ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘಕ್ಕೆ ಶೀಘ್ರವೇ ಆಡಳಿತಾಧಿಕಾರಿ ನೇಮಕ: ಉಪ್ಪಾರ ಸಮಾಜದ ಮುಖಂಡ ಎನ್.ಮಂಜುನಾಥ್

ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಶಿಫಾರಸ್ಸು
ಶಿವಮೊಗ್ಗ: ಜಿಲ್ಲಾ ಉಪ್ಪಾರ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕು ಎಂದು ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಅವರು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ. ಶೀಘ್ರವೇ ಆಡಳಿತಾಧಿಕಾರಿ ನೇಮಕವಾಗಲಿದೆ ಎಂದು ಉಪ್ಪಾರ ಸಮಾಜದ ಮುಖಂಡ ಎನ್.ಮಂಜುನಾಥ್ ಹೇಳಿದರು.

ಅವರು ಇಂದು ಪ್ರೆಸ್ ಟ್ರಸ್ಟ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಪ್ಪಾರ ಸಂಘವು 2014ರಿಂದ 17ರ ವರೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. 2016 ಮತ್ತು 17ರವರೆಗಿನ ಕಾರ್ಯಕಾರಿ ಮಂಡಳಿಯ ಅವಧಿ ಪೂರ್ಣಗೊಂಡಿದೆ. ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಬೈಲಾದ ಪ್ರಕಾರ ಕಾರ್ಯಕಾರಿ ಮಂಡಳಿಗೆ ಚುನಾವಣೆ ನಡೆಸದೆ ಇರುವುದರಿಂದ ಹಾಲಿ ಇರುವ ಕಾರ್ಯಕಾರಿ ಮಂಡಳಿ ನೈಜ ಕಾರ್ಯಕಾರಿ ಮಂಡಳಿ ಅಲ್ಲ. ಇದನ್ನು ಕೂಡಲೇ ರದ್ದುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ನಾವು ಒತ್ತಾಯಿಸಿದ್ದೆವು ಎಂದರು.

 ಇದನ್ನು ಗಮನದಲ್ಲಿಟ್ಟುಕೊಂಡು ಅಧಿನಿಯಮ 1960ರ ಕಲಂ 27(ಎ) ಅಡಿಯಲ್ಲಿ ಸಂಘಕ್ಕೆ ಅಡಳಿತಾಧಿಕಾರಿಯನ್ನು ನೇಮಿಸಬಹುದಾಗಿದೆ. ಆಡಳಿತಾಧಿಕಾರಿಯನ್ನು ನೇಮಿಸುವ ಅಧಿಕಾರ ಸರ್ಕಾರಕ್ಕೆ ದತ್ತವಾಗುರುವುದರಿಂದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲು ಕೋರಿ ಪ್ರಸ್ತಾವ ಸಲ್ಲಿಸಿದೆ ಎಂದು ರಾಜ್ಯ ಸಹಕಾರ ಸಂಘಗಳ ನಿಬಂಧಕರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದರು. 

ಸಹಕಾರ ಸಂಘಗಳ ಕಾಯಿದೆಯಂತೆ ಸಂಘದ ಪದಾಧಿಕಾರಿಗಳು ಎಂದು ಹೇಳಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ವಾಮ ಮಾರ್ಗದ ಮೂಲಕ ಜಿಲ್ಲಾ ಉಪ್ಪಾರ ಸಂಘವನ್ನು ಕೆಲವರು ವಶಪಡಿಸಿಕೊಂಡಿದ್ದಾರೆ. ಎಸ್.ಟಿ. ಹಾಲಪ್ಪ, ಕೆ. ದೇವೇಂದ್ರಪ್ಪ, ನಾಗರಾಜ ಕಂಕಾರಿ ಹಿತಾಸಕ್ತಿಗೆ ಒಳಗಾಗಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣಪ್ಪ, ನಾಗಣ್ಣ, ಹನುಮಂತಪ್ಪ,ಓಂಕಾರ್ ಮೂರ್ತಿ, ವೆಂಕಟೇಶ್,ಗಣೇಶ್,ಪವನ್,ಕಿರಣ್,ಅಭಿ, ಸುಧಾಕರ್, ರಮೇಶ್, ಈಶ್ವರ್, ಲೋಕೇಶ್, ಬಸವರಾಜ್, ಮತ್ತಿತರರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.