*7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಲು ರಾಜ್ಯಾಧ್ಯಕ್ಷರ ಮನವಿ*

ಶಿವಮೊಗ್ಗ, ಜನವರಿ 21,:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಹಾಗೂ ಸಂಘದ ಪದಾಧಿಕಾರಿಗಳ ನಿಯೋಗವು 7ನೇ ವೇತನ ಆಯೋಗದ ಅಧ್ಯಕ್ಷರಾದ ಶ್ರೀ ಸುಧಾಕರ್ ರಾವ್ ರವರನ್ನು ಹಾಗೂ ಸದಸ್ಯರನ್ನು ಇಂದು ಭೇಟಿ ಮಾಡಿದ್ದು ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಿದರು.
 2023 ಜ.18 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಪಡಾಕ್ಷರಿ, ಸಂಘದ ಪದಾಧಿಕಾರಿಗಳು, ವೇತನ ಆಯೋಗದ ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳಾದ ಆರ್.ಶ್ರೀನಿವಾಸ್‌, ಮಲ್ಲಿಕಾರ್ಜುನ ಬಳ್ಳಾರಿ ಎಂ.ವಿ.ರುದ್ರಪ್ಪ, ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಸಿದ್ಧಬಸಪ್ಪ.ಬಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
     ಆಯೋಗದ ಅಧ್ಯಕ್ಷರು ಮಾತನಾಡಿ, ಆಯೋಗವು ಶೀಘ್ರವಾಗಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಈಗಾಗಲೇ ಪ್ರಶ್ನಾವಳಿ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅದರ ಪ್ರತಿಯನ್ನು ರಾಜ್ಯಾಧ್ಯಕ್ಷರಿಗೆ ನೀಡಿ ತಮ್ಮ ಸಂಘ ಹಾಗೂ ಸರ್ಕಾರಿ ನೌಕರರ ಸಹಕಾರ ನೀಡುವಂತೆ ತಿಳಿಸಿದರು.
     ಈ ಸಂದರ್ಭದಲ್ಲಿ ರಾಜ್ಯಾಧ್ಯಕರು ಮಾತನಾಡಿ, ಆಯೋಗದ ಎಲ್ಲಾ ಸದಸ್ಯರನ್ನು ಅಭಿನಂದಿಸಿ, 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ನಮ್ಮ ಸಂಘವು ರಾಜ್ಯದ ಏಕೈಕ ಬೃಹತ್ ಸಂಘಟನೆಯಾಗಿದ್ದು, ಮುಂದಿನ ದಿನಗಳಲ್ಲಿ ನೀತಿ ಸಂಹಿತೆ ಜಾರಿಗೊಳ್ಳುವುದರಿಂದ ಹಾಗೂ 2023 ಮಾರ್ಚ್ 31 ಕ್ಕೆ 5 ವರ್ಷ ಪೂರ್ಣಗೊಳ್ಳುವ ಮುಂಚಿತವಾಗಿ ಸರ್ಕಾರಕ್ಕೆ ವೇತನ ಆಯೋಗದ ವರದಿಯನ್ನು ಸಲ್ಲಿಸುವಂತೆ ಮನವಿ ಮಾಡಿದರು.
    ವೇತನ ಹಾಗೂ ಭತ್ಯೆಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ವೇತನ ಆಯೋಗಗಳು 2 ಹಂತಗಳಲ್ಲಿ ವರದಿಗಳನ್ನು ನೀಡುವ ಸಂಪ್ರದಾಯವಿದ್ದು, ಅದರಂತೆ ಫೆಬ್ರವರಿ-2023 ಅಂತ್ಯದೊಳಗೆ ಪ್ರಥಮ ಹಂತದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ರಾಜ್ಯ ಸರ್ಕಾರಿ ನೌಕರರು ಹಾಲಿ ಪಡೆಯುತ್ತಿರುವ ವೇತನ ಭತ್ಯೆಗಳಿಗೆ ಗರಿಷ್ಠ ಪ್ರಮಾಣದ ಫಿಟ್‌ ಮೆಂಟ್ ಸೌಲಭ್ಯವನ್ನು ಕಲ್ಪಿಸಲು ಶಿಫಾರಸ್ಸು ಮಾಡುವಂತೆ ಮನವಿ ಮಾಡಲಾಯಿತು.
       ರಾಜ್ಯ ಸಂಘ ಈಗಾಗಲೇ ವೃಂದ ಸಂಘಗಳ ಸಭೆಯನ್ನು ಕರೆದು ವೇತನ ಭತ್ಯೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಕ್ರೂಢೀಕೃತ ವಿವಿಧ ಇಲಾಖೆಗಳ ಸಮಗ್ರ ಮಾಹಿತಿಯ ವರದಿಯನ್ನು ಆಯೋಗದ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದೆಂದು ತಿಳಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.