*ನೆಮ್ಮದಿ ಜೀವನ ನಡೆಸಲು ಕಾನೂನಿನ ತಿಳುವಳಿಕೆ ಅತಿ ಅಗತ್ಯ : ನ್ಯಾ.ರಾಜಣ್ಣ ಸಂಕಣ್ಣನವರ್*

ಶಿವಮೊಗ್ಗ ನವೆಂಬರ್ 24 : 
   ಮನುಷ್ಯ ನೆಮ್ಮದಿಯಿಂದ ಜೀವನ ನಡೆಸಲು ಕಾನೂನಿನ ಅರಿವು ಅತಿ ಅವಶ್ಯಕ. ಆದ್ದರಿಂದ ನಾವೆಲ್ಲರೂ ಕಾನೂನಿನ ತಿಳುವಳಿಕೆಯನ್ನು ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ತಿಳಿಸಿದರು.
     ವೈದ್ಯಕೀಯ ವಿದ್ಯಾರ್ಥಿಗಳು, ಓಬಿಜಿ ವಿಭಾಗದ ವೈದ್ಯರು ಮತ್ತು ಇತರೆ ಸಿಬ್ಬಂದಿಗಳಿಗೆ ಇಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅನಾಟಮಿ ಲೆಕ್ಚರ್ ಹಾಲ್‍ನಲ್ಲಿ ‘ಬಾಲ ನ್ಯಾಯ ಕಾಯ್ದೆ’ಯಡಿ ಬರುವ ಕಾನೂನು ಬದ್ದ ದತ್ತು ಪ್ರಕ್ರಿಯೆ ಹಾಗೂ ಕಾರಾ(Central Adoption Resource Authority) ಮಾರ್ಗಸೂಚಿ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಭವಿಷ್ಯದ ವೈದ್ಯರಾದ ನೀವುಗಳು ಕಾನೂನಿನ ಜ್ಞಾನ ಪಡೆಯಬೇಕು. ದಿನನಿತ್ಯದ ಕಾನೂನಿನೊಂದಿಗೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನುಗಳು ಹಾಗೂ ಮಕ್ಕಳನ್ನು ಕಾನೂನುಬದ್ದವಾಗಿ ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಕುರಿತು ತಿಳಿದುಕೊಳ್ಳಬೇಕು. ದತ್ತಕ ಪ್ರಕ್ರಿಯೆ ಮತ್ತು ಇದಕ್ಕೆ ಸಂಬಂಧಿಸಿದ ಕಾಯ್ದೆ, ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿದ್ದು ಈ ತರಬೇತಿ ಕಾರ್ಯಕ್ರಮದ ಮೂಲಕ ಮಾಹಿತಿ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕೆಂದರು.
     ಯೂನಿಸೆಫ್ ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳದ ಕಾರ್ಯಕ್ರಮ ಸಂಯೋಜಕ ಹರೀಶ್ ಜೋಗಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ‘ಬಾಲ ನ್ಯಾಯ ಕಾಯ್ದೆ’ಯಡಿ ಬರುವ ಕಾನೂನು ಬದ್ದ ದತ್ತು ಪ್ರಕ್ರಿಯೆ ಹಾಗೂ ಕಾರಾ ಮಾರ್ಗಸೂಚಿ ಕುರಿತು ಪಿಪಿಟಿ ಪ್ರದರ್ಶನ ಮೂಲಕ ವಿವರಿಸಿ, ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ತೆಗೆದುಕೊಂಡಲ್ಲಿ ಅದು ನಿಮ್ಮ ಸ್ವತ್ತು ಆಗುವುದಿಲ್ಲ. ಕಾನೂನಿನ್ವಯ ನಿಯಮಾಸಾರ ದತ್ತು ತೆಗೆದುಕೊಳ್ಳಬೇಕು. ದತ್ತು ಪಡೆಯಲಿಚ್ಚಿಸುವವರು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬೇಕು. ಆರ್ಥಿಕವಾಗಿ ಮಗುವನ್ನು ಸಾಕುವ ಸಾಮಥ್ರ್ಯ ಹೊಂದಿರಬೇಕು. 
    ಯಾವುದೇ ಅನಾಥ, ಪರಿತ್ಯಜಿಸಲ್ಪಟ್ಟ ಅಥವಾ ಒಪ್ಪಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯವರು ‘ದತ್ತು ಮುಕ್ತ’ ಎಂದು ಘೋಷಿಸಿ ಆದೇಶ ನೀಡಿದ ನಂತರ ಈ ಮಕ್ಕಳು ದತ್ತಕಕ್ಕೆ ಅರ್ಹರಾಗುತ್ತಾರೆ.
     ದತ್ತು ಪಡೆಯುವ ಸಂಭವನೀಯ ಪೋಷಕ ವಯಸ್ಸು, ಸ್ವದೇಶಿ ದತ್ತು ಪ್ರಕ್ರಿಯೆಗೆ ದತ್ತು ಪೋಷಕರು ಭರಿಸಬೇಕಾದ ವೆಚ್ಚ, ಕಾನೂನು ಬದ್ದ ದತ್ತು ಪ್ರಕ್ರಿಯೆಯ ನಿಯಮಗಳು, ಸೆಂಟ್ರಲ್ ಅಡಾಪ್ಶನ್ ರಿಸೋರ್ಸ್ ಅಥಾರಿಟಿಯ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು.
         ಈ ಕಾರ್ಯಕ್ರಮವನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು.
       ಕಾರ್ಯಕ್ರಮದಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ವಿರೂಪಾಕ್ಷಪ್ಪ ವಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ.ಜಿ.ಎಂ, ಸಿಮ್ಸ್ ಪ್ರಾಂಶುಪಾಲ ಡಾ.ಮಂಜುನಾಥ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಶಿವಮೊಗ್ಗ ತಾಲ್ಲೂಕು ಸಿಡಿಪಿಓ ಚಂದ್ರಪ್ಪ ಪಾಲ್ಗೊಂಡಿದ್ದರು. ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕ ಗಣೇಶ್ 
ಆರ್ ಲಿಂಗನಗೌಡ್ರು ಸ್ವಾಗತಿಸಿದರು. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.