ಒಕ್ಕಲಿಗರ ಸಂಘದ ಆವರಣದಲ್ಲಿ ಸಾರ್ವಜನಿಕ ಸಮುದಾಯ ಭವನದ ಭೂಮಿ ಪೂಜೆ ನೇರವೇರಿಸಿದ ಯಡಿಯೂರಪ್ಪ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿವಶರಣರ ನಾಡು. ನಾವೆಲ್ಲರೂ ಅವರ ಆಚಾರ ವಿಚಾರಗಳನ್ನು ಮತ್ತು ಸಂಸ್ಕೃತಿಯನ್ನು ಅನುಸರಿಸುತ್ತಾ ಬಂದಿದ್ದೇವೆ. ಒಕ್ಕಲಿಗ ಸಮಾಜವನ್ನು ಒಬಿಸಿಯಲ್ಲಿ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಇಂದಿನ ಸಭೆಯಲ್ಲಿ ಕೂಡ ಹಲವರು ಪ್ರಸ್ತಾಪ ಮಾಡಿದ್ದಾರೆ. ನಾನು ಕೇಂದ್ರದ ನಾಯಕರ ಜೊತೆ ನನ್ನ ಶಕ್ತಿ ಮೀರಿ ಈ ಬಗ್ಗೆ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅವರು ಇಂದು ಬಾಲರಾಜ್ ಅರಸ್ ರಸ್ತೆಯ ಜಿಲ್ಲಾ ಒಕ್ಕಲಿಗರ ಸಂಘದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಸಮುದಾಯ ಭವನದ ಭೂಮಿ ಪೂಜೆ ಬಳಿಕ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ರೈತ ನಾಯಕ ಸುಂದರೇಶ್ ಅವರಂತಹ ಗಣ್ಯರು ಹಾಸ್ಟೆಲ್ ನಲ್ಲಿ ಇದ್ದು ಓದಿದ್ದಾರೆ. ಹಲವಾರು ವರ್ಷಗಳಿಂದ ಒಕ್ಕಲಿಗರ ಹಾಸ್ಟೆಲ್ ಯಶಸ್ವಿಯಾಗಿ ಮುಂದುವರೆಯುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಜಾತಿ ಕುಲ ನೋಡದೇ ನನ್ನ ಕರ್ತವ್ಯ ಎಂದು ಭಾವಿಸಿ ಸರ್ಕಾರದ ಅನುದಾನ ನೀಡಿದ್ದೆ. ಕಾಗಿನೆಲೆ ಪೀಠಕ್ಕೂ ಕೂಡ ಅನುದಾನ ನೀಡಿದ್ದೆ. ಅದೇ ಸಮುದಾಯದ ಮುಖ್ಯಮಂತ್ರಿಗಳಿದ್ದಾಗ ಆ ಕೆಲಸ ಮಾಡಿರಲಿಲ್ಲ ಎಂದರು.
2023 ರ ಜನವರಿಯೊಳಗೆ ಪ್ರಧಾನಿ ಮೋದಿ ಅವರಿಂದ ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಲಿದೆ. ನ. 11 ರಂದು ಕೆಂಪೇಗೌಡರ ಪುತ್ಥಳಿಯೂ ಉದ್ಘಾಟನೆಗೊಳ್ಳಲಿದೆ. ಸಾಧನೆ ಮಾಡಬೇಕು. ಮಾತು ಸಾಧನೆಯಾಗಬಾರದು. ನನ್ನಿಂದಾದಷ್ಟು ಕಳಕಳಿಯಿಂದ ನಿಮ್ಮ ಸಮುದಾಯದ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದರು.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮುದಾಯಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಎಲ್ಲಾ ಸಮುದಾಯಕ್ಕೆ, ಎಲ್ಲಾ ಮಠಗಳಿಗೆ ಅನುದಾನ ನೀಡಿದ್ದಾರೆ. ಕಾರಣ ಮಠದ ಸ್ವಾಮೀಜಿಗಳು ಸೋಮಾರಿಗಳಾದರೆ ಅವರ ಸಮುದಾಯವೇ ಸೋಮಾರಿಯಾಗುತ್ತದೆ. ಮಠಗಳಿಗೆ ಅನುದಾನ ನೀಡಿ ಪ್ರೋತ್ಸಾಹಿಸಿದರೆ ಸ್ವಾಮೀಜಿಗಳು ತಮ್ಮ ಸಮುದಾಯವನ್ನು ಚೈತನ್ಯಭರಿತರಾಗಿ ಓಡಾಡುವಂತೆ ಮಾಡುತ್ತಾರೆ ಎಂಬುದನ್ನು ಮನಗಂಡು ಎಲ್ಲಾ ಸಮುದಾಯಗಳನ್ನು ಕ್ರಿಯಾಶೀಲರಾಗುವಂತೆ ಅನುದಾನ ಬಿಡುಗಡೆ ಮಾಡಿದರು ಎಂದರು.
