ಭಜರಂಗದಳದ ಕಾರ್ಯಕರ್ತ ಸುನೀಲ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ: ಹಿಂದೂಪರ ಸಂಘಟನೆಗಳಿಂದ ಸಾಗರ ಬಂದ್- ಬಹುತೇಕ ಯಶಸ್ವಿ

ಸಾಗರ;ನಿನ್ನೆ ಸಾಗರದ ಬಿ.ಹೆಚ್ ರಸ್ತೆಯಲ್ಲಿ *ಭಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಸಮೀರ್ ಹಾಗೂ ಆತನ ಸಹಚರರು ತಲ್ವಾರ್ ದಾಳಿ ಯತ್ನ ನೆಡೆಸಿದ ಘಟನೆಗೆ ಸಂಬಂಧಿಸಿದಂತೆ ಇಂದು ಸಾಗರ ಬಂದ್ ಕರೆ ಕೊಡಲಾಯಿತು.ಬಿಜೆಪಿ, ಹಿಂದೂ ಪರ ಸಂಘಟನೆಗಳು, ಭಜರಂಗ ದಳದವರು ಕರೆದ ಬಂದ್ ಕರೆ ಹಾಗೂ ಗಣಪತಿ ದೇವಸ್ಥಾನದಿಂದ ಪ್ರಾರಂಭಿಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು, ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷರು, ಮಂಡಲಗಳ ಅಧ್ಯಕ್ಷರು, RSS, ಭಜರಂಗದಳ, ವಿಶ್ವ ಹಿಂದೂ ಪರಿಷತ್, ಸಂಘ ಪರಿವಾರದ ಪ್ರಮುಖರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಭಜರಂಗದಳದ ಕಾರ್ಯಕರ್ತ ಸುನೀಲ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ: ಹಿಂದೂಪರ ಸಂಘಟನೆಗಳಿಂದ ಸಾಗರ ಬಂದ್- ಬಹುತೇಕ ಯಶಸ್ವಿಸಾಗರ : ನಗರದ ಬಿ.ಎಚ್.ರಸ್ತೆಯ ಖಾಸಗಿ ಬಸ್ ನಿಲ್ದಾಣ ಸಮೀಪ ಭಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರ ಮೇಲೆ ಸಮೀರ್ ಎಂಬಾತ ತಲ್ವಾರ್‍ನಿಂದ ಹಲ್ಲೆಗೆ ವಿಫಲ ಯತ್ನ ನಡೆಸಿದ ಘಟನೆ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗ ದಳ ಮತ್ತು ಪರಿವಾರದ ಸಂಘಟನೆಗಳು ಮಂಗಳವಾರ ನೀಡಿದ್ದ ಸಾಗರ್ ಬಂದ್ ಬಹುತೇಕ ಯಶಸ್ವಿಗೊಂಡಿದೆ. 
ಸರ್ಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಹೊರತುಪಡಿಸಿ ಶಾಲಾಕಾಲೇಜುಗಳು ಬಹುತೇಕ ಬಂದ್ ಆಗಿದ್ದು ಕಂಡು ಬಂದಿತ್ತು. ನಗರ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳು, ಹೋಟೆಲ್‍ಗಳು ಬಂದ್ ಆಗಿದ್ದವು. ಖಾಸಗಿ ಬಸ್ ಸಂಚಾರ ಸಹ ಇಲ್ಲದೆ ಇರುವುದರಿಂದ ಬಸ್ ನಿಲ್ದಾಣ ಬಿಕೋ ಎನ್ನುತಿತ್ತು. ಒಟ್ಟಾರೆ ಪರಿವಾರದ ಸಂಘಟನೆಗಳು ಮಂಗಳವಾರ ಸುನೀಲ್ ಮೇಲಿನ ಹಲ್ಲೆಯತ್ನ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಸಾಗರ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. 
ಸುನೀಲ್ ಮೇಲಿನ ಹಲ್ಲೆ ಖಂಡಿಸಿ, ಆರೋಪಿ ಸಮೀರ್ ಮತ್ತಿತರರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್, ಭಜರಂಗ ದಳ ಮತ್ತು ಪರಿವಾರದ ಇತರೆ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಮಹಾಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸುನೀಲ್ ಮನೆ ಇರುವ ಹಾನಂಬಿ ರಸ್ತೆಯಲ್ಲಿ ಸಹ ಮೆರವಣಿಗೆ ನಡೆದದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. 
