ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ನಡೆದ ಕೋಮು ಗಲಭೆಗಳಿಗೆ ಕಾಂಗ್ರೆಸ್ ನ ಮುಸ್ಲಿಂ ತುಷ್ಠೀಕರಣ ನೀತಿಯೇ ಕಾರಣ: ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ನಡೆದ ಕೋಮು ಗಲಭೆಗಳಿಗೆ ಕಾಂಗ್ರೆಸ್ ನ ಮುಸ್ಲಿಂ ತುಷ್ಠೀಕರಣ ನೀತಿಯೇ ಕಾರಣವೇ ಹೊರತೂ ಬಿಜೆಪಿ ಅಲ್ಲ ಎಂದು ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶಿವಮೊಗ್ಗದಲ್ಲಿ ನಡೆದ ಕೋಮು ಗಲಭೆಗೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. ಇದು ಸುಳ್ಳನ್ನು ಪ್ರತಿಪಾದನೆ ಮಾಡುವ ಹೇಳಿಕೆಯಾಗಿದ್ದು, ಕಾಂಗ್ರೆಸ್ ನವರಿಗೆ ಸತ್ಯ ಹೇಳಿ ಗೊತ್ತಿಲ್ಲ. ಮತ್ತು ಸತ್ಯ ಅರಗಿಸಿಕೊಳ್ಳುವ ಶಕ್ತಿಯೂ ಇಲ್ಲ ಎಂದರು. 
1933 ಮತ್ತು 1947 ರಲ್ಲಿಯೇ ಶಿವಮೊಗ್ಗದಲ್ಲಿ ಗಲಾಟೆಗಳಾಗಿದ್ದವು. ಶಿವಮೂರ್ತಿ ಸೇರಿದಂತೆ ಹಿಂದೂಗಳ ಹತ್ಯೆಯಾಗಿತ್ತು. ಆಗ ಇವರು ಆರೋಪಿಸಿದಂತೆ ಕೆ.ಎಸ್. ಈಶ್ವರಪ್ಪ ಶಾಸಕರೂ ಆಗಿರಲಿಲ್ಲ. ಬಿಜೆಪಿಯೂ ಇರಲಿಲ್ಲ. ಹೇಗೆ ಬಿಜೆಪಿ ಕೋಮು ಗಲಭೆಗೆ ಕಾರಣವಾಗುತ್ತದೆ ಎಂದು ಪ್ರಶ್ನೆ ಮಾಡಿದರು.
ಇತಿಹಾಸ ಜ್ಞಾನವಿಲ್ಲದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅರ್ಥವಿಲ್ಲದ ಮಾತನಾಡಿದ್ದಾರೆ. ಮುಸ್ಲಿಮರನ್ನು ಓಲೈಸುವ ಈ ಕಾಂಗ್ರೆಸಿಗರ ಗುಣ ಹೋಗುವುದಿಲ್ಲ. ಹಿಂದೂಗಳು ಎಂದೂ ಮುಸ್ಲಿಮರನ್ನು ಹತ್ಯೆ ಮಾಡಿಲ್ಲ. ಹತ್ಯೆ ಮಾಡಿರುವುದು ಮುಸ್ಲಿಮರು ಹಿಂದೂಗಳನ್ನು. ಹಾಗಾದರೆ ಅವರನ್ನು ಗೂಂಡಾ ಎಂದು ಕರೆಯದೇ ಏನೆನ್ನಬೇಕು? ಹಿಂದೂಗಳು ಹತ್ಯೆಯಾದರೆ ಬಾಯಿಬಿಡದ ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಒಂದು ಸಣ್ಣ ಗಾಯವಾದರೂ ಬೊಬ್ಬೆ ಹೊಡೆಯುತ್ತಾರೆ ಎಂದರು.
ಮುಸ್ಲಿಮರನ್ನು ಓಲೈಸುವುದರಿಂದಲೇ ನಮಗೆ ಮತ ಸಿಗುತ್ತದೆ ಎಂಬುದನ್ನು ಈ ಕಾಂಗ್ರೆಸ್ ನವರು ಮರೆತುಬಿಡಬೇಕು. ಜನ ಈಗಾಗಲೇ ಕಾಂಗ್ರೆಸ್ ಅನ್ನು ಮರೆತು ಬಿಟ್ಟಿದ್ದಾರೆ. ಭಯೋತ್ಪಾದಕತೆಯನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಜಾತ್ಯತೀತ ಎಂದರೆ ಅವರಿಗೆ ಅರ್ಥವೇ ಗೊತ್ತಿಲ್ಲ. ಬಿಜೆಪಿ ನಿಜವಾಗಿಯೂ ಏಕತಾ ಮಾನವೀಯತೆಯನ್ನು ಮೂಡಿಸುತ್ತಾ ಬಂದಿದೆ. ಇನ್ನಾದರೂ ಅರ್ಥವಿಲ್ಲದ ಆರೋಪಗಳನ್ನು ಕಾಂಗ್ರೆಸ್ ಬಿಡಬೇಕು ಎಂದರು.
ಶಿವಮೊಗ್ಗದಲ್ಲಿ ಗೋವಿಂದರಾಜ್ ಕೊಲೆಯಿಂದ ಹಿಡಿದು ಹರ್ಷನ ಕೊಲೆಯತನಕ ಹಿಂದೂಗಳ ಮಾರಣಹೋಮ ನಡೆದಿದೆ. ಹಿಂದೂಗಳ ಜೀವಗಳಿಗೆ ಬೆಲೆಯೇ ಇಲ್ಲ. ಗಲಭೆಗಳನ್ನು ಸೃಷ್ಠಿಸಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಆಸೆಯೂ ಬಿಜೆಪಿಗೆ ಇಲ್ಲ. ವೈಚಾರಿಕತೆಯನ್ನು ಗಟ್ಟಿ ಮಾಡುವುದೇ ರಾಷ್ಟ್ರದ ಐಕ್ಯತೆಗೆ ಶ್ರಮಿಸುವುದೇ ಬಿಜೆಪಿಯ ಗುರಿ. ಗೋಹತ್ಯೆ ವಿರೋಧಿಸುವುದು, ಶ್ರೀರಾಮ ಮಂದಿರ ಕಟ್ಟುವುದು ಹೇಗೆ ಕೋಮುವಾದವಾಗುತ್ತದೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಶಿವಮೊಗ್ಗ ಅಭಿವೃದ್ಧಿಯಾಗಿಲ್ಲ ಎಂದು ಹೇಳುತ್ತಾರೆ. ಆದರೆ, ಶಿವಮೊಗ್ಗದಲ್ಲಿ ಕಳೆದ 75 ವರ್ಷಗಳಲ್ಲಿ ಆಗದ ಅಭಿವೃದ್ಧಿ ಆಗಿದೆ. ಅಭಿವೃದ್ಧಿಗೆ ಮತ್ತೊಂದು ಹೆಸರೇ ಬಿಜೆಪಿ. ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಬಿ.ವೈ. ರಾಘವೇಂದ್ರ ಮುಂತಾದ ಬಿಜೆಪಿ ನಾಯಕರು ಶಿವಮೊಗ್ಗವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜ್ಞಾನೇಶ್ವರ್, ಜಗದೀಶ್, ನಾಗರಾಜ್, ಬಳ್ಳೆಕೆರೆ ಸಂತೋಷ್, ಎಂ.ಜಿ. ಬಾಲು ಇದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.