ಸ್ವಾಮಿ ವಿವೇಕಾನಂದರು ದೇಶ ಕಟ್ಟುವ ಕಾಯಕದಲ್ಲಿ ತೊಡಗಿದ್ದಾಗ ಒಕ್ಕಲಿಗ ಸಮಾಜದ ಅಂದಿನ ಯುವಕರಾದ ಕೆ.ಹೆಚ್. ರಾಮಯ್ಯನಂತಹವರು ಅವರ ಜೊತೆಗೆ ಶ್ರಮಿಸುತ್ತಿದ್ದರು. ವಿವೇಕಾನಂದರಿಂದ ಸ್ಪೂರ್ತಿಗೊಂಡು ಅವರ ಸಲಹೆ ಮೇರೆಗೆ ಸಮುದಾಯದ ಅಭಿವೃದ್ಧಿಗೆ ಒಕ್ಕಲಿಗರ ಸಂಘಕ್ಕೆ ಅವರು ಹಾಕಿದ ಅಡಿಗಲ್ಲು ಇವತ್ತು ಬೆಳೆದು ಹೆಮ್ಮರವಾಗಿದೆ. ಸಮಾಜವನ್ನು ಚಲನಶೀಲರಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇವತ್ತು ಭೂಮಿ ಪೂಜೆ ನಡೆಸಿದ ಸಮುದಾಯ ಭವನ ಒಂದು ವರ್ಷದೊಳಗೆ ಪೂರ್ಣಗೊಂಡು ಸಮಾಜದ ಅನುಕೂಲಕ್ಕೆ ಸಿಗಲಿ. ವಿದ್ಯಾರ್ಥಿ ನಿಲಯ ಕೂಡ ಆಗಬೇಕೆಂಬ ಸಲಹೆ ಕೂಡ ಗಮನದಲ್ಲಿದ್ದು, ಅದಕ್ಕೂ 25 ಎಕರೆ ಜಾಗದಲ್ಲಿ ಸುಸಜ್ಜಿತ ಬಿಎಡ್ ಕಾಲೇಜ್ ಮತ್ತು ವಿದ್ಯಾರ್ಥಿ ನಿಲಯ ಆಗುವುದಿದೆ ಎಂದರು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂದು ಯಡಿಯೂರಪ್ಪನವರ ಪ್ರಯತ್ನದಿಂದ ಕೆಂಪೇಗೌಡ ವಿಮಾನ ನಿಲ್ದಾಣ ಎಂದು ಹೆಸರಾಯಿತು. ಈಗ ಅಲ್ಲೇ 25 ಎಕರೆ ಜಾಗದಲ್ಲಿ 108 ಅಡಿಯ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಿ ಪ್ರಧಾನಿ ಮೋದಿ ಅವರು ನ. 11 ರಂದು ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ಎಲ್ಲಾ ಸಮುದಾಯದವರು ಭಾಗವಹಿಸಬೇಕು ಎಂದರು.
ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಸಲಹೆ ಕೇಳಿ ಚಿಕ್ಕಬಳ್ಳಾಪುರದ ಶಾಖಾ ಮಠಕ್ಕೆ ಬಂದಿದ್ದರು. ಆಗ ಬೇಸಿಕ್ ಸೈನ್ಸ್ ಬಗ್ಗೆ ಗಮನಸೆಳೆದಿದ್ದೆ. ತಕ್ಷಣ 250 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ತೆಗೆದಿಟ್ಟರು. ಕೆರೆ ಜೀರ್ಣೋದ್ಧಾರ ಮಾಡಿದ್ದಲ್ಲಿ 20 ಸಾವಿರ ಒಕ್ಕಲಿಗ ಯುವಕರು ಕೃಷಿಯನ್ನೇ ಅವಲಂಬಿಸಿ ಊರಲ್ಲೇ ಇರುತ್ತಾರೆ ಎಂದು ಹೇಳಿದಾಗ ಕೆರೆ ಅಭಿವೃದ್ಧಿ ಕೂಡ ಕೆಲವೇ ದಿನಗಳಲ್ಲಿ ಯಡಿಯೂರಪ್ಪನವರು ಮಾಡಿದ್ದರು. ಈ ರೀತಿ ಅನೇಕ ಅನುದಾನಗಳನ್ನು ಒಕ್ಕಲಿಗ ಸಮುದಾಯಕ್ಕೆ ನೀಡುತ್ತಾ ಬಂದಿದ್ದಾರೆ. ಅವರನ್ನು ಸಮಾಜದ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಶ್ರೀ ಪ್ರಸನ್ನಾನಂದನಾಥ ಸ್ವಾಮೀಜಿ ಮಾತನಾಡಿ, ಸಮುದಾಯ ಭವನಕ್ಕೆ ಸಂಸದ ಬಿ.ವೈ. ರಾಘವೇಂದ್ರ 5 ಕೋಟಿ ರೂ. ಅನುದಾನ ನೀಡಿದ್ದಾರೆ. ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದಾರೆ. ಮಠದ ಸೇವೆಯಲ್ಲಿ ನಿರಂತರ ಭಾಗಿಯಾಗಿ ಎಲ್ಲಾ ಸಮಾಜಕ್ಕೆ ಪ್ರೀತಿ ಪಾತ್ರರಾಗಿದ್ದಾರೆ. ದಾನ ಮಾತ್ರ ಶಾಶ್ವತ. ಹೆಸರು ಉಳಿಯಬೇಕಾದರೆ ದಾನ ಮಾಡಬೇಕು. ಸಮುದಾಯ ಭವನದ ಕಾಮಗಾರಿ ವೇಗವಾಗಿ ಸಾಗಲು ಸಮಾಜದ ಎಲ್ಲರೂ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿ ಜೀವರಾಜ್, ಸಂಸದ ಬಿ.ವೈ. ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಅಶೋಕ್ ನಾಯ್ಕ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ, ಮೇಯರ್ ಶಿವಕುಮಾರ್, ಪವಿತ್ರಾ ರಾಮಯ್ಯ, ಬಿ.ಎ. ರಮೇಶ್ ಹೆಗ್ಡೆ, ಸುವರ್ಣಾ ಶಂಕರ್, ಯಮುನಾ ರಂಗೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಕಾಂತ್, ಚೇತನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್, ಹೆಚ್.ಎಸ್. ಸುಂದರೇಶ್ ಮೊದಲಾದವರಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.