ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಂಶಯಾಸ್ಪದ ಸಾವಿನ ಬಗ್ಗೆ ಎಲ್ಲ ಕೋನಗಳಿಂದ ತನಿಖೆ: ಎಡಿಜಿಪಿ ಅಲೋಕ್ ಕುಮಾರ್
ಶಿವಮೊಗ್ಗ: ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಂಶಯಾಸ್ಪದ ಸಾವಿನ ಬಗ್ಗೆ ಎಲ್ಲ ಕೋನಗಳಿಂದ ತನಿಖೆ ಮುಂದುವರಿದಿದೆ. ತನಿಖೆ ಸಂದರ್ಭದಲ್ಲಿ ಬಹಿರಂಗ ಪಡಿಸುವುದು ಸೂಕ್ತವಲ್ಲ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಪತ್ರರ್ತರಿಗೆ ಹೇಳಿದರು.
ಅವರು ಇಂದು ನಗರ ಡಿಎಆರ್ ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬ ವರ್ಗದವರ ಜೊತೆ ಸಭೆ ನಡೆಸಿ ಅವರ ಬೇಡಿಕೆ ಮತ್ತು ದೂರನ್ನು ಆಲಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಚಂದ್ರಶೇಖರ್ ಆಕಸ್ಮಿಕ ಸಾವಿನ ಬಗ್ಗೆ ಹುಬ್ಬಳ್ಳಿ ದಾವಣಗೆರೆಯ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಮರಣೋತ್ತ ಪರೀಕ್ಷಾ ವರದಿ ಬಂದಮೇಲೆ ಎಲ್ಲಾ ಮಾಹಿತಿ ಸಿಗುತ್ತದೆ. ಸಿಸಿ ಟಿವಿಯ ಫೂಟೇಜ್ ಸಿಕ್ಕಿದೆ. ದ್ರೋಣ್ ಮೂಲಕ ಕಾಲುವೆ ಬಳಿ ಪರಿಶೀಲನೆ ನಡೆಸಿದಾಗ ಕಾರಿನ ಮುಂಭಾಗ ನೀರಿನಲ್ಲಿ ಕಂಡುಬಂದಿದ್ದರಿಂದ ಕಾರನ್ನ ಮೇಲಕ್ಕೆತ್ತಿದಾಗ ಅದರಲ್ಲಿ ಚಂದ್ರಶೇಖರ್ ಶವ ಸಿಕ್ಕಿದೆ. ಕುಟುಂಬದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ.ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತಿದೆ. ಎಪ್ಎಸ್ಐಎಲ್ ಲ್ಯಾಬ್ ವರದಿಗೆ ಕಾಯುತ್ತಿದ್ದೇವೆ. ಎಲ್ಲಾ ಮಾಹಿತಿಯನ್ನೂ ಹಂಚಿಕೊಳ್ಳಲಾಗುವುದಿಲ್ಲ ಎಂದರು.
ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಆರೋಗ್ಯವಾಗಿದ್ದರೆ ಮತ್ತು ಮನೆಯಲ್ಲಿ ನೆಮ್ಮದಿ ಇದ್ದರೆ ಇಲಾಖೆ ಆರೋಗ್ಯವಾಗಿರುತ್ತದೆ. ಇಲಾಖೆಗೆ ಒಳ್ಳೆಯದಾದರೆ ಸಾರ್ವಜನಿಕರಿಗೂ ಒಳ್ಳೆಯ ಸೇವೆ ಸಿಗುತ್ತದೆ ಈ ದೃಷ್ಟಿಯಿಂದ ಸಿಬ್ಬಂದಿಗಳ ಅನುಕೂಲಕ್ಕಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪೊಲೀಸರು ಕರ್ತವ್ಯದ ಮೇಲೆ ಹಲವು ದಿನಗಳ ಕಾಲ ಬೇರೆ ಊರಿಗೆ ಹೋಗಿ ಬಂದಾಗ ಮನೆಯಲ್ಲಿ ಅವರ ಕುಟುಂಬದವರು ವಿನಾಕಾರಣ ಕ್ಷುಲ್ಲಕ ವಿಷಯಗಳಿಗೆ ನೆಮ್ಮದಿ ಕೆಡಿಸಬಾರದು. ಸಿಬ್ಬಂದಿಗಳ ಕುಟುಂಬದವರು ಮತ್ತು ಸಿಬ್ಬಂದಿಗಳ ಆರೋಗ್ಯ ನಮಗೆ ಅತಿಮುಖ್ಯ. ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ಉನ್ನತ ಶಿಕ್ಷಣಕ್ಕೆ ತರಬೇತಿ ನೀಡಲು ಡಿಎಸ್ಪಿ ಡಿಎಆರ್ ಅವರಿಗೆ ಸೂಚಿಸಿದ್ದೇನೆ. ಉನ್ನತ ಶಿಕ್ಷಣಕ್ಕೆ ಕೂಡ ಹೆಚ್ಚಿನ ತರಬೇತಿ ಆಯೋಜಿಸುವಂತೆ ಸೂಚಿಸಿದ್ದೇನೆ ಎಂದರು.
ಮಹಿಳಾ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ ದೇಹಾರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ವ್ಯಾಯಾಮ ಶಾಲೆ ಪ್ರಾಂಭಿಸುವಂತೆ ಕೂಡ ಸೂಚಿಸಲಾಗಿದೆ. ಪೊಲೀಸರು ಯಾವಾಗಲೂ ಸದೃಢರಾಗಿ ಚುರುಕಾಗಿ ಇರಬೇಕು. ಆಗ ಸಾರ್ವಜನಿಕರಿಗೆ ಪೊಲೀಸರ ಮೇಲೆ ನಂಬಿಕೆ ಬರುತ್ತಿದೆ ತಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಬ್ಲಿಕ್ ಸೇಫ್ಟಿ ಆಕ್ಟ್ ಪ್ರಕಾರ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು24/7 ಮಾನಿಟರಿಂಗ್ ಸಿಸ್ಟಂ ಅಳವಡಿಸಲಾಗಿದೆ. ಸಿಬ್ಬಂದಿಗಳಿಗೆ ವಾರದ ರಜೆ ನೀಡುತ್ತಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಬ್ಬಂದಿಗಳಿಗೆ ರಜೆ ನೀಡಬೇಕಾದರೆ ಮಾಧ್ಯಮಗಳ ಸಹಕಾತ ಅತಿ ಮುಖ್ಯ. ಸಣ್ಣಪುಟ್ಟ ಘಟನೆಗಳನ್ನು ಶಿವಮೊಗ್ಗ ಧಗಧಗ ಎಂದು ವೈಭವೀಕರಿಸಿದರೆ ಅದರ ಪರಿಣಾಮ ಸಾರ್ವಜನಿಕರಲ್ಲಿ ಆತಂಕ ಉಂಟಾಗುತ್ತದೆ. ಪ್ರವಾಸಿಗರು ಮತ್ತು ಉದ್ಯಮಿಗಳು ಶಿವಮೊಗ್ಗಕ್ಕೆ ಬರಲು ಹಿಂದೇಟು ಹಾಕುತ್ತಾರೆ.ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗುತ್ತದೆ. ಪೊಲೀಸ್ ಸಿಬ್ಬಂದಿಗಳಿಗೂ ಹೆಚ್ಚುವರಿ ಬಂದೊಬಸ್ತ್ ಕರ್ತವ್ಯ ಬೀಳುವುದರಿಂದ ರಜೆ ನೀಡಲು ಕಷ್ಟವಾಗುತ್ತದೆ ಎಂದರು.