ಮಾರಿಕಾಂಬಾ ದೇವಸ್ಥಾನದ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪರಿವಾರದ ಹಿರಿಯರಾದ ಅ.ಪು.ನಾರಾಯಣಪ್ಪ, ಪ್ರಕರಣವನ್ನು ಪೊಲೀಸರು ಇದನ್ನು ವೈಯಕ್ತಿಕ ಪ್ರಕರಣ ಎಂದು ಬಣ್ಣ ಕಟ್ಟುವ ಪ್ರಯತ್ನ ನಡೆಸಿದರೆ ಇದನ್ನು ಪರಿವಾರ ಗಂಭೀರವಾಗಿ ಪರಿಗಣಿಸುತ್ತದೆ. ದೇಶದಲ್ಲಿ ಹಿಂದೂ ಸಮಾಜವನ್ನು ಹೆದರಿಸಿ ಅವರು ರಸ್ತೆಗೆ ಇಳಿಯದ ಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ಅದರ ಒಂದು ಭಾಗವೇ ಸುನೀಲ್ ಮೇಲೆ ಮಾರಣಾಂತಿಕ ಹಲ್ಲೆ ಯತ್ನ ನಡೆಸಿದ್ದಾಗಿದೆ. ಇದೇ ಮನಸ್ಥಿತಿಗಾಗಿ ನಾವು ಹಿಂದೂ ಕಾರ್ಯಕರ್ತರನ್ನು ಕಳೆದು ಕೊಂಡಿದ್ದೇವೆ. ಇನ್ನು ನಾವು ಕಾರ್ಯಕರ್ತರನ್ನು ಕಳೆದು ಕೊಳ್ಳುವುದಿಲ್ಲ. ಇದಕ್ಕೆ ಪ್ರತ್ಯುತ್ತರ ಹೇಗೆ ಕೊಡಬೇಕು ಎಂಬುದು ಗೊತ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ನಡೆಯುವ ಮಾರಿಕಾಂಬಾ ಜಾತ್ರೆಯನ್ನು ಭಂಗಗೊಳಿಸಲು ಇಂತಹ ಪ್ರಯತ್ನ ನಡೆಯುತ್ತಿದೆ ಎನ್ನುವ ಮಾಹಿತಿ ಇದ್ದು, ಪೊಲೀಸ್ ಇಲಾಖೆ ತಕ್ಷಣ ಇದರ ಬಗ್ಗೆ ಗಮನ ಹರಿಸಲಿ ಎಂದು ಒತ್ತಾಯಿಸಿದರು. 
ಭಜರಂಗ ದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಮಾತನಾಡಿ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಯುವಕರೇ ಮಚ್ಚು ಲಾಂಗ್ ಹಿಡಿಯುತ್ತಿರುವುದು. ಇದನ್ನು ತಡೆಯುವ ಕೆಲಸವನ್ನು ವಿಶ್ವಹಿಂದೂ ಪರಿಷತ್, ಭಜರಂಗ ದಳ ಮಾಡುತ್ತಿದೆ. ಸುನೀಲ್ ಓರ್ವ ಪ್ರಾಮಾಣಿಕ ಹಿಂದೂ ಹೋರಾಟಗಾರ. ಸಾಗರ ಪಟ್ಟಣದಲ್ಲಿ ಲವ್ ಜಿಹಾದ್, ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರು ಇದರ ಬಗ್ಗೆ ಯೋಚಿಸಬೇಕು. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ಕೆಲಸ ಮಾಡಬಾರದು. ಸುನೀಲ್‍ಗೆ ಇಡೀ ಹಿಂದೂ ಸಮಾಜ ಬೆಂಬಲವಾಗಿ ನಿಲ್ಲುತ್ತದೆ ಎಂದು ಹೇಳಿದರು. 
ಶಾಸಕ ಹಾಲಪ್ಪ ಹರತಾಳು ಮಾತನಾಡಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ತ್ವರಿತಕ್ರಮ ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿದ್ದಾರೆ. ಯಾರು ಧರ್ಮದ ಆಧಾರದ ಮೇಲೆ ಗಲಾಟೆ ಮಾಡಲು ಪ್ರಯತ್ನ ಮಾಡುತ್ತಿರೋ ಅವರಿಗೆ ಪೊಲೀಸರ ಲಾಠಿ ಉತ್ತರ ಕೊಡುತ್ತದೆ. ಹದ್ದುಮೀರಿದರೆ ಗುಂಡಿನ ರುಚಿಯೂ ತೋರಿಸುತ್ತಾರೆ. ಮಾರಿಜಾತ್ರೆ ಸಂದರ್ಭದಲ್ಲಿ ಯಾವುದೇ ಗಲಾಟೆಗೂ ಅವಕಾಶ ಕೊಡುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ತಾಲ್ಲೂಕು ಆಡಳಿತ ಬದ್ದವಾಗಿದೆ ಎಂದು ಹೇಳಿದರು. 
ಪ್ರತಿಭಟನೆಯನ್ನು ಉದ್ದೇಶಿಸಿ ಯು.ಎಚ್.ರಾಮಪ್ಪ, ಕೆ.ಎಸ್.ಪ್ರಶಾಂತ್, ಭಾರತಿ ಶೆಟ್ಟಿ, ರವೀಶ್, ರಾಘವೇಂದ್ರ ಭಟ್ ಮಾತನಾಡಿದರು. ಪ್ರತಿಭಟನೆಯಲ್ಲಿ ಐ.ವಿ.ಹೆಗಡೆ, ರಾಘವೇಂದ್ರ ಕಾಮತ್, ಸಂತೋಷ್ ಶಿವಾಜಿ, ಕೆ.ವಿ.ಪ್ರವೀಣ್, ವ.ಶಂ.ರಾಮಚಂದ್ರ ಭಟ್, ಪ್ರತಿಮಾ ಜೋಗಿ, ಮಧುರಾ ಶಿವಾನಂದ್, ಟಿ.ಡಿ.ಮೇಘರಾಜ್, ಗಣೇಶಪ್ರಸಾದ್, ಶ್ರೀನಿವಾಸ್ ಆರ್., ಪ್ರಕಾಶ್ ಕುಂಠೆ, ಸುಧೀಂದ್ರ, ಕೋಮಲ್ ರಾಘವೇಂದ್ರ ಇನ್ನಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.