾಧ್ಯಮದವು, ವರದಿಗಾರರು ಪೂರ್ಣವಾದ ಅಧಿಕೃತ ಮಾಹಿತಿ ಇಲ್ಲದೆ, ಅಪ್ರಾಪ್ತರ ಖಾಸಗಿತನಕ್ಕೆ ಧಕ್ಕೆ ತರುವ, ಗೌರವಕ್ಕೆ ಕುಂದುಂಟು ಮಾಡುವ ಅಥವಾ ಗುರುತಿಸುವಿಕೆಯನ್ನು ಬಹಿರಂಗಗೊಳಿಸುವ ಕೃತ್ಯ ಎಸಗುವಂತಿಲ್ಲ. ಪರಕರಣದ ವಿಚಾರಣೆ ಕೈಗೊಳ್ಳುವ ವಿಶೇಷ ನ್ಯಾಯಾಲಯದ ಲಿಖಿತ ಅನುಮತಿಯನ್ನು ಪಡೆಯುವುದು ಅತ್ಯಗತ್ಯ.
    ಅಧಿಕೃತವಾದ ಮಾಹಿತಿ ಇಲ್ಲದೇ, ಅಥವಾ ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೇ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವರದಿಗಾರರು ಯಾವುದೇ ರೀತಿಯಿಂದ ನೊಂದ ಬಾಲಕ/ಬಾಲಕಿಯ ನೇರಾಗಿ ಅಥವಾ ಪರೋಕ್ಷವಾಗಿ ಗುರುತಿಸಲು ನೆರವಾಗುವ ವರದಿಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ.
    ಗಂಗಾಧರ್ ನಾರಾಯಣ್‍ನಾಯಕ್ @ ಗಂಗಾಧರ್ ಹಿರೆಗುತ್ತಿ ವಿರುದ್ದ ಸ್ಟೇಟ್ ಆಫ್ ಕರ್ನಾಟಕ & ಅದರ್ಸ್ ಪ್ರಕರಣ ಕರಾವಳಿ ಮುಂಜಾವು ದಿನಪತ್ರಿಕೆಯಲ್ಲಿ 17 ವರ್ಷದ ನೊಂದ ಅಪ್ರಾಪ್ತ ಬಾಲಕಿಯ ಹೆಸರು ವರದಿಯಾದ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆಪಾದನೆಯಿಂದ ಕೈಬಿಡುವಂತೆ ಕೋರಿದ ಅರ್ಜಿಗಳನ್ನು ಕೆಳ ನ್ಯಾಯಾಲಯ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ವಜಾ ಮಾಡಿದ ಮೇಲೆ, ಕೊನೆಗೆ ಆರೋಪಿತರು ಸರ್ವೋಚ್ಚ ನ್ಯಾಯಾಲಯದೆದುರು ಮೇಲ್ಮನವಿ ಸಲ್ಲಿಸಿದರು. 
    ಸರ್ವೋಚ್ಚ ನ್ಯಾಯಾಲಯವು ಈ ಅಪರಾಧದ ಸ್ವರೂಪ ಹಾಗೂ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿಸ್ತøತವಾದ ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಕೈಗೊಂಡು ದಿನಾಂಕ : 21-03-2022 ರಂದು ಭಿನ್ನಾಭಿಪ್ರಾಯದ ತೀರ್ಪು ಹೊರಬಂದು ಈಗ ಮುಖ್ಯ ನ್ಯಾಯಾಧೀಶರ ಪೀಠದ ಮುಂದೆ ಮುಂದುವರೆದ ವಿಚಾರಣೆಗೆ ಸಲ್ಲಿಕೆಯಾಗಿದೆ.
    ನೊಂದ ಅಪ್ರಾಪ್ತರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಕಲಂ 228ಎ ಹಾಗೂ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಅಧಿನಿಯಮದ ಕಲಂ 23 ಇವೆರಡನ್ನೂ ಸೇರಿಸಿಕೊಂಡು ಪ್ರಕರಣ ದಾಖಲಿಸುವ ಅಧಿಕಾರ ಪೊಲೀಸರಿಗಿದೆ. ಭಾರತೀಯ ದಂಡ ಸಂಹಿತೆಯ ಕಲಂ 228ಎ ಸಂಜ್ಞೆ ಅಪರಾಧವಾಗಿದ್ದು ನೇರವಾಗಿ ಪ್ರಕರಣ ದಾಖಲಿಸಿಕೊಂಡು ಕಾನೂನು ಉಲ್ಲಂಘಿಸಿದ ವರದಿ ಮಾಡದವರನ್ನು ವಿಚಾರಣೆಗೆ ಕರೆಯಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿರುವುದರ ಬಗ್ಗೆ ಮಾಧ್ಯಮದ ಮಿತ್ರರು ಗಂಭೀರವಾಗಿ ಪರಿಗಣಿಸಬೇಕು.
(ಸರಣಿ-2)

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.