ಶಿವಮೊಗ್ಗ ಸರ್ಜಿ ಆಸ್ಪತ್ರೆಯ ಮಕ್ಕಳ ತಜ್ಞ, ಡಾಕ್ಟರ್ ಎಚ್.ಎಸ್. ಸತೀಶ್ ಇನ್ನಿಲ್ಲ

ಶಿವಮೊಗ್ಗ:ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ಮಕ್ಕಳ ತಜ್ಞ, ಗೋಪಾಳ ನಿವಾಸಿ ಡಾಕ್ಟರ್ ಎಚ್.ಎಸ್. ಸತೀಶ್(47) ಬುಧವಾರ ನಸುಕಿನಲ್ಲಿ ನಿಧನರಾಗಿದ್ದಾರೆ. 
ಇವರಿಗೆ ಮಿದುಳಿನಲ್ಲಿ ರಕ್ತಸ್ರಾವ ಆಗಿತ್ತು. ಮೂರು ದಿನದ ಹಿಂದೆ ಕುಟುಂಬ ಸದಸ್ಯರ ಜೊತೆ ಉತ್ತರಕನ್ನಡ ಭಾಗಕ್ಕೆ ಪ್ರವಾಸಕ್ಕೆ ಹೋಗಿದ್ದ ಇವರು ದಿಢೀರ್ ಅಸ್ವಸ್ಥರಾಗಿದ್ದರು. ಅಲ್ಲಿಯೇ ಚಿಕಿತ್ಸೆ ಕೊಡಿಸಿ ಬಳಿಕ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಇವರಿಗೆ ಪತ್ನಿ ಡಾ. ಚೇತನಾ, ಮಕ್ಕಳಾದ  ಸಂಜನಾ, ಸಮರ್ಥ ಇದ್ದಾರೆ. 

ಕಳೆದ ಏಳೆಂಟು ವರ್ಷಗಳಿಂದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಮೂಲತಃ ದಾವಣಗೆರೆ ಜಿಲ್ಲೆಯ ತ್ಯಾವಣಗಿ ಗ್ರಾಮದವರು.

ಹಿತಮಿತ, ಮೃದು ಮಾತು, ಗಾಂಭೀರ್ಯ ಹಾಗೂ ಸರಳ, ಸಜ್ಜನಿಕೆಯೊಂದಿಗೆ ಅತ್ಯುತ್ತಮ ಚಿಕಿತ್ಸೆಯ ಮೂಲಕ ಮಲೆನಾಡಿನ ಮಾತಾಗಿದ್ದರು. ಸಹದ್ಯೋಗಿ ಮಿತ್ರರು, ಹಿರಿಯರು, ಕಿರಿಯರೊಂದಿಗೆ ಅತ್ಯಂತ ಆಪ್ತವಾಗಿದ್ದರು..

 ಸ್ವಗ್ರಾಮವಾದ ದಾವಣಗೆರೆ ಜಿಲ್ಲೆಯ ತ್ಯಾವಣಗಿಯಲ್ಲಿ ಅಂತ್ಯಕ್ರಿಯೆ...

ಗೋಪಾಳದ ರಂಗನಾಥ ಬಡಾವಣೆಯ ಮೊದಲ ತಿರುವಿನ ಶ್ರೀನಿಧಿ ಶಾಮಿಯಾನ ಪಕ್ಕದ ಸೌಪರ್ಣಿಕಾ ನಿಲಯದಲ್ಲಿ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಮೃತರ ಪಾರ್ಥೀವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ 9 ರಿಂದ 9.30 ರವರೆಗೆ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದರ್ಶನಕ್ಕೆ ಅವಕಾಶವಿದೆ. ಬಳಿಕ ಸ್ವಗ್ರಾಮವಾದ ದಾವಣಗೆರೆ ಜಿಲ್ಲೆಯ ತ್ಯಾವಣಗಿಗೆ ತೆರಳಿ, ಮಧ್ಯಾಹ್ನ 2 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

ತುಂಬಾ ದುಃಖಕರವಾದ ಸುದ್ದಿ, ಬಾಳಿ ಬದುಕಬೇಕಾಗಿದ್ದ ಒಬ್ಬ ಮಕ್ಕಳ ತಜ್ಞ ಕಡಿಮೆ ವಯಸ್ಸಿನಲ್ಲಿ ನಿಧನರಾಗಿರುವುದು ವಿಷಾದಕರವಾದ ಅತಿ ನೋವಿನ ಸಂಗತಿ...
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ...ಮೃತರ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಲೋ ಶಿವಮೊಗ್ಗ ಪತ್ರಿಕಾ ಬಳಗ  ಪ್ರಾರ್ಥಿಸಿದೆ...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.