ಸುದ್ದಿ ಬಿತ್ತರಿಸುವಾಗ ಸಂಯಮ ಕಾಪಾಡಿಕೊಳ್ಳಿ ಎಂದರು. ಸಿಬ್ಬಂದಿಗಳಲ್ಲಿ ಆಲ್ಕೊಹಾಲಿಕ್ ಚಟವಿದ್ದರೆ ಮತ್ತು ಕೌಟುಂಬಿಕ ಸಮಸ್ಯೆಯಿದ್ದರೆ ಕೆಲಸದ ಒತ್ತಡದಿಂದ ಅನಾರೋಗ್ಯವಿದ್ದರೆ ಕೌನ್ಸಿಲಿಂಗ್ ಮಾಡಿ ಸರಿಪಡಿಸಲು ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗಳ ಆರೋಗ್ಯ ಅತಿಮುಖ್ಯ ಎಂದರು.
ರೋಲ್ಕಾಲ್ ಬೆದರಿಕೆ ಹಾಕಿ, ಧಮ್ಕಿ ಹಾಕಿ ಹಣ ವಸೂಲಿ, ಗಾಂಜಾ, ಮಟ್ಕಾ ಮುಂತಾದ ಕಾನೂನುಬಾಹಿರ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ, ಜೊತೆಗೆ ಅವರ ಜಾಮೀನು ಕ್ಯಾನ್ಸಲ್ ಮಾಡಲು ಶಿಫಾರಸು ಮಾಡಲಾಗುವುದು. ಅಕ್ರಮ ಮರಳು ಮತ್ತು ಗಣಿಗಾರಿಕೆ ಬಗ್ಗೆ ಮಾಹಿತಿಗಳೂ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮಾಂತರದಲ್ಲಿ ಮತ್ತು ನಗರದ ಹೊರಭಾಗದಲ್ಲಿ ಕೆಲವು ಮನೆಯೊಳಗೆ ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಮತ್ತು ಇದರ ನಿಯಂತ್ರಣ ಅಬಕಾರಿ ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಅಕ್ರಮ ಮದ್ಯ ಹೇಗೆ ಎಲ್ಲಿಂದ ಬಂತು ಎಂದು ಕಂಡುಹಿಡಿದು ಶಿಕ್ಷೆ ವಿಧಿಸುವ ಜವಾಬ್ದಾರಿ ಅಬಕಾರಿ ಇಲಾಖೆಯದ್ದಾಗಿದ್ದು, ಎಲ್ಲವನ್ನೂ ಪೊಲೀಸರು ಮಾಡಲಾಗುವುದಿಲ್ಲ ಎಂದರು.
ಬ್ಯಾಕೋಡು ಡಬಲ್ ಮರ್ಡರ್ ಗೆ ಸಂಬಂಧಿಸಿದಂತೆ ಮೂರು ವರ್ಷಗಳಾದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂಬ ಪ್ರಶ್ನೆಗೆ ಈ ಪ್ರಕರಣ ಕೈಬಿಟ್ಟಿಲ್ಲ ಇದುವರೆಗೆ 150 ಜನರನ್ನು ವಿಚಾರಣೆಗೆ ಒಳಗಪಡಿಸಲಾಗಿದೆ. ಮತ್ತೆ ಹೊಸ ಎಸ್ಪಿ ಯವರ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಲಾಗುವುದು ಎಂದರು.
ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ ಪೊಲಿಸ್ ಸ್ಮಾರ್ಟ್ ಅಂಡ್ ಫಿಟ್ ಆಗಿದೆ ಸಾರ್ವನಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಪೂರ್ವವಲಯ ಐಜಿಪಿ ತ್ಯಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮ್ಟೆ, ಡಿವೈಎಸ್ಪಿ ಬಾಲರಾಜ್, ಡಿಎಆರ್ ಡಿವೈಎಸ್ಪಿ ಕೃಷ್ಣಮೂರ್ತಿ ಅಧಿಕಾರಿಗಳಾದ ಸಾಗರ ಎಎಸ್ಪಿ ರೋಷನ್, ಜಿತೇಂದ್ರ ಮೊದಲಾದವರಿದ್ದರು.

Leave a Comment