ಶಿವಮೊಗ್ಗ: ರೈತರಿಗೆ ಮಾರಕವಾಗಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನ ಕೈಬಿಡಬೇಕು:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರ ಪ್ರತಿಭಟನೆ
ಶಿವಮೊಗ್ಗ: ರೈತರಿಗೆ ಮಾರಕವಾಗಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರ ಉದ್ಯೋಗ ಸೃಷ್ಠಿಯ ನೆಪದಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಾಗೂ ಶ್ರೀಮಂತರಿಗೆ ಧಾರೆ ಎರೆಯಲು ನಡೆಸುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಕೈಬಿಡಬೇಕು. ಕೇವಲ ರೈತರ ಫಲವತ್ತಾದ ಜಮೀನು ಮಾತ್ರವಲ್ಲದೇ, ನೀರು, ವಿದ್ಯುತ್ ಅನ್ನು ಕೂಡ ಬಂಡವಾಳ ಹೂಡಿಕೆದಾರರಿಗೆ ನೀಡಲಾಗುತ್ತಿದೆ ಎಂದು ದೂರಿದರು.
ನ. 2 ರಿಂದ 4 ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಹಿಂದೆಯೂ ಇಂತಹ ಸಮಾವೇಶಗಳು ನಡೆದಿದ್ದವು. ಸಾಮಾನ್ಯವಾಗಿ ಚುನಾವಣೆಗಳು ಹತ್ತಿರವಿರುವ ಸಂದರ್ಭದಲ್ಲಿ ಇಂತಹ ಸಮಾವೇಶಗಳು ನಡೆಯುತ್ತವೆ. ಜನರಲ್ಲಿ ಭ್ರಮೆ ಹುಟ್ಟಿಸುವ ಉದ್ದೇಶದಿಂದ ಸುಳ್ಳು ಪ್ರಚಾರವನ್ನು ಸರ್ಕಾರ ಮಾಡುತ್ತಿದೆ. ನಮ್ಮ ರಾಜ್ಯದ ಯುವಕ, ಯುವತಿಯರಿಗೆ ಇದರಿಂದ ಯಾವ ಉದ್ಯೋಗವೂ ಸಿಗುವುದಿಲ್ಲ ಎಂದು ದೂರಿದರು.
ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ಇದರ ಹಿಂದೆ ಇದೆ. ಈಗಾಗಲೇ ಸರ್ಕಾರದ ಕೈಗಾರಿಕಾ ಸಚಿವರು, ಉನ್ನತ ಅಧಿಕಾರಿಗಳು ದೇಶ ದೇಶಗಳ ಸುತ್ತಿ ನಮ್ಮ ಹತ್ತಿರ ಸಾಕಷ್ಟು ಭೂಮಿ ಇದೆ. ಅದನ್ನು ನಿಮಗೆ ನೀಡುತ್ತೇವೆ ಎಂದು ಕಾರ್ಪೊರೇಟ್ ಕಂಪನಿಗಳ ಮುಂದೆ ಕೈಕಟ್ಟಿ ನಿಂತಿದ್ದಾರೆ. ಹೂಡಿಕೆಗಾಗಿ ಒಂದು ರೀತಿಯ ಸ್ಪರ್ಧೆಯೇ ಏರ್ಪಟ್ಟಿದೆ. ಕಾರಣ ಸರ್ಕಾರದ ದಾರಾಳ ಗುಣ. ಭೂಮಿ, ನೀರು, ವಿದ್ಯುತ್ ಅನ್ನು ಉಚಿತವಾಗಿ ಇಲ್ಲವೇ ಅತ್ಯಂತ ಕಡಿಮೆ ದರದಲ್ಲಿ ನೀಡಿ ರೈತರಿಗೆ ಆಮಿಷ ತೋರಿಸಿ ಶಾಶ್ವತವಾಗಿ ಕೃಷಿಯಿಂದ ಹಿಂದೆ ಸರಿಯುವಂತೆ ಮಾಡುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.
ಕಳೆದ 10 ವರ್ಷಗಳಲ್ಲಿ ಎಷ್ಟು ಉದ್ಯಮಗಳು ಬಂದಿವೆ. ಎಷ್ಟು ಭೂಮಿಯನ್ನು ಸರ್ಕಾರ ಅವರಿಗೆ ನೀಡಿದೆ. ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ. ಯಾವ ಉದ್ಯಮಗಳು ಆರಂಭವಾಗಿವೆ ಎಂಬ ಅಂಕಿ ಅಂಶಗಳ ಶ್ವೇತ ಪ್ರತವನ್ನು ರಾಜ್ಯ ಸರ್ಕಾರ ಕೂಡಲೇ ಪ್ರಕಟಿಸಲಿ. ಈ ಬಗ್ಗೆ ಜನಾಭಿಪ್ರಾಯ ಮೂಡಿಸಲಿ. ಪಾರದರ್ಶಕತೆ ಇರಲಿ. ಅಲ್ಲಿಯವರೆಗೂ ಇಂತಹ ಸಮಾವೇಶಗಳು ನಡೆಯಕೂಡದು ಎಂದು ಅವರು ಆಗ್ರಹಿಸಿದರು.
ಇದರ ಜೊತೆಗೆ ಕೇಂದ್ರ ಸರ್ಕಾರ ಕುಲಾಂತರಿ ಸಾಸಿವೆಗೆ ಅನುಮತಿ ನೀಡಿರುತ್ತದೆ. ಇದರಿಂದ ಕೃಷಿಯ ಮೇಲೆ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ತಕ್ಷಣವೇ ಈ ಕುಲಾಂತರಿ ಸಾಸಿವೆ ನೀಡಿರುವ ಅನುಮತಿಯನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಸರ್ಕಾರ ಪರಿಶಿಷ್ಟರಿಗೆ 75 ಯುನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಅದೇ ರೀತಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬಕ್ಕೆ 75 ಯುನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಈಶಣ್ಣ, ಎಸ್. ಶಿವಮೂರ್ತಿ, ಜಿ.ಎನ್. ಪಂಚಾಕ್ಷರಿ, ಸಿ. ಚಂದ್ರಪ್ಪ, ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ, ಇ.ಬಿ. ಜಗದೀಶ್ ಮುಂತಾದವರಿದ್ದರು.

Leave a Comment